ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವವರೆಗೂ ಹೋರಾಟ: ಕೆ.ಟಿ. ಶಾಂತಕುಮಾರ್
ಕನ್ನಡಪ್ರಭ ವಾರ್ತೆ ತಿಪಟೂರುನಗರದ ಕುಡಿಯುವ ನೀರಿನ ಸಮಸ್ಯೆಗೆ ಇಲ್ಲಿನ ನಗರಸಭೆ ಪೌರಾಯುಕ್ತರು ಹಾಗೂ ಶಾಸಕರೇ ನೇರ ಕಾರಣರಾಗಿದ್ದು, ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವವರೆಗೂ ಹೋರಾಟ ನಡೆಯಲಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಎಚ್ಚರಿಕೆ ನೀಡಿದರು.
ತಿಪಟೂರು ನಗರಕ್ಕೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಸೋಮವಾರ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬೇಸಿಗೆಯ ಆರಂಭದಲ್ಲಿಯೇ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದ್ದರೂ ಕುಡಿಯುವ ನೀರಿನ ಸಮಸ್ಯೆಗೆ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕ್ರಮಕೈಗೊಂಡಿಲ್ಲ. ಹೇಮಾವತಿ ನೀರನ್ನು ನಿಲ್ಲಿಸಲಾಗಿದ್ದು, ಕಳೆದ ಐದಾರೂ ತಿಂಗಳಿನಿಂದಲೂ ಶಾಸಕರು ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡುತ್ತೇವೆಂದು ದಿನ ದೂಡುತ್ತಾ ಬಂದಿದ್ದು ಬಿಟ್ಟರೆ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ನೊಣವಿನಕೆರೆಯಿಂದ ನೀರು ತರುತ್ತೇನೆ, ಟ್ಯಾಂಕರ್ ಮೂಲಕ ಕೊಡುತ್ತೇನೆ ಮತ್ತು ಹೊಸ ಬೋರ್‌ವೆಲ್ ಕೊರೆಸುತ್ತೇನೆಂದು ಸಬೂಬು ಹೇಳುತ್ತಿದ್ದಾರಷ್ಟೆ, ಆದರೆ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. ನೀರಿಗಾಗಿ ಜನರು ಟ್ಯಾಂಕರ್ ಮೊರೆ ಹೋಗಿದ್ದು, ಕೂಲಿ ಕೆಲಸ ಮಾಡುವವರು ನೀರನ್ನು ಹಣಕೊಟ್ಟು ಕೊಂಡುಕೊಳ್ಳಲು ಸಾಧ್ಯವೇ? ಒಂದು ಲಕ್ಷ ಜನರು ವಾಸಿಸುವ ನಗರದಲ್ಲಿ ನೀರು ಇಲ್ಲದ್ದಿದ್ದರೆ ಜೀವನ ನಡೆಸುವುದಾದರೂ ಹೇಗೆ? ಶಾಸಕರು ಹಾಗೂ ನಗರಸಭೆ ಪೌರಾಯುಕ್ತರ ಬೇಜವಾಬ್ದಾರಿ ನಡೆಯಿಂದ ಜನರು ದುಪ್ಪಟ್ಟು ಹಣ ನೀಡಿ ನೀರು ಕೊಂಡುಕೊಳ್ಳುವ ಸ್ಥಿತಿ ಬಂದಿದೆ ಎಂದು ಹೇಳಿದರು.