ಜೆಡಿಎಸ್ ಜನತಾ ಸಮಾವೇಶ ಐತಿಹಾಸಿಕ ಯಶಸ್ಸು ಕಂಡಿದೆ

KannadaprabhaNewsNetwork |  
Published : Jan 29, 2026, 01:45 AM IST
 ಮುಂದಿನ ಚುನಾವಣೆಗಳಿಗೆ ಅನುಕೂಲ ವಾತಾವರಣ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ, ಪಾಲಿಕೆ ಸದಸ್ಯ  ಎಸ್.ಹೆಚ್. ವಾಸುದೇವ್ ಇತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರ ನೇತೃತ್ವದಲ್ಲಿ ನಡೆದ ಜೆಡಿಎಸ್ ಜನತಾ ಸಮಾವೇಶವು ನಿರೀಕ್ಷೆಗೂ ಮೀರಿ ಐತಿಹಾಸಿಕ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಮುಖಂಡರ ಟೀಕೆಗೆ ಶಾಸಕ ಎಚ್.ಪಿ. ಸ್ವರೂಪ್ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಕಾಂಗ್ರೆಸ್‌ನವರಿಗೆ ತಿರುಗೇಟು ನೀಡಿದರು. ಗ್ರಾಮಸ್ಥರು ಸಮಾವೇಶಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಕಾರ್ಯಕರ್ತರು ಮತ್ತು ಅಭಿಮಾನಿಗಳ ಭಾರೀ ಭಾಗವಹಿಸುವಿಕೆಯಿಂದ ನಮ್ಮ ಉದ್ದೇಶ ಈಡೇರಿದೆ. ಇದರಿಂದ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಜೆಡಿಎಸ್ ಬೆಳ್ಳಿಹಬ್ಬದ ಅಂಗವಾಗಿ ನಗರದಲ್ಲಿ ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರ ನೇತೃತ್ವದಲ್ಲಿ ನಡೆದ ಜೆಡಿಎಸ್ ಜನತಾ ಸಮಾವೇಶವು ನಿರೀಕ್ಷೆಗೂ ಮೀರಿ ಐತಿಹಾಸಿಕ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಮುಖಂಡರ ಟೀಕೆಗೆ ಶಾಸಕ ಎಚ್.ಪಿ. ಸ್ವರೂಪ್ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಕಾಂಗ್ರೆಸ್‌ನವರಿಗೆ ತಿರುಗೇಟು ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಬೂವನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸಮಾವೇಶಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಕಾರ್ಯಕರ್ತರು ಮತ್ತು ಅಭಿಮಾನಿಗಳ ಭಾರೀ ಭಾಗವಹಿಸುವಿಕೆಯಿಂದ ನಮ್ಮ ಉದ್ದೇಶ ಈಡೇರಿದೆ. ಇದರಿಂದ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರೂ ಭಾಗವಹಿಸಿದ್ದು ಸಂತಸ ತಂದಿದೆ ಎಂದರು. ಎಂಎಲ್‌ಸಿ ಮಾಜಿ ಸದಸ್ಯ ಗೋಪಾಲಸ್ವಾಮಿ ಅವರು ತಮ್ಮ ಹತಾಶೆ ಮಾತುಗಳಾಗಿದ್ದು, ಸಚಿವರು