ಕನ್ನಡಪ್ರಭ ವಾರ್ತೆ ಬೀದರ್
ಭಾರತದ ವಿವಿಧ ರಾಜ್ಯಗಳ ವಿಶಿಷ್ಟ ಸಂಸ್ಕೃತಿ, ಉಡುಗೆ-ತೊಡುಗೆ, ಸಂಪ್ರದಾಯ, ಕಲೆ ಹಾಗೂ ಜೀವನಶೈಲಿಯನ್ನು ಪರಿಚಯಿಸುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವಿಶೇಷ ಉಡುಪುಗಳು ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮದಲ್ಲಿ ಬಿಸಿಎ ವಿಭಾಗದ ಮುಖಸ್ಥೆ ನಾಗಿಣಿ ಪಾಟೀಲ್ ನೇತೃತ್ವದಲ್ಲಿ ರಾಜಸ್ಥಾನ, ಬಿಎ ವಿಭಾಗದ ಮುಖಸ್ಥೆ ದೀಪಿಕಾ ನೇತೃತ್ವದಲ್ಲಿ ಕೇರಳ, ಬಿಕಾಂ ವಿಭಾಗದ ಮುಖಸ್ಥ ಉಮೇಶ್ ನೇತೃತ್ವದಲ್ಲಿ ಕರ್ನಾಟಕ ಹಾಗೂ ಬಿಎಸ್‌ಸಿ ವಿಭಾಗದ ಮುಖಸ್ಥೆ ಶೃತಿ ನೇತೃತ್ವದಲ್ಲಿ ಮಹಾರಾಷ್ಟ್ರ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ವಿಭಿನ್ನ ಥೀಮ್‌ಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.ಪ್ರತಿಯೊಂದು ರಾಜ್ಯದ ಸಾಂಪ್ರದಾಯಿಕ ಉಡುಪು, ಆಭರಣ, ಶೈಲಿ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ವಿದ್ಯಾರ್ಥಿಗಳು ಅತ್ಯಂತ ಆಕರ್ಷಕವಾಗಿ ಪ್ರದರ್ಶಿಸಿದರು. ಇದರಿಂದ ಕಾಲೇಜು ಆವರಣವೇ ಭಾರತದ ವಿವಿಧ ಸಂಸ್ಕೃತಿಗಳ ಸಂಗಮದಂತೆ ಕಂಗೊಳಿಸಿತು.
ಈ ಸಂದರ್ಭದಲ್ಲಿ ಜ್ಞಾನಸುಧಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷೆ ಡಾ. ಪೂರ್ಣಿಮಾ ಜಿ. ಅವರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಪರಿಶ್ರಮ ಶ್ಲಾಘಿಸಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಅವರಲ್ಲಿರುವ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಜ್ಞಾನಸುಧಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಚನ್ನವೀರ ಪಾಟೀಲ ಸ್ವಾಗತಿಸಿದರು.