ನೀರಿಲ್ಲದೆ ಸೊರಗುತ್ತಿರುವ ಜೋಗ ಜಲಪಾತ

KannadaprabhaNewsNetwork |  
Published : Oct 06, 2026, 01:45 AM IST
ಪೊಟೋ: 04ಎಸ್‌ಎಂಜಿಕೆಪಿ05ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತದ ದೃಶ್ಯ.  | Kannada Prabha

ಸಾರಾಂಶ

ಜೋಗ ಜಲಪಾತದ ವೈಭವ ಕಣ್ತುಂಬಿಕೊಂಡು ಆನಂದಿಸಲು ಬರುವ ಪ್ರವಾಸಿಗರಿಗೆ ಈಗ ಬರೀ ನಿರಾಸೆ. ಕಾರಣ ನೀರಿಲ್ಲದೆ ಜೋಗ ಜಲಪಾತ ವೈಭವ ಕಳೆಗುಂದಿದೆ. ಬೇಸಿಗೆ ಆರಂಭಕ್ಕೆ ಮುನ್ನವೇ ಈ ಬಾರಿ ನೀರಿನ ಭರದಿಂದ ಜಲಸಿರಿಯ ಜೋಗದ ವೈಭವ ಕಳೆಗುಂದಿದ್ದು, ಜೋಗದ ಭೋರ್ಗರೆತವನ್ನು ನೋಡಲು ದೇಶ-ವಿದೇಶ ಸೇರಿದಂತೆ ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ಮಳೆಗಾಲದಲ್ಲೂ ನೀರಿಲ್ಲದೆ ಕೇವಲ ಸಣ್ಣ ಕಡ್ಡಿಯಂತೆ ನೀರು ಬೀಳುವುದನ್ನು ನೋಡಿದಾಗ ‘ಅಯ್ಯೋ ಇಷ್ಟೆನಾ ಜೋಗ’ ಎಂದು ಉದ್ಗರಿಸಿ ನಿರಾಸೆಯ ಮೊಗ ಹೊತ್ತು ಮುಂದಕ್ಕೆ ಹೋಗುವಂತಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜೋಗ ಜಲಪಾತದ ವೈಭವ ಕಣ್ತುಂಬಿಕೊಂಡು ಆನಂದಿಸಲು ಬರುವ ಪ್ರವಾಸಿಗರಿಗೆ ಈಗ ಬರೀ ನಿರಾಸೆ. ಕಾರಣ ನೀರಿಲ್ಲದೆ ಜೋಗ ಜಲಪಾತ ವೈಭವ ಕಳೆಗುಂದಿದೆ. ಬೇಸಿಗೆ ಆರಂಭಕ್ಕೆ ಮುನ್ನವೇ ಈ ಬಾರಿ ನೀರಿನ ಭರದಿಂದ ಜಲಸಿರಿಯ ಜೋಗದ ವೈಭವ ಕಳೆಗುಂದಿದ್ದು, ಜೋಗದ ಭೋರ್ಗರೆತವನ್ನು ನೋಡಲು ದೇಶ-ವಿದೇಶ ಸೇರಿದಂತೆ ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ಮಳೆಗಾಲದಲ್ಲೂ ನೀರಿಲ್ಲದೆ ಕೇವಲ ಸಣ್ಣ ಕಡ್ಡಿಯಂತೆ ನೀರು ಬೀಳುವುದನ್ನು ನೋಡಿದಾಗ ‘ಅಯ್ಯೋ ಇಷ್ಟೆನಾ ಜೋಗ’ ಎಂದು ಉದ್ಗರಿಸಿ ನಿರಾಸೆಯ ಮೊಗ ಹೊತ್ತು ಮುಂದಕ್ಕೆ ಹೋಗುವಂತಾಗಿದೆ.

ಮುಂಗಾರು ಮಳೆ ಸಿನಿಮಾದಲ್ಲಿ ಜೋಗದ ಸಿರಿ ಕಂಡು ಜೀವನದಲ್ಲಿ ಒಮ್ಮೆಯಾದರೂ ಜೋಗ ನೋಡ ಬೇಕು ಎಂಬ ಆಸೆ ಹೊತ್ತು ಬಂದವರಿಗೆ ಜಲಪಾತದ ಬಂಡೆಗಳಷ್ಟೇ ದರ್ಶನ ನೀಡುತ್ತಿವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಜೋಗ ಸಂಪೂರ್ಣ ಮೈದುಂಬಿಕೊಂಡು ನಯನ ಮನೋಹರ ದೃಶ್ಯವನ್ನೇ ತೆರೆದಿಡುತ್ತದೆ. ರಾಜಾ, ರೋರರ್, ರಾಣಿ, ರಾಕೆಟ್‌ಗಳು ಪರಸ್ಪರ ಮೈಗೆ ಮೈ ತಾಗಿಸಿಕೊಂಡೇ ನೃತ್ಯವಾಡುತ್ತವೆ. ಆದರೆ, ಈಗ ರಾಜಾ ಮತ್ತು ರೋರರ್‌ನಲ್ಲಿ ಹನಿ ನೀರಿಲ್ಲದೆ ಸಂಪೂರ್ಣ ಜೀವ ಕಳೆದುಕೊಂಡಿವೆ. ರಾಣಿ ಮತ್ತು ರಾಕೆಟ್‌ನಲ್ಲಿ ಅತ್ಯಂತ ಸಣ್ಣ ಪ್ರಮಾಣದ ನೀರು ಹರಿಯುತ್ತಿದೆ.

