ಚುಟುಕು ಸಾಹಿತ್ಯ ಕ್ಷೇತ್ರಕ್ಕೆ ಜಿನದತ್ತ ದೇಸಾಯಿ ಗರುಡಗಂಭ

KannadaprabhaNewsNetwork |  
Published : Apr 05, 2024, 01:00 AM IST
4ಡಿಡಬ್ಲೂಡಿ4ಕರ್ನಾಟಕ ವಿದ್ಯಾವರ್ಧಕ ಸಂಘವು ಕವಿ ಡಾ. ಜಿನದತ್ತ ದೇಸಾಯಿ ದತ್ತಿ ಅಂಗವಾಗಿ ‘ಡಾ. ಜಿನದತ್ತರ ಚುಟುಕುಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು.  | Kannada Prabha

ಸಾರಾಂಶ

ಸಾಹಿತ್ಯ ರಚನೆಯ ಮೂಲಕ ಜನರ ಪ್ರೀತಿಗೆ ಜಿನದತ್ತ ದೇಸಾಯಿ ಹತ್ತಿರವಾದವರು. ಚುಟುಕು ಸಾಹಿತ್ಯ ಕ್ಷೇತ್ರಕ್ಕೆ ಅವರೊಬ್ಬ ಗರುಡಗಂಭವಾಗಿದ್ದಾರೆ.

ಧಾರವಾಡ:

ಸಾಹಿತ್ಯ ರಚನೆಯ ಮೂಲಕ ಜನರ ಪ್ರೀತಿಗೆ ಜಿನದತ್ತ ದೇಸಾಯಿ ಹತ್ತಿರವಾದವರು. ಚುಟುಕು ಸಾಹಿತ್ಯ ಕ್ಷೇತ್ರಕ್ಕೆ ಅವರೊಬ್ಬ ಗರುಡಗಂಭವಾಗಿದ್ದಾರೆ ಎಂದು ಸಾಹಿತಿ ಮೈಸೂರಿನ ಎಂ.ಜಿ.ಆರ್. ಅರಸ್‌ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಕವಿ ಡಾ. ಜಿನದತ್ತ ದೇಸಾಯಿ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಡಾ. ಜಿನದತ್ತರ ಚುಟುಕುಗಳು’ ಪುಸ್ತಕ ಬಿಡುಗಡೆ ಹಾಗೂ ಉಪನ್ಯಾಸದಲ್ಲಿ ಮಾತನಾಡಿದ ಅವರು, ಚುಟುಕು ಸಾಹಿತ್ಯ ನಿತ್ಯದ ಬದುಕಿಗೆ ಜೀವಧ್ವನಿಯಾಗಿದೆ. ಅದು ಸಹೃದಯ ಅಂತರಂಗದ ಹೃದಯವನ್ನು ತಟ್ಟುತ್ತದೆ ಮತ್ತು ಮುಟ್ಟುತ್ತದೆ. ಮೃದುವಾದ ಸ್ಪರ್ಶವನ್ನು ನೀಡುತ್ತದೆ. ಜೀವ ಕಳೆತುಂಬಿದ ಅಪರೂಪದ ವ್ಯಕ್ತಿಗಳಲ್ಲಿ ದೇಸಾಯಿ ಒಬ್ಬರು. ತಮಗೆ ಬಂದ ಎಲ್ಲ ಪ್ರಶಸ್ತಿಗಳ ಮೊತ್ತವನ್ನು ಶಿಕ್ಷಣ ಸಂಸ್ಥೆಗೆ ದಾನ ನೀಡಿದವರು. ಇಂತಹ ಮಹಾನ್ ವ್ಯಕ್ತಿತ್ವಕ್ಕೆ ಮುಂಬರುವ ದಿನಗಳಲ್ಲಿ ‘2023ರ ಚುಟುಕುರತ್ನ ಪ್ರಶಸ್ತಿ’ಯನ್ನ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಡಾ. ಜಿನದತ್ತರ ಕಾವ್ಯದಲ್ಲಿ ಸಮಾಜಮುಖಿ ಚಿಂತನೆ ವಿಷಯ ಕುರಿತು ಮಾತನಾಡಿದ ಹೊನ್ನಾವರದ ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ, ಕಿರಿದರಲ್ಲಿಯೇ ಹಿರಿದಾದ ಅರ್ಥ ಕೊಡುವುದು ಚುಟುಕು ಸಾಹಿತ್ಯ. ಜಿನದತ್ತ ದೇಸಾಯಿ ಅವರು ಬಾಲ್ಯದಿಂದಲೇ ಕಾವ್ಯ ರಚನೆಗೆ ತಮ್ಮನ್ನು ತೊಡಗಿಸಿಕೊಂಡವರು. ವೃತ್ತಿ ಬದುಕಿನಲ್ಲಿ ಹಿಂದೆ ಸರಿದಿದ್ದ ಕಾವ್ಯ ರಚನೆ, ನಿವೃತ್ತಿಯ ನಂತರ ಅಂತರಗಂಗೆಯಾಗಿ ಅವರ ಕಾವ್ಯ ಪ್ರತಿಭೆ ಪ್ರವಹಿಸಿದ್ದುಂಟು. ಪ್ರಕೃತಿ, ಸಾಮಾಜಿಕ ಚಿಂತನೆ, ಸಂವೇದನಾಶೀಲತೆಗಳಿಂದ ಅವರ ಕಾವ್ಯ ಸತ್ವಯುತವಾದದ್ದಾಗಿದೆ. ಕಾವ್ಯ ಬೆಳಕಿನ ಬಿಂಬ. ದೊಡ್ಡದಾದರೆ ಚಂದ್ರ, ಚಿಕ್ಕದಾದರೆ ಚುಕ್ಕೆ. ಇಂತಹ ಕಾವ್ಯಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.

