ಕೊಪ್ಪಳ: ಇಲ್ಲಿನ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮೊದಲ ಬಾರಿ ಹಮ್ಮಿಕೊಂಡ ಅಂಗವಿಕಲರ ಸಾಮೂಹಿಕ ವಿವಾಹದಲ್ಲಿ 21 ಜೋಡಿಗಳಿಗೆ ಕಂಕಣಭಾಗ್ಯ ಲಭಿಸಿತು. ಜತೆಗೆ ಮಠದಿಂದ ಅವರಿಗೆ ಉದ್ಯೋಗ ಭಾಗ್ಯ ಕಲ್ಪಿಸಲಾಯಿತು.ಈ ಮೂಲಕ ಅಂಗವಿಕಲರು ಕಂಕಣಭಾಗ್ಯದೊಂದಿಗೆ ಬದುಕಿನ ದಾರಿ ಕಂಡುಕೊಳ್ಳುವ ಹೊಸ ಸಂಪ್ರದಾಯಕ್ಕೆ ಗವಿಮಠ ಶ್ರೀಕಾರ ಹಾಕಿತು.ಮಠದ ಆವರಣದ ಮಹಾದಾಸೋಹದಲ್ಲಿ ಗವಿಮಠ, ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ, ಸೆಲ್ಕೋ ಕಂಪನಿ, ವಿಶೇಷಚೇತನರ ಇಲಾಖೆಯ ಸಹಯೋಗದಲ್ಲಿ ಅಂಗವಿಕಲರ ಬಾಳಲ್ಲಿ ಹೊಸ ಭಾಷ್ಯ ಬರೆಯಲಾಯಿತು.ಇಬ್ಬರು ಮೂಗರು ಪರಸ್ಪರ ಅರ್ಥ ಮಾಡಿಕೊಂಡು ವಿವಾಹವಾದರೆ, ಅಂಗವಿಕಲೆಗೆ ಸದೃಢ ಯುವಕ ಬಾಳುಕೊಟ್ಟ. ಹೀಗೆ ಮಠದ ಆವರಣದಲ್ಲಿ ಒಂದಿಲ್ಲೊಂದು ವಿಭಿನ್ನತೆಯೊಂದಿಗೆ ಸಾಮೂಹಿಕ ವಿವಾಹ ನೆರವೇರಿತು.ಮದುವೆಯೊಂದಿಗೆ ಝೆರಾಕ್ಸ್ ಯಂತ್ರ, ಸಣ್ಣ ಅಂಗಡಿ, ರಾಟಿ ಸೇರಿದಂತೆ ಮೊದಲಾದ ಉದ್ಯೋಗ ಆಧಾರಿತ ಸಾಮಗ್ರಿಗಳನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪದಕ ಪುರಸ್ಕೃತ ಘನಶಾಮ್ ಬಾಂಡಗೆ ಮಾತನಾಡಿ, ನಾನು ಕೂಡ ಅಂಗವಿಕಲ. ಆದರೆ ಬದುಕಿನಲ್ಲಿ ಆಶಾಭಾವನೆ ಕಳೆದುಕೊಂಡಿಲ್ಲ. ಇತರ ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇನೆ. ರಾಜ್ಯದ ಮಠಗಳ ಪರಂಪರೆಯಲ್ಲಿ ಗವಿಸಿದ್ದೇಶ್ವರ ಶ್ರೀಗಳು ನಡೆದಾಡುವ ದೇವರು. ಶಿವಕುಮಾರ ಸ್ವಾಮೀಜಿ, ಸಿದ್ದೇಶ್ವರ ಶ್ರೀಗಳ ಹಾದಿಯಲ್ಲಿ ಗವಿಶ್ರೀ ನಡೆಯುತ್ತಿದ್ದಾರೆ ಎಂದು ಬಣ್ಣಿಸಿದರು.ತಾವು ಅಂಗವಿಕಲರು ಎನ್ನುವ ಭಾವನೆಯನ್ನು ಮನಸ್ಸಿಂದ ತೆಗೆದುಹಾಕಬೇಕು. ದೈಹಿಕವಾಗಿ ನಾವು ಅಂಗವಿಕಲರಾಗಿರಬಹುದು, ಆದರೆ, ಮನಸ್ಸಿನಿಂದ ಅಂಗವಿಕಲರಾಗಬಾರದು ಎಂದರು.