ಜಿಲ್ಲೆಗೆ ಬಂದಾಗ ಅವರ ಹಿಂದೆ ಬಾಲ ಹಿಡಿದು ತಿರುಗಾಡುವುದನ್ನು ಬಿಟ್ಟು, ಜನರಿಗಾಗಿ ಅಭಿವೃದ್ಧಿ ಕೆಲಸ ಮಾಡಿಸಲಿ ಎಂದು ಕುಟುಕಿದರು. ಚುನಾವಣೆ ವೇಳೆ ಗೋಪಾಲಸ್ವಾಮಿ ಅವರು ಎಂಎಲ್‌ಸಿಯಾಗಲು ಯಾರ್ಯಾರಿಗೆ ಕರೆ ಮಾಡಿದ್ದರು ಎಂಬುದನ್ನು ಬಹಿರಂಗಪಡಿಸಲಿ. ಅವಧಿ ಮುಗಿದ ನಂತರ ಶಂಕರ್ ಅವರನ್ನು ಕಣಕ್ಕಿಳಿಸಿ ತಾವು ಸುಮ್ಮನಾದರು. ಅವರಿಗೂ ಜವಾಬ್ದಾರಿ ಇದೆ. ಸಚಿವರನ್ನು ಹಿಡಿದು ಕೆಲಸ ಮಾಡಿಸಲಿ, ಬಾಲ ಹಿಡಿದು ಸುತ್ತಾಡುವುದರಿಂದ ಜಿಲ್ಲೆಗೆ ಏನೂ ಲಾಭವಾಗುವುದಿಲ್ಲ ಎಂದು ಸಲಹೆ ನೀಡಿದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವೂ ಅಸಮಾಧಾನ ಹೊರಹಾಕಿದ ಶಾಸಕರು, ಹಾಸನ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ. ರಸ್ತೆಗಳು ಸಂಪೂರ್ಣ ಹಾಳಾಗಿವೆ. ನಾಡಕಚೇರಿಗಳಲ್ಲಿ ರೈತರ ಕೆಲಸಗಳು ಆಗುತ್ತಿಲ್ಲ. ಬಜೆಟ್ ಕುರಿತು ಯಾವುದೇ ಸಭೆ ನಡೆಸಿಲ್ಲ ಎಂದು ಆರೋಪಿಸಿದರು. ಗಣರಾಜ್ಯೋತ್ಸವದಂದು ಜಿಲ್ಲೆಗೆ ಸಂದೇಶ ನೀಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸರ್ಕಾರವನ್ನು ಬೈಯ್ಯುವುದಲ್ಲೇ ಸಮಯ ಕಳೆಯುತ್ತಾರೆ. ನಾನು ಅಧ್ಯಕ್ಷತೆ ವಹಿಸಿದ್ದ ಕಾರಣ ಕಾರ್ಯಕ್ರಮ ಬಿಟ್ಟು ಹೋಗದೇ ಅನಿವಾರ್ಯವಾಗಿ ಕುಳಿತೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಸಮಾವೇಶ ನಮ್ಮ ಮನೆಯ ಕಾರ್ಯಕ್ರಮ:

ಜೆಡಿಎಸ್‌ ಜನತಾ ಸಮಾವೇಶ ನಮ್ಮ ಮನೆಯ, ನಮ್ಮ ಪಕ್ಷದ ಕಾರ್ಯಕ್ರಮ. ಯಾರು ನಿಲ್ಲಬೇಕು, ಯಾರು ಕೂಳಿತುಕೊಳ್ಳಬೇಕು ಎಂಬುದು ಮುಖ್ಯವಲ್ಲ. ಯಾರು ಹೈಲೈಟ್ ಆದರೂ ನಮ್ಮವರೇ ಎಂದು ಲೇವಡಿ ಮಾಡಿದರು. ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕೀಯ ಇದೆ. ಮುಖ್ಯಮಂತ್ರಿ ಅವರ ಮಗ ಏನಾಗಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಶಿವಲಿಂಗೇಗೌಡ ಕುರಿತು ಹೇಳಿಕೆ:

