ಕಾರ್ಕಳ: ಮಾಳ ಪೇರಡ್ಕ ಮಲೆಕುಡಿಯ ಸಮುದಾಯ ಭವನದಲ್ಲಿ ಜಿಲ್ಲಾ ಮಲೆಕುಡಿಯ ಸಂಘದ ಉಪಾಧ್ಯಕ್ಷೆ ಶಾರದಾ ಅವರ ಅಧ್ಯಕ್ಷತೆಯಲ್ಲಿ ಉದ್ಯೋಗ ಆಧರಿತ ಶಿಕ್ಷಣ ಕಾರ್ಯಾಗಾರ ಬುಧವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ ಈದು ಮಾತನಾಡಿ, “ಶಿಕ್ಷಣ, ಸಂಘಟನೆ, ಜಾಗೃತಿ” ಎಂಬ ಧ್ಯೇಯದೊಂದಿಗೆ ಆರಂಭವಾದ ಮಲೆಕುಡಿಯ ಸಂಘಟನೆ ಸಮುದಾಯದ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಸಮಿತಿಯನ್ನು ರಚಿಸಿದೆ. ಯಾರೂ ಶಿಕ್ಷಣದಿಂದ ವಂಚಿತರಾಗದೆ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಸಮಿತಿಯೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್, ಕಲಾ ವೈಭವ ಸಂಯೋಜಕ ಪ್ರದೀಪ್ ಅಂಡಾರು, ತರಬೇತುದಾರರಾದ ಡಾ. ಸೋಮಶೇಖರ್ ಎಂ. ಹಾಗೂ ನೋಣಯ್ಯ ಗೌಡ ರೆಂಜಾಳ ಉಪಸ್ಥಿತರಿದ್ದರು.ಪುಷ್ಪ ಶ್ರೀಧರ್ ಗೌಡ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಪಣಪಿಲ ಪ್ರಾರ್ಥಿಸಿದರು. ನೋಣಯ್ಯ ರೆಂಜಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಕ್ಷಣಿಕ ಸಮಿತಿ ಸಂಯೋಜಕ ನವೀನ್ ತೆಳ್ಳಾರು ವಂದಿಸಿದರು.