ರಾಜ್ಯ ಸರ್ಕಾರದ ದುರಾಡಳಿತ ಖಂಡಿಸಿ ಜೆಡಿಎಸ್‌ ಪ್ರತಿಭಟನೆ

KannadaprabhaNewsNetwork | Published : Jul 1, 2025 12:47 AM

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಜನರಿಗೆ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಲಂಚಗುಳಿತನ, ಭ್ರಷ್ಟಾಚಾರ ಹೆಚ್ಚಾಗಿರುವುದನ್ನು ಹಾಗೂ ಆಡಳಿತದ ವೈಫಲ್ಯ ಖಂಡಿಸಿ ರಾಜ್ಯ ಜೆಡಿಎಸ್ ಪಕ್ಷದಿಂದ ಮಾಜಿ ಸಚಿವ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರಿಗೆ ಮನವಿ ಸಲ್ಲಿಸಿದರು. ಮಳೆಯಿಂದಾಗಿ ಹಾನಿಯಾಗಿರುವ ಮನೆಗಳಿಗೆ ಪ್ರತಿ ಮನೆಗೆ 5 ಲಕ್ಷ ರು.ನಂತೆ ಪರಿಹಾರ ಮೊತ್ತವನ್ನು ಕೂಡಲೇ ಸರ್ಕಾರ ಘೋಷಿಸಲು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಜನರಿಗೆ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಲಂಚಗುಳಿತನ, ಭ್ರಷ್ಟಾಚಾರ ಹೆಚ್ಚಾಗಿರುವುದನ್ನು ಹಾಗೂ ಆಡಳಿತದ ವೈಫಲ್ಯ ಖಂಡಿಸಿ ರಾಜ್ಯ ಜೆಡಿಎಸ್ ಪಕ್ಷದಿಂದ ಮಾಜಿ ಸಚಿವ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರಿಗೆ ಮನವಿ ಸಲ್ಲಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಜೆಡಿಎಸ್ ಬೃಹತ್ ಪ್ರತಿಭಟನೆ ಎನ್.ಆರ್‌. ವೃತ್ತಕ್ಕೆ ತೆರಳಿ ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಂತರ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಇದೇ ವೇಳೆ ಶಾಸಕ ಎಚ್‌.ಡಿ. ರೇವಣ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಜನತೆಗೆ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದ್ದು, ಹಗರಣಗಳಲ್ಲಿ ಮುಳುಗಿದೆ. ಆರ್‌.ಸಿ.ಬಿ. ವಿಜಯೋತ್ಸವದ ವೇಳೆ ಸರ್ಕಾರದ ವೈಫಲ್ಯದಿಂದ ಹನ್ನೊಂದು ಮಂದಿ ಮರಣ ಹೊಂದಿದ್ದಾರೆ. ಈ ಜಿಲ್ಲೆಯೊಳಗೆ ಪೊಲೀಸರ ಹಾವಳಿ ಜಾಸ್ತಿಯಾಗಿದೆ. ಬೆಳಿಗ್ಗೆ ಎದ್ದರೆ ಲೂಟಿ, ಕೇಳೋರು ಯಾರೂ ಇಲ್ವಾ? ಲಿಂಗಾಯಿತರ ಮನೆಗೆ ನುಗ್ಗಿ ಹೊಡೆಯಲು ಹೋಗಿದ್ದಾರೆ, ಅವರಿಗೆ ರಕ್ಷಣೆ ಇಲ್ವಾ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ವಿರುದ್ಧ ಕೆಂಡಾಮಂಡಲವಾದರು. ಇಲ್ಲಿಗೆ ಕರೆಸಿ ಅವರನ್ನು, ಇಲ್ಲ ಅಂದ್ರೆ ಅಲ್ಲಿಗೆ ಬರ್ತೀವಿ. ಬೇಕಾದರೆ ನಮ್ಮನ್ನು ಒಳಗೆ ಹಾಕಲಿ ನೋಡೋಣ! ಸ್ವಲ್ಪನಾದರೂ ಗೌರವ ಇರಬೇಕು. ಒಂದು ಹೆಣ್ಣು ಎಂದು ಗೌರವ ಕೊಟ್ಟು ಇಲ್ಲಿವರೆಗೆ ತಡ್ಕೊಂಡು ಸುಮ್ಮನಿದ್ವಿ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪರಿಹಾರ ಘೋಷಿಸಿ:ಹಾಸನ ಜಿಲ್ಲೆಯಲ್ಲಿ ೨೦೨೫-೨೬ನೇ ಮುಂಗಾರು ಹಂಗಾಮಿನಲ್ಲಿ ಸುಮಾರು ೧.