ಕನ್ನಡಪ್ರಭ ವಾರ್ತೆ ಮೈಸೂರು
ವಿಶ್ವವಿಖ್ಯಾತ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯ ಖಾಸಗಿ ದರ್ಬಾರ್ ಹಾಲ್ ನಲ್ಲಿ ರತ್ನಖಚಿತ ಸಿಂಹಾಸನವನ್ನು ಮಂಗಳವಾರ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಜೋಡಿಸಲಾಯಿತು.ದಸರಾ ಮಹೋತ್ಸವ ಅಂಗವಾಗಿ ರಾಜವಂಶಸ್ಥರಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿರಾಜಮಾನರಾಗಿ ಖಾಸಗಿ ದರ್ಬಾರ್ ನಡೆಸುವ ರತ್ನಖಚಿತ ಸಿಂಹಾಸನವನ್ನು ಶಾಸ್ತ್ರೋಕ್ತವಾಗಿ ಜೋಡಣೆ ಮಾಡಿ ಪೂಜೆ ಸಲ್ಲಿಸಲಾಯಿತು.
ಇದುವರೆಗೆ ಅರಮನೆಯ ಸುಪರ್ಧಿನಲ್ಲಿದ್ದ ಸಿಂಹಾಸನವನ್ನು ಪ್ರಮೋದಾದೇವಿ ಒಡೆಯರ್ ಅವರು ಜಿಲ್ಲಾಡಳಿತದ ವಶಕ್ಕೆ ನೀಡಿದರು. ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಂನಿಂದ ಹೊರ ತೆಗೆದು ಅರಮನೆ ಪಂಚಾಂಗದಂತೆ ಸಲ್ಲುವ ಶುಭ ಲಗ್ನದಲ್ಲಿ ಸಿಂಹಾಸನ ಜೋಡಿಸಲಾಯಿತು.ಇದಕ್ಕಾಗಿ ಬೆಳಗ್ಗೆ 7 ರಿಂದಲೇ ವಿವಿಧ ಪೂಜಾ ಕೈಂಕರ್ಯ ಜರುಗಿದವು. ಅರಮನೆ ಪುರೋಹಿತರ ನೇತೃತ್ವದಲ್ಲಿ ನವಗ್ರಹ ಹೋಮ, ಗಣಪತಿ ಹೋಮ, ಶ್ರೀ ಚಾಮುಂಡಿ ಪೂಜೆ ನೆರವೇರಿಸಿ, ನಂತರ ಪೂರ್ಣಾಹುತಿ ನೆರವೇರಿಸಲಾಯಿತು. ಅಂತಿಮವಾಗಿ ಶಾಂತಿ ಪೂಜೆ ಮಾಡಲಾಯಿತು. ಬಳಿಕ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಸಿಂಹಾಸನದ ಜೋಡಣೆ ಕಾರ್ಯ ನಡೆಯಿತು. ನಂತರ ಪಟ್ಟದ ಕುದುರೆ, ಪಟ್ಟದ ಹಸುವನ್ನು ಕಲ್ಯಾಣಮಂಟಪದ ಸಮೀಪ ಇರುವ ಅಂಗಳಕ್ಕೆ ಕರೆತಂದು ಪೂಜಿಸಲಾಯಿತು.