ಶರಾವತಿ ನದಿ ಪ್ರದೇಶದಲ್ಲಿ ಈ ವರ್ಷ ಮಳೆ ಕಡಿಮೆಯಾಗಿದ್ದು, ಜೂನ್‌, ಜುಲೈ, ಆಗಸ್ಟ್‌ನಲ್ಲಿ ಸುರಿದ ಮಳೆಯಿಂದಾಗಿ ಇದುವರೆಗೆ ಜೋಗ ಜಲಪಾತ ಜೀವ ಉಳಿಸಿ ಕೊಂಡಿತ್ತು. ಲಿಂಗನಮಕ್ಕಿ ಜಲಾಶಯ ಕೂಡ ಭರ್ತಿಯಾಗದ ಕಾರಣ ನದಿಯಲ್ಲಿ ಮುಂದಕ್ಕೆ ನೀರು ಹರಿಸಲಿಲ್ಲ. ಅಣೆಕಟ್ಟೆಯಲ್ಲಿ ಇರುವ ನೀರನ್ನು ಮಿತವಾಗಿ ಬಳಸಿ ವಿದ್ಯುಚ್ಛಕ್ತಿ ಉತ್ಪಾದನೆಗೆ ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ ಈ ಬಾರಿ ಜೋಗ ಜಲಪಾತದ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.

ಈಗ ಸದ್ಯ ಶಾಲೆಗಳಿಗೆ ದಸರಾ ರಜೆ ನೀಡಲಾಗಿದೆ. ಇಷ್ಟು ದಿನ ಹೋಮ್‌ ವರ್ಕ್‌, ಎಕ್ಸಾಂ ಎಂದು ಓದಿನಲ್ಲಿ ಕಾಲ ಕಳೆದಿದ್ದ ಮಕ್ಕಳು ಈಗ ತಮಗೆ ಸಿಕ್ಕ ಅಲ್ಪ ಕಾಲದ ರಜೆಯ ದಿನಗಳಲ್ಲಿ ಜೋಗ ನೋಡಲು ಆಗಮಿಸುತ್ತಿದ್ದಾರೆ. ಆದರೆ, ಈ ಬಾರಿ ಜೋಗದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಜೋಗವು ಬರುವ ಪ್ರವಾಸಿಗರಿಗೆ ನಿರಾಸೆ ಮೂಡಿಸುತ್ತಿದೆ.

ಅಲ್ಲದೆ, ಹಲವರು ಪ್ರಕೃತಿ ಸೌಂದರ್ಯ ಸವಿ ಯುವ ಆಸೆಯಿಂದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹೆಚ್ಚಾಗಿ ಪ್ರವಾಸ ಆಯೋಜಿಸಿಕೊಂಡು ಬರುತ್ತಿದ್ದಾರೆ. ಶಿವಮೊಗ್ಗಕ್ಕೆ ಪ್ರವಾಸ ಬರುವವರ ಮುಖ್ಯ ಗುರಿ ಜೋಗ ನೋಡುವುದೇ ಆಗಿರುತ್ತದೆ. ಇದೇ ಕಾರಣಕ್ಕೆ ಜೋಗದಲ್ಲಿ ನೀರಿರಲಿ, ಬಿಡಲಿ ಪ್ರವಾಸಿಗರು ಬರುತ್ತಿದ್ದಾರೆ. ಆದರೆ, ಕಳೆದು ಮೂರು ತಿಂಗಳಿಗೆ ಹೊಲಿಸಿಕೊಂಡರೆ ಈಗ ಪ್ರವಾಸಿಗರ ಸಂಖ್ಯೆ ಕಡಿಮೆಯೇ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ಮತದಾರರ ಶುದ್ಧೀಕರಣಕ್ಕೆ ಎಸ್‌ಐಆರ್ ಅಗತ್ಯ: ಯತ್ನಾಳ
₹5 ಕೋಟಿ ವೆಚ್ಚದಲ್ಲಿ ಬ್ಯಾಡ್ಮಿಂಟನ್ ಕೋರ್ಟ್, ಈಜುಕೊಳ: ಶಾಸಕ ಮಂಜುನಾಥ್‌