ಸೆಲ್ಕೋ ಕಂಪನಿ ವಲಯ ವ್ಯವಸ್ಥಾಪಕ ಮಂಜುನಾಥ ಭಾಗವತ ಮಾತನಾಡಿ, ವ್ಯಕ್ತಿಯ ಜೀವನದಲ್ಲಿ ಮದುವೆ ಎನ್ನುವುದು ಪ್ರಮುಖ ಕಾರ್ಯ. ಅಂತಹ ಕಾರ್ಯಕ್ಕೆ ಇಂದು ನಾವೆಲ್ಲ ಸಾಕ್ಷಿಯಾಗಿದ್ದೇವೆ. ಸೆಲ್ಕೋ ಕಂಪನಿಯು ಸೌರಶಕ್ತಿಯಿಂದ ಇಂಧನ ಉತ್ಪಾದನೆ ಜೊತೆಗೆ ಬಡತನ ನಿರ್ಮೂಲನೆಗೆ ಅದರ ಸಂಪನ್ಮೂಲ ಬಳಸಿಕೊಳ್ಳುವುದು ಸಂಸ್ಥೆಯ ಧ್ಯೇಯ. ಸಾಮಾಜಿಕ ಕಾರ್ಯಗಳಾದ ಶಿಕ್ಷಣ, ಆರೋಗ್ಯ ಚಟುವಟಿಕೆಗಳಿಗೆ ನಮ್ಮ ಸಂಸ್ಥೆ ಸೇವೆ ಸಲ್ಲಿಸುತ್ತಿದೆ ಎಂದರು.ಜಿಲ್ಲಾ ವಿಶೇಷಚೇತನ ಹಾಗೂ ಕಲ್ಯಾಣ ಯೋಜನಾ ಅಧಿಕಾರಿ ಶ್ರೀದೇವಿ ನಿಡಗುಂದಿ ಮಾತನಾಡಿ, ನವದಂಪತಿಗಳಿಗೆ ಶುಭ ಕೋರಿ ಇದೊಂದು ಅವಿಸ್ಮರಣೀಯ ಕ್ಷಣವಾಗಿದೆ. ತಾವು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ತಾವೆಲ್ಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಬಹಳ ಸಂತೋಷದ ಕ್ಷಣವಾಗಿದೆ ಎಂದರು.ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶೃಂಗೇರಿ ಮಾತನಾಡಿದರು.ಈ ಸಂದರ್ಭದಲ್ಲಿ ಗುರುಶಾಂತ ಶಿವಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು.ಯೋಗಿ ಎಂದರೆ ಬೇರೇನೂ ಅಲ್ಲ. ವ್ಯಕ್ತಿ ಸಮಾಜಕ್ಕೆ ಉಪಯೋಗಿಯಾದರೆ ಆತ ನಿಜವಾದ ಯೋಗಿ ಎಂದು ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಪ್ರತಿ ವರ್ಷ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯದೊಂದಿಗೆ ಜಾತ್ರೆಯನ್ನು ಪ್ರಾರಂಭಿಸುತ್ತಿದ್ದೆವು. ಆದರೆ, ಈ ವರ್ಷ ಅಂಗವಿಕಲರಿಗೆ ವಿವಾಹ ಕಾರ್ಯಕ್ರಮದೊಂದಿಗೆ ಆರಂಭಿಸಿದ್ದೇವೆ ಎಂದರು.