ಜೋಡಣಾ ಕಾರ್ಯಅರಮನೆಯ ನೆಲಮಾಳಿಗೆಯಲ್ಲಿರುವ ಸ್ಟ್ರಾಂಗ್ ರೂಮ್ ತೆರೆದು ಸಿಂಹಾಸನ ಹಾಗೂ ಭದ್ರಾಸನದ ಬಿಡಿ ಭಾಗಗಳನ್ನು ಪ್ರತ್ಯೇಕಿಸಲಾಯಿತು. ಶಸ್ತ್ರಸಜ್ಜಿತ ಪೊಲೀಸರ ಕಣ್ಗಾವಲಿನಲ್ಲಿ ಒಂದೊಂದೆ ಬಿಡಿ ಭಾಗವನ್ನು ದರ್ಬಾರ್ ಹಾಲ್ ಗೆ ತರಲಾಯಿತು. ದರ್ಬಾರ್ ಹಾಲ್ ನಲ್ಲಿ ಅಳವಡಿಸಿರುವ ಸಿಸಿ ಟಿವಿಗಳನ್ನು ಬಟ್ಟೆಗಳಿಂದ ಮುಚ್ಚಿ ಬಳಿಕ ಸುಮಾರು 14 ಬಿಡಿ ಭಾಗಗಳಾಗಿ ವಿಂಗಡಿಸಲಾಗಿದ್ದ ಸಿಂಹಾಸನವನ್ನು ಜೋಡಿಸಿ ಪರದೆ ಬಿಡಲಾಯಿತು.
ದರ್ಬಾರ್ ಹಾಲ್ ನಲ್ಲಿ ಸಿಂಹಾಸನ, ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಜೋಡಿಸಲಾಯಿತು. ಬೆಳಗ್ಗೆ ಶಾಂತಿಹೋಮದೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ಆರಂಭಿಸಿ ಕಳಶ ಸ್ಥಾಪನೆ, ಪವಿತ್ರ ಜಲ ಪ್ರೋಕ್ಷಣೆ, ಹೋಮ ಸೇರಿದಂತೆ ಪೂರ್ವ ನಿರ್ಧರಿತ ಮುಹೂರ್ತದಲ್ಲಿ ಸಿಂಹಾಸನ ಜೋಡಣಾ ಕಾರ್ಯ ಸಂಪನ್ನಗೊಳಿಸಲಾಯಿತು.ಅರಮನೆಯಲ್ಲಿ ನೆರವೇರುತ್ತಿದ್ದ ಸಿಂಹಾಸನಾ ಜೋಡಣಾ ಕಾರ್ಯದಿಂದಾಗಿ ಸಾರ್ವಜನಿಕರಿಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆವರೆಗೆ ಅರಮನೆಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಎಲ್ಲಾ ಕಾರ್ಯಗಳನ್ನು ಪೊಲೀಸರ ಬಿಗಿ ಭದ್ರತೆಯಲ್ಲಿ ಜರುಗಿತು.
ಸಿಂಹಾಸನದ ಬಿಡಿ ಭಾಗಗಳು:ರತ್ನಖಚಿತ ಸಿಂಹಾಸನವನ್ನು 8, ಬೆಳ್ಳಿಯ ಭದ್ರಾಸನವನ್ನು 6 ಬಿಡಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಸಿಂಹಾಸನದ ಬಿಡಿಭಾಗ, ಭದ್ರಾಸನ ಜೋಡಿಸಿದ ಬಳಿಕ, ಸಿಂಹಾಸನಕ್ಕೆ ಉಮಾಪಕ್ಷಿ, ಮುತ್ತಿನ ಜಾಲರಿ, ಮಕರ ತೋರಣ, 25 ಜತೆ ನಗಗಳು, 1 ಜೊತೆ ಚಿನ್ನದ ಕುದುರೆ, ತುರಾಯಿ ಜೋಡಿ, 1 ಜೊತೆ ಚಿನ್ನದ ಕಳಶ ಜೋಡಿಸಿ ಅಲಂಕರಿಸಲಾಯಿತು. ಇದರ ಬಿಡಿ ಭಾಗಗಳನ್ನು ಜೋಡಿಸಿ ಅದಕ್ಕೆ ಸಿಂಹದ ಮುಖವನ್ನು ಅಳವಡಿಸಿದಾಗ ರತ್ನಖಚಿತ ಸಿಂಹಾಸನ ಜೋಡಣೆ ಪೂರ್ಣಗೊಳ್ಳುತ್ತದೆ.
ನವರಾತ್ರಿ ಮೊದಲ ದಿನವಾದ ಸಿಂಹವನ್ನು ಸೆ.22 ರಂದು ಜೋಡಿಸಿ ಪೂರ್ಣಗೊಂಡ ಸಿಂಹಾಸನವನ್ನು ದರ್ಬಾರ್ ಹಾಲ್ ನಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನಂತರ ಖಾಸಗಿ ದರ್ಬಾರ್ ನಡೆಯುತ್ತದೆ. ಅಂದು ಮಧ್ಯಾಹ್ನದವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಆಯುಧಪೂಜೆ ದಿನವಾದ ಅ.1 ರಂದು ಮಧ್ಯಾಹ್ನದವರೆಗೆ ಹಾಗೂ ವಿಜಯದಶಮಿ ದಿನವಾದ ಅ.2 ರಂದು ದಿನವಿಡೀ ಅರಮನೆ ಒಳಗೆ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.ದಸರಾ ಮುಗಿದ ಬಳಿಕವೂ ಕೆಲ ದಿನಗಳು ಸಾರ್ವಜನಿಕ ವೀಕ್ಷಣೆಗೆ ರತ್ನಖಚಿತ ಸಿಂಹಾಸನ ದರ್ಬಾರ್ ಹಾಲ್ ನಲ್ಲಿ ಇರಲಿದ್ದು, ಅ.31 ರಂದು ಸಿಂಹಾಸನ ತೆರವು (ವಿಸರ್ಜನೆ) ಮಾಡಲಾಗುತ್ತದೆ.
ರಾಜವಂಶಸ್ಥರ ವಾಡಿಕೆ:ನವರಾತ್ರಿಗೂ ಮುನ್ನ ಭದ್ರತಾ ಕೊಠಡಿಯಲ್ಲಿರಿಸಿದ್ದ ರತ್ನಖಚಿತ ಸಿಂಹಾಸನದ ಬಿಡಿ ಭಾಗಗಳನ್ನು ಹೊರತಂದು ಅದನ್ನು ಜೋಡಿಸಿ ಸಂಪ್ರದಾಯಬದ್ಧ ಪೂಜೆ ಬಳಿಕ ವಿಜಯದಶಮಿಯ ಎಲ್ಲಾ ಕಾರ್ಯಕ್ರಮಗಳನ್ನು ನೆರವೇರಿಸುವುದು ಮೈಸೂರು ರಾಜವಂಶಸ್ಥರ ವಾಡಿಕೆ.
ದಸರಾ ವೇಳೆ ಖಾಸಗಿ ದರ್ಬಾರ್ ರಾಜಮನೆತನದ ಪ್ರಮುಖ ಧಾರ್ಮಿಕ ಕಾರ್ಯವಾಗಿದ್ದು, ದರ್ಬಾರ್ ಹಾಲ್ ನಲ್ಲಿ ರತ್ನ ಖಚಿತ ಸಿಂಹಾಸನದ ಮೇಲೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ.ಈ ಬಾರಿ ಸೆ.22 ರಿಂದ ಅ.2 ರವರೆಗೆ ಅರಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯ ಜರುಗಲಿದ್ದು, ಪ್ರತಿ ದಿನ ಸಂಜೆ ಖಾಸಗಿ ದರ್ಬಾರ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದಸರಾ ಮಹೋತ್ಸವದ ಆರಂಭಕ್ಕೆ 1 ವಾರ ಬಾಕಿ ಇರುವಾಗಲೇ ಶಾಸ್ತ್ರೋಕ್ತವಾಗಿ ವಿಧಿ ವಿಧಾನದಂತೆ ಸಿಂಹಾಸನ ಜೋಡಿಸಿ ಖಾಸಗಿ ದರ್ಬಾರ್ ಗೆ ಸಿದ್ಧತೆ ಮಾಡಲಾಗಿದೆ.