ಶಿವಮೊಗ್ಗದಲ್ಲಿ ಜೆಡಿಎಸ್‌ನಿಂದ ರೈತ ಸ್ವಾಭಿಮಾನ ಯಾತ್ರೆ

KannadaprabhaNewsNetwork |  
Published : Oct 13, 2026, 02:00 AM IST
ಶಿವಮೊಗ್ಗದಲ್ಲಿ ಜೆಡಿಎಸ್ ನಿಂದ ರೈತ ಸ್ವಾಭಿಮಾನ ಯಾತ್ರೆ | Kannada Prabha

ಸಾರಾಂಶ

ಶಿವಮೊಗ್ಗದಲ್ಲಿ ಜೆಡಿಎಸ್‌ನಿಂದ ರೈತ ಸ್ವಾಭಿಮಾನ ಯಾತ್ರೆ ಹಿನ್ನೆಲೆ ಸೋಮವಾರ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗದಲ್ಲಿ ಜೆಡಿಎಸ್‌ನಿಂದ ರೈತ ಸ್ವಾಭಿಮಾನ ಯಾತ್ರೆ ಹಿನ್ನೆಲೆ ಸೋಮವಾರ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಿದರು.

ಶಿವಮೊಗ್ಗ ತಾಲೂಕಿನ ಯಡವಾಲ ಗ್ರಾಮದಲ್ಲಿ ರಾಗಿ-ಮೆಕ್ಕೆಜೋಳ ಹೊಲಕ್ಕೆ ಭೇಟಿ ನೀಡಿ, ಒಣಗಿದ ಬೆಳೆ ವೀಕ್ಷಿಸಿದರು. ಈ ವೇಳೆ ನಿಖಿಲ್ ಕುಮಾರಸ್ವಾಮಿ ಮುಂದೆ ಅನ್ನದಾತರು ಅಳಲು ತೋಡಿಕೊಂಡರು.

ಬೆಳೆ ಪರಿಹಾರ ಹೆಚ್ಚಳಕ್ಕೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ, ಪರಿಹಾರ ಹೆಚ್ಚಿಸದಿದ್ದರೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ನಿಖಿಲ್ ಕುಮಾರಸ್ವಾಮಿಗೆ ಶಾಸಕಿ ಶಾರದಾ ಪೂರ್ಯಾನಾಯ್ಕ, ಎಂಎಲ್ಸಿ ಭೋಜೆಗೌಡ, ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಸಾಥ್ ನೀಡಿದರು.

ಜೂನ್, ಜುಲೈ ತಿಂಗಳಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಮುಂಗಾರು ನಂಬಿ 55 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ, ಕೆಲವು ಕಡೆ ಬಿತ್ತನೆಯಾಗಿದೆ. ಕೆಲವು ಕಡೆ ಆಗಿಲ್ಲ. ರೈತ ಸ್ವಾಭಿಮಾನ ಯಾತ್ರೆ ಹೆಸರಲ್ಲಿ ರೈತರ ಹೊಲ-ಗದ್ದೆಗೆ ಭೇಟಿ ನೀಡಲಾಗುತ್ತಿದ್ದು, ರೈತರ ವಾಸ್ತವ ಸ್ಥಿತಿ ಅರ್ಥ ಮಾಡಿಕೊಳ್ಳುವ ಕೆಲಸ ಜೆಡಿಎಸ್‌ನಿಂದ ಮಾಡುತ್ತಿದ್ದೇವೆ ಎಂದು ಹೇಳಿದರು.ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಹೊಲ-ಗದ್ದೆಗೆ ಭೇಟಿ ನೀಡಿದ್ದೇನೆ. ಮೆಕ್ಕೆಜೋಳ, ರಾಗಿ ಎಲ್ಲಾ ಬೆಳೆ ಸಂಪೂರ್ಣ ಒಣಗಿ ಹೋಗಿದೆ‌. ರೈತರು ಭೀಕರ ಬರದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರಾಜ್ಯದ ಹಲವು ಭಾಗದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದರು.

ಮೈಕ್ರೋ ಫೈನಾನ್ಸ್ ಕಾಟ, ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಎಂದಿಗೂ ರೈತರ ಜೊತೆ ನಿಂತ ಪಕ್ಷ. ನಮ್ಮ ಶಾಸಕರು ಇರಲಿ, ಇಲ್ಲದಿರಲಿ ರೈತರ ಜೊತೆ ಜೆಡಿಎಸ್ ಇರುತ್ತೆ. ಒಂದು ಚೀಲ ಗೊಬ್ಬರ, ಬೀಜ ಸಹ ಬರಲ್ಲ. ಅಷ್ಟು ಪರಿಹಾರ ಸರ್ಕಾರ ನೀಡುತ್ತಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ. ರಾಜ್ಯ ಸರ್ಕಾರ ಮೇವು ಬ್ಯಾಂಕ್‌ಗಳನ್ನು ತೆರೆಯಬೇಕು ಎಂದರು.