ತಾಲೂಕಿನಲ್ಲಿ ಎಲ್ಲಿಯೂ ಚೆಕ್‌ಡ್ಯಾಂ ನಿಮಾಣವಾಗಿಲ್ಲ, ಎತ್ತಿನಹೊಳೆ ಯೋಜನೆಗೆ ಸರ್ಕಾರ ಹಣದ ಹೊಳೆಯನ್ನೇ ಹರಿಸುತ್ತಿದ್ದು, ಈ ಯೋಜನೆಯಿಂದಲೂ ನಮ್ಮ ತಾಲೂಕಿಗೆ ಹನಿ ನೀರು ಸಿಗುವುದಿಲ್ಲ. ಇಲ್ಲಿನ ಶಾಸಕರಿಗೆ ರೈತರು ಹಾಗೂ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದ ಪರಿಣಾಮ ಈ ಬಾರಿಯ ಬಜೆಟ್‌ನಲ್ಲೂ ತಾಲೂಕಿಗೆ ಯಾವ ಅನುದಾನವೂ ಸಿಗಲಿಲ್ಲ. ತಾಲೂಕಿನ ಅಭಿವೃದ್ಧಿ ಶೂನ್ಯವಾಗಿದ್ದು, ಜನರು ಸಮಸ್ಯೆಗಳ ನಡುವೆ ಜೀವನ ನಡೆಸುವಂತಾಗಿದೆ ಎಂದು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಮುಂದೆ ಪ್ರತಿಭಟನೆ ನಡೆಸಿದ ನಂತರ ಸಿಂಗ್ರಿ ನಂಜಪ್ಪ ವೃತ್ತದ ಬಳಿ ಕಾರ್ಯಕರ್ತರೊಂದಿಗೆ ಕೆ.ಟಿ. ಶಾಂತಕುಮಾರ್ ಸುಡು ಬಿಸಿಲಿನಲ್ಲಿಯೇ ಧರಣಿ ನಡೆಸಿದರು. ಪೌರಾಯುಕ್ತರು ಸ್ಥಳಕ್ಕೆ ಬರುವವರೆಗೂ ಜಾಗಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.ನಂತರ ತಹಸೀಲ್ದಾರ್ ಪವನ್ ಕುಮಾರ್ ಸ್ಥಳಕ್ಕೆ ಬಂದು ಪೌರಾಯುಕ್ತರು ತುಮಕೂರಿನ ಮೀಟಿಂಗ್‌ಗೆ ತೆರಳಿದ್ದಾರೆ, ಅವರ ಬದಲು ನಾವು ಮನವಿ ಪಡೆಯುತ್ತೇವೆಂದು ಹೇಳಿದರೂ ಶಾಂತಕುಮಾರ್ ಬಗ್ಗಲಿಲ್ಲ. ಆಗ ಸ್ವತಃ ತಹಸೀಲ್ದಾರ್ ಪೌರಾಯುಕ್ತರಿಗೆ ದೂರವಾಣಿ ಕರೆ ಮಾಡಿ ಕೊಟ್ಟ ನಂತರ ಪೌರಾಯುಕ್ತರೊಂದಿಗೆ ಮಾತನಾಡಿ, ಮಾ.೨೦ರವರೆಗೆ ನಿಮಗೆ ಕಾಲಾವಕಾಶ ನೀಡುತ್ತೇವೆ, ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಸದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಶಾಂತಕುಮಾರ್ ಹೇಳಿದರು. ಅದಕ್ಕೆ ಪೌರಾಯುಕ್ತರು ಅಷ್ಟರೊಳಗೆ ನೀರಿನ ವ್ಯವಸ್ಥೆ ಕಲ್ಪಿಸುತ್ತೇವೆಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ನಗರಸಭೆ ಮಾಜಿ ಸದಸ್ಯ ಪ್ರಸನ್ನಕುಮಾರ್, ಜೆಡಿಎಸ್ ಮುಖಂಡ ಎಂ.ಎಸ್. ಶಿವಸ್ವಾಮಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ನಟರಾಜು ಗುರುಗದಹಳ್ಳಿ, ಉಪಾಧ್ಯಕ್ಷ ಬಸವರಾಜು, ನಗರ ಯುವ ಘಟಕದ ಅಧ್ಯಕ್ಷ ಜಿ.ಎಲ್. ಸುದರ್ಶನ್, ಅಲ್ಪಸಂಖ್ಯಾತ ಯುವ ಘಟಕದ ಅಧ್ಯಕ್ಷ ಇಮ್ರಾನ್, ಮುಖಂಡರಾದ ನೇತ್ರಾನಂದ, ಹಳೇಪಾಳ್ಯ ಲೋಕೇಶ್, ಸ್ವಾಮಿ, ರಂಗನಾಥ್, ಮಮತಾ, ಸಂಗೀತಾ, ಚಂದ್ರಣ್ಣ, ರಾಜಶೇಖರ್, ಮಧುಸೂಧನ್ ಸೇರಿದಂತೆ ಮಹಿಳೆಯರು ಭಾಗವಹಿಸಿದ್ದರು.