ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳವಾರವೇ 7ನೇ ತರಗತಿಯ ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳೊಂದಿಗೆ ಹಾಜರಾಗಲು ನೊಟೀಸ್ ನೀಡಲಾಗಿದೆ. ಈ ಪ್ರಕರಣದ ತನಿಖಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಆಕಾಶ್ ಎದುರು ಹಾಜರಾಗಿ ವಿವರಣೆ ನೀಡಿದ್ದಾರೆ. ಕೊಟ್ಟಾರ ಬಳಿಯ ದ.ಕ. ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ದಿನಪೂರ್ತಿ ತನಿಖೆ ನಡೆಸಲಾಗಿದೆ. ತನಿಖೆ ವೇಳೆ ಲಿಖಿತ ಹಾಗೂ ವಿಡಿಯೋ ಮೂಲಕ ಹೇಳಿಕೆ ದಾಖಲಿಸಲಾಗಿದೆ.
ಸಂಜೆ 5 ಗಂಟೆಯೊಳಗೆ ತಾವು ಹೇಳ ಬಯಸುವ ವಿಷಯವನ್ನು ಮೌಖಿಕವಾಗಿ ಅಥವಾ ಲಿಖಿತ ರೂಪದಲ್ಲಿ ನೀಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಆರೋಪಕ್ಕೆ ಸಂಬಂಧಿಸಿ ಸೂಕ್ತ ದಾಖಲೆಗಳೇನಾದರೂ ಇದ್ದಲ್ಲಿ ಅದನ್ನು ಸಲ್ಲಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಕಚೇರಿ ಆವರಣ ನಿರ್ಬಂಧ: ಡಿಡಿಪಿಐ ಕಚೇರಿಯಲ್ಲಿ ಐಎಎಸ್ ಅಧಿಕಾರಿ ವಿಚಾರಣೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಾಧ್ಯಮಗಳಿಗೆ ಡಿಡಿಪಿಐ ಕಚೇರಿ ಪ್ರವೇಶ ನಿರ್ಬಂಧಿಸಿ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ. ಕಚೇರಿ ಆವರಣದೊಳಗೆ ಮೊಬೈಲ್ ಫೋನ್ ಬಳಕೆಯನ್ನೂ ನಿರ್ಬಂಧಿಸಲಾಗಿದೆ. ಕಚೇರಿ ಆವರಣದಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಕೂಡ ಮಾಡುವಂತಿಲ್ಲ. ಜಿ.ಪಂ. ಆವರಣದ ಡಿಡಿಪಿಐ ಕಚೇರಿ ಬಳಿ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಮುಖ್ಯ ದ್ವಾರದ ಬಳಿಯೇ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಶಿಕ್ಷಕರ, ಪೋಷಕರ ವಿಚಾರಣೆ:ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪದ ಬಗ್ಗೆ ಮಧ್ಯಾಹ್ನ ವರೆಗೆ ಶಾಲಾ ಶಿಕ್ಷಕರನ್ನು ವಿಚಾರಣೆ ನಡೆಸಲಾಗಿದೆ. ಬೆಳಗ್ಗಿನಿಂದ ಶಾಲಾ ಶಿಕ್ಷಕರು, ಮುಖ್ಯಶಿಕ್ಷಕಿ, ಶಿಕ್ಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಶಾಲೆಯ ಆಡಳಿತದ ಅಧಿಕೃತರು ಆಗಮಿಸಿ ತನಿಖಾ ಸಮಿತಿ ಎದುರು ಹಾಜರಾಗಿದ್ದಾರೆ.
ಮಂಗಳವಾರ ತನಿಖಾಧಿಕಾರಿಗಳ ಮುಂದೆ ಬೇರೆ ಶಿಕ್ಷಕಿಯರ ವಿಚಾರಣೆ ಮಾತ್ರ ನಡೆದಿದ್ದು, ಶಿಕ್ಷಕಿ ಸಿಸ್ಟರ್ ಪ್ರಭಾ ಅವರ ವಿಚಾರಣೆ ನಡೆಸಿಲ್ಲ. ಸಿಸ್ಟರ್ ಪ್ರಭಾ ಅವರ ಹೇಳಿಕೆಯನ್ನು ಈ ಮೊದಲು ಶಿಕ್ಷಣ ಇಲಾಖೆ ದಾಖಲಿಸಿತ್ತು. ಹೀಗಾಗಿ ಎಲ್ಲರ ವಿಚಾರಣೆ ಮುಗಿದ ಬಳಿಕ ಮತ್ತೆ ಸಿಸ್ಟರ್ ಪ್ರಭಾ ವಿಚಾರಣೆ ಸಾಧ್ಯತೆ ಬಗ್ಗೆ ಹೇಳಲಾಗುತ್ತಿದೆ. ವಿಹಿಂಪ ಮುಖಂಡರ ವಿಚಾರಣೆ:
ಕಳೆದ ಸೋಮವಾರ ಡಿಡಿಪಿಐ ಕಚೇರಿ ಎದುರು ವಿಹಿಂಪ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಆ ವೇಳೆ ಶಿಕ್ಷಕಿ ಪ್ರಭಾ ವಿರುದ್ಧ ಕ್ರಮಕ್ಕೆ ವಿಹಿಂಪ ಮನವಿ ಸಲ್ಲಿಸಿತ್ತು.
ವಿಚಾರಣೆಗೆ ಮುಗಿಸಿ ಹೊರಬಂದ ಶಾಲೆಯ ಹಳೆ ವಿದ್ಯಾರ್ಥಿನಿಯೊಬ್ಬರು ಹಿಂದು ನಿಂದನೆ ಅನೇಕ ವರ್ಷಗಳಿಂದ ನಡೆಯುತ್ತಿರುವ ಬಗ್ಗೆ ತನಿಖಾಧಿಕಾರಿಗೆ ಮಾಹಿತಿ ನೀಡಿದ್ದಾರೆ.
ನಮಗೆ ಈ ತನಿಖೆಯಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ, ನ್ಯಾಯ ಸಿಗದೇ ಇದ್ದರೆ ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ವಿಹಿಂಪ ಮುಖಂಡ ಪುರುಷೋತ್ತಮ್ ಪ್ರತಿಕ್ರಿಯಿಸಿದ್ದಾರೆ.
ವಿಚಾರಣೆಗೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಅವರು, ನಮ್ಮೆಲ್ಲರನ್ನು ಒಟ್ಟಿಗೆ ಕೂರಿಸಿ ವಿಚಾರಣೆ ಮಾಡಿದ್ದಾರೆ. ಆ ಬಳಿಕ ಒಬ್ಬೊಬ್ಬರನ್ನೇ ಕರೆದು ವಿಚಾರಣೆ ನಡೆಸಿದರು. ನಿಮಗೆ ಹೇಗೆ ಈ ವಿಷಯ ಗಮನಕ್ಕೆ ಬಂತು ಎಂದು ಕೇಳಿದ್ದಾರೆ, ಆಗ ನಾನು ಪೋಷಕರು ನಮಗೆ ದೂರು ಕೊಟ್ಟರು ಎಂದೆ. ಅದರಂತೆ ನಮ್ಮ ಮೌಖಿಕ ಮತ್ತು ಲಿಖಿತ ಹೇಳಿಕೆ ದಾಖಲಿಸಿದ್ದಾರೆ ಎಂದರು.