ಅಧ್ಯಕ್ಷತೆ ವಹಿಸಿ ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ಒಂದು ಮಹಾನ್ ಗ್ರಂಥ ಕೊಡಬಹುದಾದ ಶಕ್ತಿಯನ್ನು ಒಂದೊಂದು ಚುಟುಕು ಕೊಡುತ್ತವೆ. ಬೊಗಸೆಯಲ್ಲಿ ಸಮುದ್ರವನ್ನು ಹಿಡಿದಿಟ್ಟ ರೀತಿಯಲ್ಲಿ ಚುಟುಕು ಸಾಹಿತ್ಯ ಅಗಾಧವಾದ ಅರ್ಥವನ್ನು ಒಳಗೊಂಡಿರುತ್ತದೆ. ಜಿನದತ್ತ ದೇಸಾಯಿ ಅವರ ಕಾವ್ಯಗಳನ್ನು ಓದಿದಾಗ ಪ್ರಕೃತಿ ಪ್ರೇಮ, ದಾಂಪತ್ಯ ಪ್ರೇಮ, ನಾಡು-ನುಡಿ ಚಿಂತನೆ, ವೈಜ್ಞಾನಿಕ ಚಿಂತನೆ ಈ ರೀತಿ ಪ್ರಪಂಚದ ಎಲ್ಲ ಅನುಭವಗಳನ್ನು ಕಾವ್ಯಾನುಭವಗಳನ್ನಾಗಿ ಮಾಡಿಕೊಂಡು ಸಾಹಿತ್ಯ ರಚನೆ ಮಾಡಿದ್ದಾರೆ ಎಂದರು.

ಮೈಸೂರಿನ ಕೌಸ್ತುಭ ಮಾಸಪತ್ರಿಕೆಯ ಸಂಪಾದಕಿ ಡಾ. ರತ್ನಾ ಹಾಲಪ್ಪಗೌಡ ಮತ್ತು ಬೆಂಗಳೂರಿನ ಚುಟುಕು ಸಾಹಿತ್ಯ ಪರಿಷತ್ ಕೇಂದ್ರದ ಧರ್ಮದರ್ಶಿ ವೀರಭದ್ರೇಗೌಡ ಮಾತನಾಡಿದರು. ದತ್ತಿದಾನಿ ವರ್ಧಮಾನ ದೇಸಾಯಿ ಇದ್ದರು. ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಪ್ರೊ. ಬಸವರಾಜ ಜಗಜಂಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ಕಾರ್ಯಕ್ರಮ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು. ಮಧುಮತಿ ಸಣಕಲ್ಲ ಪ್ರಾರ್ಥಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