ಗ್ರಾಹಕರ ಸೋಗಲ್ಲಿ ಜುವೆಲರಿಗೆ ಕನ್ನ

KannadaprabhaNewsNetwork |  
Published : Mar 18, 2024, 01:52 AM IST
Girinagar 1 | Kannada Prabha

ಸಾರಾಂಶ

ಗ್ರಾಹಕರ ಸೋಗಿನಲ್ಲಿ ಆಭರಣ ಅಂಗಡಿಗೆ ಬಂದು ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರಾಹಕರ ಸೋಗಿನಲ್ಲಿ ಆಭರಣ ಅಂಗಡಿಗೆ ಬಂದು ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ತಮಿಳುನಾಡು ಮೂಲದ ಮುಬಾರಕ್‌ (28) ಮತ್ತು ಅಸ್ಗರ್‌ (30) ಬಂಧಿತರು. ಆರೋಪಿಗಳಿಂದ 3.60 ಲಕ್ಷ ರು. ಮೌಲ್ಯದ 60 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ. ಘಟನೆ ವಿವರ: ಕೃಷ್ಣ ಬ್ಯಾಂಕರ್ಸ್‌ ಆ್ಯಂಡ್‌ ಜ್ಯೂವೆಲ್ಲರಿ ಅಂಗಡಿಯಲ್ಲಿ ಮಾ.4ರಂದು ಇಬ್ಬರು ಅಪರಿಚಿತರು ಜುವೆಲರಿ ಅಂಗಡಿಗೆ ಬಂದಿದ್ದು, ಚಿನ್ನದ ಉಂಗುರ ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಸಿಬ್ಬಂದಿ ಓಂಪ್ರಕಾಶ್‌ ವಿವಿಧ ವಿನ್ಯಾಸ ಚಿನ್ನದ ಉಂಗುರಗಳನ್ನು ತೋರಿಸಿದ್ದಾರೆ. ಆದರೂ ಮತ್ತಷ್ಟು ಬೇರೆ ವಿನ್ಯಾಸದ ಉಂಗುರಗಳನ್ನು ತೋರಿಸುವಂತೆ ಕೇಳಿದ್ದಾರೆ.ಇದೇ ಸಮಯಕ್ಕೆ ಇಬ್ಬರು ಮಹಿಳಾ ಗ್ರಾಹಕರು ಅಂಗಡಿಗೆ ಬಂದು ಕಿವಿಯೋಲೆ ತೋರಿಸುವಂತೆ ಓಂ ಪ್ರಕಾಶ್‌ ಅವರನ್ನು ಕೇಳಿದ್ದಾರೆ. ಆಗ ಓಂ ಪ್ರಕಾಶ್‌, ಚಿನ್ನದ ಓಲೆಗಳಿದ್ದ ಬಾಕ್ಸ್‌ ತೆಗೆದು ಆ ಮಹಿಳೆ ಯರಿಗೆ ತೋರಿಸುವಲ್ಲಿ ಮಗ್ನರಾಗಿದ್ದಾರೆ. ಇದೇ ಸಮಯದಲ್ಲಿ ದುಷ್ಕರ್ಮಿಗಳು 3.60 ಲಕ್ಷ ರು. ಮೌಲ್ಯದ ಚಿನ್ನದ 60 ಗ್ರಾಂ ತೂಕದ ಉಂಗುರಗಳನ್ನು ಕದ್ದು ಪರಾರಿಯಾಗಿದ್ದಾರೆ.ಸಂಜೆ 6 ಗಂಟೆಗೆ ಮಾಲೀಕ ಓಮಾರಾಮ್‌ ಜುವೆಲರಿ ಅಂಗಡಿಗೆ ಬಂದಿದ್ದಾರೆ. ಈ ವೇಳೆ ಗ್ರಾಹಕರೊಬ್ಬರು ಬಂದು ಉಂಗುರ ತೋರಿಸುವಂತೆ ಕೇಳಿದ್ದಾರೆ. ಆಗ ಉಂಗುರಗಳು ಇದ್ದ ಬಾಕ್ಸ್ ತೆಗೆದುಕೊಳ್ಳಲು ಡ್ರಾಯರ್‌ ತೆರೆದಾಗ ಬಾಕ್ಸ್‌ ಇಲ್ಲದಿರುವುದು ಕಂಡು ಬಂದಿದೆ. ಈ ಬಗ್ಗೆ ಸಿಬ್ಬಂದಿ ಓಂ ಪ್ರಕಾಶ್‌ನನ್ನು ಕೇಳಿದಾಗ ಅಲ್ಲೇ ಇರುವುದಾಗಿ ಹುಡುಕಿದ್ದಾನೆ. ಆದರೆ, ಅಲ್ಲಿಯೂ ಬಾಕ್ಸ್‌ ಕಂಡು ಬಂದಿಲ್ಲ. ಈ ವೇಳೆ ಅಂಗಡಿಯ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಬಾಕ್ಸ್‌ ಸಹಿತ ಚಿನ್ನದ ಉಂಗುರಗಳನ್ನು ಕದ್ದು ಪರಾರಿಯಾಗಿರುವುದು ಕಂಡು ಬಂದಿದೆ. ಬಳಿಕ ಓಮಾರಾಮ್‌ ಅವರು ಗಿರಿನಗರ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು