ಹಾಸನ: ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಹೇಮಾವತಿ ಜಲಾಶಯದ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ವೇಳೆ ಮುಖ್ಯ ಇಂಜಿನಿಯರ್ ಅರುಣ್ ವರನ್ನು ತರಾಟೆಗೆ ತೆಗೆದುಕೊಂಡ ಎಚ್.ಡಿ ರೇವಣ್ಣ, ನೀರಾವರಿ ಸಲಹಾ ಸಮಿತಿ ಸಭೆ ಕರೆಯದೆ ನೀರು ಏಕೆ ಬಿಟ್ರಿ ಎಂದು ಪ್ರಶ್ನಿಸಿದರು. ನಾನು ಜಲಾಶಯ ಅಚ್ಚುಕಟ್ಟು ಪ್ರದೇಶವಿರೋ ಕ್ಷೇತ್ರದ ಒಬ್ಬ ಪ್ರಮುಖ ಶಾಸಕ. ನನ್ನನ್ನ ಸೌಜನ್ಯಕ್ಕೂ ಇಲ್ಲಿಯವರೆಗೆ ನೀರು ಬಿಡಲು ಸಲಹೆ ಕೇಳಿಲ್ಲ. ನನ್ನ ಕ್ಷೇತ್ರಕ್ಕೆ ಇಲ್ಲಿಯವರೆಗೂ ಸರಿಯಾಗಿ ನೀರು ಬಿಟ್ಟಿಲ್ಲ. ಕುಡಿಯುವುದಕ್ಕೂ ನೀರಲ್ಲದೆ ಜನ ಗೋಳಾಡುತ್ತಿದ್ದಾರೆ. ನೀರನ್ನ ನಂಬಿ ಬೆಳೆ ಬೆಳೆದ ರೈತರು ನಷ್ಟ ಅನುಭವಿಸುವ ಸ್ಥಿತಿಗೆ ಹೋಗಿದ್ದಾರೆ. ಇನ್ನು ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದೀರಿ ಎಂದು ಆಕ್ರೋಶವ್ಯಕ್ತಪಡಿಸಿದರು. ತಮ್ಮ ತಮ್ಮ ಕುರ್ಚಿ ಉಳಿಸಿಕೊಳ್ಳಲು ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರ, ನಮ್ಮ ರೈತರ ಬೆಳಗಳಿಗೆ ನೀರು ಕೊಡಲು ಸತಾಯಿಸುತ್ತಿದೆ ಎಂದು ವಿರೋಧಿ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಇದರಿಂದ ಒಬ್ಬ ಶಾಸಕನ ಹಕ್ಕುಚ್ಯುತಿ ಆಗಿದೆ. ಯಾರೂ ಹೇಳೋರು, ಕೇಳೋರು ಇಲ್ಲಾ, ರಾಜ್ಯದಲ್ಲಿ ಸರ್ಕಾರ ಇದೆಯಾ ಎಂಬ ಅನುಮಾನ ಮೂಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಮುಖಂಡರಾದ ಕಾರ್ಲೇ ಇಂದ್ರೇಶ್ ಇತರರು ಉಪಸ್ಥಿತರಿದ್ದರು.