ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾಲನೆ

KannadaprabhaNewsNetwork |  
Published : Apr 27, 2026, 02:15 AM IST
ಕಂಪ್ಲಿಯಲ್ಲಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಆರ್. ನಟರಾಜ್ ಉದ್ಘಾಟಿಸಿದರು. | Kannada Prabha

ಸಾರಾಂಶ

ತಾಲೂಕಿನಲ್ಲಿ ನ್ಯಾಯ ಸೇವೆಗಳನ್ನು ಇನ್ನಷ್ಟು ಸಮೀಪಕ್ಕೆ ತರಲು ಮಹತ್ವದ ಹೆಜ್ಜೆಯಾಗಿದೆ

ಕಂಪ್ಲಿ: ಪಟ್ಟಣದ ಮಾರುತಿನಗರದಲ್ಲಿ ಭಾನುವಾರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ತಾಲೂಕಿನಲ್ಲಿ ನ್ಯಾಯ ಸೇವೆಗಳನ್ನು ಇನ್ನಷ್ಟು ಸಮೀಪಕ್ಕೆ ತರಲು ಮಹತ್ವದ ಹೆಜ್ಜೆಯಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಆರ್. ನಟರಾಜ್ ಹೇಳಿದರು.

ಪಟ್ಟಣದಲ್ಲಿನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಪ್ರಸ್ತುತ 430 ಸಿವಿಲ್ ಹಾಗೂ 552 ಕ್ರಿಮಿನಲ್ ಪ್ರಕರಣಗಳು ಬಾಕಿ ಇರುವುದನ್ನು ಉಲ್ಲೇಖಿಸಿದ ಅವರು, ನ್ಯಾಯಾಲಯ ಸ್ಥಾಪನೆಯಿಂದ ಜನರಿಗೆ ತಮ್ಮ ಹಕ್ಕುಗಳು ಮತ್ತು ಬಾಧ್ಯತೆಗಳ ಬಗ್ಗೆ ಅರಿವು ಹೆಚ್ಚುತ್ತದೆ. ಕಂಪ್ಲಿಯಲ್ಲಿ ಈಗಾಗಲೇ 63 ಮಂದಿ ವಕೀಲರು ಕಾರ್ಯ ನಿರ್ವಹಿಸುತ್ತಿದ್ದು, ಇಂದಿನ ನ್ಯಾಯಾಲಯ ಕಟ್ಟಡವು ಚಿಕ್ಕದಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಅಗತ್ಯವಾದ ಪ್ರತ್ಯೇಕ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರದಲ್ಲೇ ಸಮರ್ಪಕ ಹಾಗೂ ಸುಸಜ್ಜಿತ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಮಾತನಾಡಿ, ಪಟ್ಟಣದ ಸರ್ವೇ ನಂ.442ಎಯ 3.15 ಎಕರೆ ಪ್ರದೇಶದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಈ ಯೋಜನೆಯಡಿ ನಾಲ್ಕು ನ್ಯಾಯಾಲಯ ಸಭಾಂಗಣಗಳು, ನಾಲ್ಕು ವಸತಿ ಕ್ವಾರ್ಟರ್‌ಗಳು, ಬಾರ್ ಅಸೋಸಿಯೇಷನ್ ಕಚೇರಿ, ಲೇಡೀಸ್ ರೂಮ್ ಹಾಗೂ ಇತರೆ ಕಚೇರಿಗಳನ್ನು ಒಳಗೊಂಡ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳಲಿದೆ. ಮುಂದಿನ ಎರಡು ವರ್ಷಗಳೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.

ನ್ಯಾಯಾಲಯ ಸದಾ ಕ್ರಿಯಾಶೀಲವಾಗಿರಲು ವಕೀಲರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಕಡಿಮೆ ವೆಚ್ಚದಲ್ಲಿ, ಸಕಾಲದಲ್ಲಿ ನ್ಯಾಯ ಒದಗಿಸುವುದು ನ್ಯಾಯಾಂಗದ ಮುಖ್ಯ ಗುರಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಿ.ಜಿ. ಪ್ರಮೋದ್, ಪತ್ನಿ ಆರ್. ಅರ್ಚನಾ ನಟರಾಜ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಸ್. ಇಸ್ಮಾಯಿಲ್ ಜಬೀವುಲ್ಲ, ಬೆಂಗಳೂರಿನ ವಕೀಲರ ಪರಿಷತ್ ಸದಸ್ಯ ಜೆ.ಎಂ. ಅನಿಲಕುಮಾರ್, ಹೊಸಪೇಟೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಗುಜ್ಜಲ ನಾಗರಾಜ್, ಪಿಡಬ್ಲ್ಯೂಡಿ ಕಾರ್ಯಪಾಲಕ ಅಭಿಯಂತರ ಬಿ. ವಿಜಯಭಾಸ್ಕರ್ ಸೇರಿದಂತೆ ಬಳ್ಳಾರಿ, ಸಿರುಗುಪ್ಪ, ಸಂಡೂರು ನ್ಯಾಯಾಲಯಗಳ ನ್ಯಾಯಾಧೀಶರು, ವಕೀಲರ ಬಳಗದ ಗೌರವಾಧ್ಯಕ್ಷ ಕೆ. ಪ್ರಭಾಕರ ರಾವ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2024ರ ಕನಕಗಿರಿ ಉತ್ಸವದ ಸ್ಮರಣಿಕೆ, ಗಂಧದ ಹಾರಗಳಿಗೆ ಧೂಳು
ಮಹಿಳೆಯರನ್ನು ಗೌರವಿಸುವ ಕಾರ್ಯವಾಗಲಿ