ಗ್ಯಾರಂಟಿಗಳ ಹೆಸರಲ್ಲಿ ಹಲವು ನೀರಾವರಿ ಯೋಜನೆಗಳು ಅಲ್ಲೇ ನಿಂತಿವೆ. ರಾಜ್ಯ ಸರ್ಕಾರಕ್ಕೆ ಜೆಡಿಎಸ್‌ನಿಂದ ರೈತರ ಪರವಾಗಿ ಒತ್ತಾಯ ಮಾಡುತ್ತೇವೆ. ಎಕರೆಗೆ 25-30 ಸಾವಿರ ರೈತರು ಖರ್ಚು ಮಾಡಿದ್ದಾರೆ. ರೈತರ ಖರ್ಚು ನೀಗಿಸಲು ಎಕರೆಗೆ ಕನಿಷ್ಟ 25 ಸಾವಿರ ರು. ಪರಿಹಾರ ನೀಡಬೇಕು. ಜಂಟಿ ಸಮೀಕ್ಷೆಯನ್ನು ಕೂಡ ಸರ್ಕಾರ ಮಾಡಿಲ್ಲ. ರಾಜ್ಯ ಸರ್ಕಾರ ರೈತರ ಬಗ್ಗೆ ಕನಿಷ್ಠ ಅನುಕಂಪ ಇಟ್ಟುಕೊಳ್ಳಬೇಕು ಎಂದರು.

ಬೆಳೆ ಪರಿಹಾರ 2500 ಕೋಡ್ತೇವೆ ಅಂತಾರೆ, ಯಾವ ಆಧಾರದಲ್ಲಿ, ಯಾವ ಲೆಕ್ಕದಲ್ಲಿ ಕೊಡ್ತಾರೆ. ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ ಶೇ. 4.84 ಎನ್ಡಿಅರ್‌ಎಫ್ ಪರಿಹಾರ ಬರ್ತಿತ್ತು. ಎನ್‌ಡಿಎ ಸರ್ಕಾರ ಬಂದ ನಂತರ 11 ವರ್ಷದಲ್ಲಿ ಶೇ. 16ಕ್ಕೆ ಏರಿಕೆಯಾಗಿದೆ.‌ ಕೇಂದ್ರದ ಕಡೆ ಬೆರಳು ತೋರಿಸುವುದು ಬೇಡ. ರಾಜ್ಯ ಸರ್ಕಾರದ ಲೋಪ ಇಟ್ಕೊಂಡು ಬೇರೆ ಕಡೆ ಬೆರಳು ತೋರಿಸಿ, ಎಸ್ಕೇಪ್ ಆಗೋದ್ದನ್ನ ಬಿಡಿ‌ ಎಂದು ಕುಟುಕಿದರು.

234 ತಾಲೂಕನ್ನು ಕೂಡ ಬರಪೀಡಿತ ಎಂದು ಘೋಷಣೆ ಮಾಡಬೇಕು. ಇಡೀ ರಾಜ್ಯವನ್ನು ಬರಪೀಡಿತ ಎಂದು ಘೋಷಣೆ ಮಾಡಲಿ. ಕುಮಾರಸ್ವಾಮಿ ಸಿಎಂ ಇದ್ದಾಗ 28 ಸಾವಿರ ಕೋಟಿ ರು. ರೈತರ ಸಾಲಮನ್ನಾ ಮಾಡಿದ್ರು. ಆಗ ಕೇಂದ್ರ ಸರ್ಕಾರದ ಸಹಾಯ ಕೇಳಲಿಲ್ಲ. ಏಕಾಏಕಿ ತೀರ್ಮಾನ ತೆಗೆದುಕೊಂಡು ಸಾಲ ಮನ್ನಾ ಮಾಡಿದ್ರು,‌ ಆ ರೀತಿಯ ದೃಢ ನಿಲುವು, ತೀರ್ಮಾನ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಚರ್ಚೆಯಾಗ್ತಿದೆ. ಇದಕ್ಕೆ ಸರ್ಕಾರ ಉತ್ತರ ಕೊಡಲಿ ಎಂದು‌ ಹರಿಹಾಯ್ದರು.

ಎಷ್ಟೋ ಬಸ್‌ಗಳು ಇವತ್ತು ಹೆಡ್ಲೈಟ್ ಇಲ್ಲದೇ ಮೊಬೈಲ್ ಲೈಟ್‌ನಲ್ಲಿ ಓಡಾಡುತ್ತಿವೆ. ಟೈರ್ ಚೇಂಜ್ ಮಾಡಲು, ಸ್ಯಾಲರಿ ಕೊಡಲು ಹಣ ಉಳಿಸಿಕೊಂಡಿಲ್ಲ. ಈ ರೀತಿಯ ಆಡಳಿತವನ್ನು ನಡೆಸುತ್ತಿದ್ದಾರೆ. ಕಳೆದ 3 ವರ್ಷದಲ್ಲಿ ರಾಜ್ಯದಲ್ಲಿ 3500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ರೈತರು ಜಾಗೃತರಾಗಿ ಆಕ್ರೋಶ ಭರಿತರಾಗಿದ್ದಾರೆ. ವಿಧಾನಸೌಧದ ಬಳಿ ಹೋರಾಟಕ್ಕೂ ರೈತರು ಸಿದ್ಧತೆ ಮಾಡುತ್ತಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಸಂಕಷ್ಟಕ್ಕೆ ಸ್ಪಂದಿಸಿ; ಕೃಷಿ ಸಾಲ ಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ
ಮೋಹನ್ ಲಿಂಬಿಕಾಯಿ ಗೆಲುವಿಗೆ ಶ್ರಮಿಸುತ್ತೇನೆ: ಡಾ. ಆರ್.ಎಂ. ಕುಬೇರಪ್ಪ