೦೦ ಲಕ್ಷ ಹೆಕ್ಟೇರ್‌ ಜಮೀನಿನಲ್ಲಿ ಮೆಕ್ಕೆಜೋಳವನ್ನು ಬೆಳೆಯುತ್ತಿದ್ದು, ಈಗಾಗಲೇ ಸುಮಾರು ೭೭೫೦೦ ಹೆಕ್ಟೇರ್ ಜಮೀನಿನಲ್ಲಿ ಮೆಕ್ಕೆಜೋಳವನ್ನು ಬಿತ್ತನೆ ಮಾಡಲಾಗಿದ್ದು, ಬಿಳಿರೋಗ ಮತ್ತಿತರ ರೋಗ ತಗುಲಿ ಶೇಕಡಾ ೮೦ರಷ್ಟು ಬೆಳೆ ಹಾನಿಯಾಗಿರುತ್ತದೆ. ಅಲ್ಲದೇ, ಇದೇ ರೀತಿ, ಭತ್ತವನ್ನು ೩೫೫೦೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಇದುವರೆಗೆ ಕೇವಲ ಶೇಕಡಾ ೦.೦೩ ಮಾತ್ರ ಬೆಳೆದಿದ್ದು, ರಾಗಿಯನ್ನು ಸುಮಾರು ೭೯೫೦೦ ಹೆಕ್ಟೇರ್ ಜಮೀನಿನಲ್ಲಿ ಬೆಳೆಯಲಾಗುತ್ತಿದ್ದು, ಕೇವಲ ೧೫೩೫ ಹೆಕ್ಟೇರ್ ಜಮೀನಿನಲ್ಲಿ ಮಾತ್ರ ಬೆಳೆಯಲಾಗಿರುತ್ತದೆ ಎಂದರು. ಪ್ರಸಕ್ತ ಸಾಲಿನಲ್ಲಿ ಹಾಸನ ಜಿಲ್ಲೆಯಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ, ಅಂಗನವಾಡಿ ಮತ್ತಿತರ ಸರ್ಕಾರಿ ಕಟ್ಟಡಗಳು ಹಾಗೂ ಮನೆಗಳು ಬಿದ್ದುಹೋಗಿದ್ದು, ಶಾಲೆ, ಅಂಗನವಾಡಿ ಮತ್ತಿತರ ಸರ್ಕಾರಿ ಕಟ್ಟಡಗಳ ದುರಸ್ತಿಗೆ ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಅಡಿಯಲ್ಲಿ ಕೂಡಲೇ ಅನುದಾನವನ್ನು ಬಿಡುಗಡೆಗೊಳಿಸಲು ಹಾಗೂ ಮಳೆಯಿಂದಾಗಿ ಹಾನಿಯಾಗಿರುವ ಮನೆಗಳಿಗೆ ಪ್ರತಿ ಮನೆಗೆ 5 ಲಕ್ಷ ರು.ನಂತೆ ಪರಿಹಾರ ಮೊತ್ತವನ್ನು ಕೂಡಲೇ ಸರ್ಕಾರ ಘೋಷಿಸಲು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಜಮೀರ್ ಅಹ್ಮದ್ ವಿರುದ್ಧ ಆಕ್ರೋಶ:ಮಾಜಿ ಸಚಿವ ಎ. ಮಂಜು ಮಾತನಾಡಿ, ಸಾರ್ವಜನಿಕರಿಗೆ ಅನ್ಯಾಯ ಆಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ೨೫ ಸಾವಿರದಿಂದ ೨೮ ಸಾವಿರ ಮನೆಗಳನ್ನು ಬಡವರಿಗೆ ಕೊಡ್ತೀನಿ ಎಂದು ಹೇಳಿ ಏಜೆಂಟ್ ಮೂಲಕ ೧೦ ಸಾವಿರದವರೆಗೂ ಹಣ ಪಡೆಯಲಾಗುತ್ತಿದೆ. ರಾಜೀವಗಾಂಧಿ ವಸತಿ ನಿಗಮದ ವತಿಯಿಂದ ಫಲಾನುಭವಿಗಳಿಗೆ, ಮನೆಗಳ ಹಂಚಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರೇ ನೇರವಾಗಿ ವಸತಿ ಸಚಿವರಾದ ಜಮೀರ್ ಅಹ್ಮದ್ ವಿರುದ್ಧ ಆಪಾದನೆ ಮಾಡಿರುತ್ತಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ರಾಜ್ಯ ಸರ್ಕಾರದ ಕಳೆದ ಎರಡು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ವಂಚಿಸುತ್ತಿರುವುದಾಗಿ ಆರೋಪಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಹೊತ್ತಿರುವ ಜಮೀರ್ ಅಹ್ಮದ್‌ ಖಾನ್‌ರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸುತ್ತೇವೆ ಎಂದರು. ಅತೀವ ಭ್ರಷ್ಟಾಚಾರ ಆಡಳಿತ ವೈಫಲ್ಯದಲ್ಲಿ ತೊಡಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ವಿಫಲವಾಗಿರುವುದರಿಂದ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇವೆ ಎಂದರು. ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್, ಶಾಸಕ ಸಿ.ಎನ್. ಬಾಲಕೃಷ್ಣ, ಶಾಸಕ ಎಚ್.ಪಿ. ಸ್ವರೂಪ್, ಹಾಗೂ ಮುಖಂಡ ಎನ್.ಆರ್. ಸಂತೋಷ್ ಮಾತನಾಡಿ, ಮಳೆಗೆ ಮನೆ ಬಿದ್ದು, ನಷ್ಟ, ಕಾಡಾನೆ ಸಮಸ್ಯೆ, ಬೆಳೆ ನಷ್ಟ ಇತರೆ ನಾನಾ ಸಮಸ್ಯೆಗಳಿದ್ದರೂ ಕಾಂಗ್ರೆಸ್ ಗಮಹರಿಸುತ್ತಿಲ್ಲ. ಒಟ್ಟಾರೆ ೫೮.೨೪ ಹೆಕ್ಟೇರ್‌ ಪ್ರದೇಶದಲ್ಲಿ ೧೮೩ ರೈತರ ಬೆಳೆಗಳು ಹಾನಿಯಾಗಿದ್ದು, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ಒಟ್ಟು ರು. ೧೨.೨೫೭ ಲಕ್ಷಗಳ ಪರಿಹಾರ ಕೋರಿ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಇದುವರೆಗೂ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಇನ್ನೂ ಹೆಚ್ಚಿನ ಬೆಳೆಗಳು ಹಾಳಾಗಿರುವುದರಿಂದ ನೈಜವಾಗೇ ಬೆಳೆ ಸಮೀಕ್ಷೆ ನಡೆಸಿ ಜಿಲ್ಲೆಯ ರೈತರಿಗೆ ಸೂಕ್ತ ಬೆಳೆ ಪರಿಹಾರ ದೊರಕಿಸಿಕೊಡಲು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಅನುದಾನಕ್ಕೆ ಒತ್ತಾಯ:

ಜಿಲ್ಲೆಯಲ್ಲಿ ನಾವು ಕೆಟ್ಟ ಪರಿಸ್ಥಿತಿಯಲ್ಲಿ ಇದ್ದೇವೆ. ಒಂದು ಕಡೆ ಅತೀವೃಷ್ಠಿ, ಮಳೆಯಿಂದ ಗುಡ್ಡ ಕುಸಿತ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಅಲ್ಲದೇ ಪ್ರಸಕ್ತ ಸಾಲಿನಲ್ಲಿ ಹಾಸನ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಶೇಕಡಾ ೮೫ರಷ್ಟು ಮಳೆಯಾಗಿರುವುದರಿಂದ ಹಾಸನ, ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರು, ಹೊಳೆನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ರಸ್ತೆಗಳು ಮತ್ತು ಸೇತುವೆಗಳು ಹಾಳಾಗಿದ್ದು, ಕೆರೆಕಟ್ಟೆಗಳು ಒಡೆದುಹೋಗಿ ಕೋಟ್ಯಂತರ ರುಪಾಯಿಗಳ ಸರ್ಕಾರಿ ಆಸ್ತಿ-ಪಾಸ್ತಿಗಳು ಹಾನಿಯಾಗಿದ್ದು, ಕೂಡಲೇ ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಅಡಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಲು ಒತ್ತಾಯಿಸುತ್ತೇವೆ ಎಂದರು. ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ, ನಗರಸಭೆ ಉಪಾಧ್ಯಕ್ಷೆ ಹೇಮಲತಾ ಕಮಾಲ್ ಕುಮಾರ್, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜು, ಅನ್ಸರ್‌, ಮಾಧ್ಯಮ ಜಿಲ್ಲಾ ವಕ್ತಾರ ರಘು ಹೊಂಗೆರೆ, ನಗರಸಭೆ ಸದಸ್ಯ ರಫೀಕ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.