ಹಿಂದೂಗಳ ನರಮೇಧ ಖಂಡಿಸಿ ಜೆಡಿಎಸ್, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಪಂಜಿನ ಮೆರವಣಿಗೆ

KannadaprabhaNewsNetwork | Published : Apr 28, 2025 12:46 AM

ಸಾರಾಂಶ

ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದವರೆಗೆ ಪಂಜಿನ ಮೆರವಣಿಗೆ ನಡೆಸಿದ ನೂರಾರು ಮಂದಿ ಕಾರ್ಯಕರ್ತರು ಪಾಕಿಸ್ತಾನದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕಾಶ್ಮೀರದ ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಿ ಹತ್ಯೆಗೈದಿರುವ ಉಗ್ರಗಾಮಿಗಳನ್ನು ಸದೆಬಡಿಯುವಂತೆ ಆಗ್ರಹಿಸಿ ಮಾಜಿ ಶಾಸಕ ಸುರೇಶ್‌ಗೌಡ ನೇತೃತ್ವದ ಜೆಡಿಎಸ್, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.

ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದವರೆಗೆ ಪಂಜಿನ ಮೆರವಣಿಗೆ ನಡೆಸಿದ ನೂರಾರು ಮಂದಿ ಕಾರ್ಯಕರ್ತರು ಪಾಕಿಸ್ತಾನದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರ, ಭಾರತ ದೇಶದ ಸಿಂಧೂರ ಎಂಬ ಘೋಷಣೆ ಮೊಳಗಿಸಿದರು.

ಪಟ್ಟಣದ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಟಿ.ಮರಿಯಪ್ಪ ವೃತ್ತದಲ್ಲಿ ಕೆಲಕಾಲ ಮಾವನ ಸರಪಳಿ ನಿರ್ಮಿಸಿ ಉಗ್ರರ ದಾಳಿಯಿಂದ ಮೃತಪಟ್ಟ ಭಾರತೀಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ದಾಳಿ ನಡೆಸಿ ೨೬ ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿರುವುದು ಇಡೀ ದೇಶಕ್ಕೆ ಸಹಿಸಲಾರದ ನೋವಿನ ಸಂಗತಿ. ಕೃತ್ಯ ಎಸಗಿರುವ ಉಗ್ರಗಾಮಿಗಳನ್ನು ಮಟ್ಟಹಾಕಬೇಕು ಎಂದು ಆಗ್ರಹಿಸಿದರು.

ಸದಾ ಶಾಂತಿ ಬಯಸುವ ನಮ್ಮ ದೇಶದ ವಿರುದ್ಧ ನೆರೆಯ ಶತ್ರು ದೇಶವಾಗಿರುವ ಪಾಕಿಸ್ತಾನ ಹಲವಾರು ವರ್ಷಗಳಿಂದ ಪಿತೂರಿ ನಡೆಸಿ ಹಿಂದೂ ಧರ್ಮವನ್ನೇ ಗುರಿಯಾಗಿಟ್ಟುಕೊಂಡು ಅಮಾಯಕರನ್ನು ಹತ್ಯೆ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಅತ್ಯಂತ ಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡ ಜಾತಿ ಧರ್ಮ ಪಕ್ಷವನ್ನು ಮರೆತು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಪೂರ್ಣಪ್ರಮಾಣದಲ್ಲಿ ಸಹಕಾರ ನೀಡಬೇಕಿದೆ ಎಂದು ಹೇಳಿದರು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕೃತ್ಯ ನಡೆಸಿರುವ ಮತ್ತು ಅದಕ್ಕೆ ಸಹಕಾರ ಕೊಟ್ಟಿರುವ ಪಾಕಿಸ್ತಾನಿ ಉಗ್ರಗಾಮಿಗಳನ್ನು ಕೇಂದ್ರ ಸರ್ಕಾರ ಸಾಕ್ಷಿ ಸಮೇತ ಹೊರಹಾಕಿದೆ. ವಿಶ್ವದ ಇತರೆ ದೇಶಗಳೂ ಕೂಡ ನಮ್ಮ ದೇಶದ ಪರವಾಗಿ ನಿಂತು ಪಾಕಿಸ್ತಾನವನ್ನು ಮಟ್ಟಹಾಕಲು ಮುಂದಾಗಿವೆ. ಇಂತಹ ಸಂದರ್ಭದಲ್ಲಿ ದೇಶದೊಳಗೆ ಹಾನಿ ಮಾಡಲು ಯತ್ನಿಸುವ ಯಾವುದೇ ವ್ಯಕ್ತಿಗಳನ್ನು ತಡೆಯುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಿದೆ ಎಂದರು.

ನೆರೆ ರಾಷ್ಟ್ರಗಳಿಂದ ಬಂದು ನಮ್ಮ ದೇಶದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸುವವರನ್ನು ಬಗ್ಗುಬಡಿಯುವ ಜೊತೆಗೆ ಸೇಡಿಗೆ ಸೇಡು ತೀರಿಸಿಕೊಂಡು ತಕ್ಕ ಉತ್ತರ ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು, ಈ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡದೆ ಪಕ್ಷಭೇದ ಮರೆತು ಉಗ್ರಗಾಮಿಗಳನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಒಗ್ಗಟ್ಟಿನಿಂದ ದೇಶದ ಸ್ವಾಭಿಮಾನವನ್ನು ಉಳಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಸುರೇಶ್‌ಗೌಡರ ಪುತ್ರಿ ಧನ್ಯತಾ, ಬಜರಂಗದಳದ ಜಿಲ್ಲಾ ಸಂಚಾಲಕ ಪುಣ್ಯಕೋಟಿ ರಘು, ರಾಜ್ಯ ಬಿಜೆಪಿ ಒಬಿಸಿ ಘಟಕದ ಕಾರ್ಯಕಾರಿಣಿ ಸಮಿತಿ ಸದಸ್ಯ ನರಸಿಂಹಮೂರ್ತಿಜೀಗೌಡ, ಜೆಡಿಎಸ್ ಮುಖಂಡ ಕೆಂಪೇಗೌಡ ಸೇರಿದಂತೆ ಜೆಡಿಎಸ್, ಬಿಜೆಪಿ, ವಿಶ್ವಹಿಂದೂ ಪರಿಷತ್, ಬಜರಂಗದಳದ ಮುನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.

Share this article