ಶಿವಲಿಂಗೇಗೌಡರು ಈಗ ಕಾಂಗ್ರೆಸ್‌ಗೆ ಹೊಸ ಪೂಜಾರಿಯಾಗಿದ್ದಾರೆ. ಆದರೆ ಅವರು ಮಂತ್ರಿಯಾಗುವುದಿಲ್ಲ. ಏಕೆಂದರೆ ಕಾಂಗ್ರೆಸ್‌ನಲ್ಲಿ ಹಿರಿಯ ಶಾಸಕರು ಹಲವರು ಇದ್ದಾರೆ ಎಂದು ಹೇಳಿದರು. ಬಿಳಿ ಚೌಡಯ್ಯ ಅವರನ್ನು ಜೆಡಿಎಸ್‌ನಲ್ಲಿ ಎಂಎಲ್‌ಸಿ ಮಾಡಲಿಲ್ಲ ಎಂದು ಪಕ್ಷಾಂತರ ಮಾಡಿದವರು ಈಗ ಕನಿಷ್ಠ ಸ್ವಾಭಿಮಾನ ಇದ್ದರೆ, ಕುರುಬ ಸಮಾಜದ ಬಿಳಿ ಚೌಡಯ್ಯ ಅವರಿಗೆ ಕೆಎಚ್‌ಬಿ (ಗೃಹ ಮಂಡಳಿ) ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡಲಿ ಎಂದು ಸವಾಲು ಹಾಕಿದರು. ನಾವು ಕಾಂಗ್ರೆಸ್ ನಾಯಕರನ್ನು ಬೈಯ್ಯಲು ಸಮಾವೇಶ ಮಾಡಿಲ್ಲ. ನಮ್ಮನ್ನು ಮುಗಿಸುತ್ತೇವೆ ಎಂದು ಸರ್ಕಾರದ ಅಧಿಕಾರ ದುರುಪಯೋಗ ಮಾಡಿಕೊಂಡು ಎರಡು ಸಮಾವೇಶ ಮಾಡಿದ್ದು ಅವರೇ ಎಂದು ಕುಟುಕಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಮಾತನಾಡಿ, ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬದ ಅಂಗವಾಗಿ ನಗರದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ನೇತೃತ್ವದಲ್ಲಿ ನಡೆದ ಜೆಡಿಎಸ್ ಜನತಾ ಸಮಾವೇಶವು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಸುಮಾರು 2.50 ಲಕ್ಷಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗವಹಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಯುವಕರು ಆಗಮಿಸಿದ್ದುದು ವಿಶೇಷವಾಗಿದೆ. ಇದು ಪಕ್ಷದ ಶಕ್ತಿಯನ್ನು ತೋರಿಸಿದೆ ಎಂದರು. ಸಮಾವೇಶ ಯಶಸ್ವಿಗೆ ಶ್ರಮಿಸಿದ ನಿಖಿಲ್ ಕುಮಾರಸ್ವಾಮಿ, ಡಾ. ಸೂರಜ್ ರೇವಣ್ಣ, ಜಿಲ್ಲೆಯ ಎಲ್ಲಾ ಶಾಸಕರು, ಕಾರ್ಯಕರ್ತರು, ಡಿಸಿಸಿ ಬ್ಯಾಂಕ್, ಕೆಎಂಎಫ್, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಧನ್ಯವಾದ ಹಾಗೂ ಕೃತಜ್ಞತೆ ಸಲ್ಲಿಸಿದರು. ಇಡೀ ಸಮಾವೇಶ ಅಚ್ಚುಕಟ್ಟಾಗಿ, ಶಾಂತಿಯುತವಾಗಿ ನಡೆಯಿತು. ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ಈ ಮೂಲಕ ಎಲ್ಲರೂ ದೇವೇಗೌಡರ ಆಶಯವನ್ನು ಸಾಕಾರಗೊಳಿಸಿದ್ದಾರೆ ಎಂದು ಹೇಳಿದರು.ಮುಂದಿನ ಚುನಾವಣೆಗಳಿಗೆ ಅನುಕೂಲ ವಾತಾವರಣ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ, ಪಾಲಿಕೆ ಸದಸ್ಯ ಎಸ್.ಹೆಚ್. ವಾಸುದೇವ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪ ನೋಂದಣಾಧಿಕಾರಿಗೆ ಧಮ್ಕಿ ಹಾಕಿದ್ದ ಆರೋಪಿ ಸೆರೆ
ಪ್ರಾಂಶುಪಾಲರ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶವಿದೆ