ಕನ್ನಡಪ್ರಭವಾರ್ತೆ ಸಾಗರ
ವಿಶ್ವವಿಖ್ಯಾತ ಜೋಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಳೆಗಾಲದ ಆರಂಭದೊಳಗೆ ಪೂರ್ಣಗೊಳಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಜೋಗ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೋಗ ಅಭಿವೃದ್ಧಿಯ ಕನಸು ಅತಿ ಶೀಘ್ರದಲ್ಲಿ ನನಸಾಗಲಿದ್ದು, ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲಾಗುತ್ತದೆ ಎಂದರು.
ಒಟ್ಟು ೧೮೪ ಕೋಟಿ ವೆಚ್ಚದಲ್ಲಿ ವಿಶಾಲವಾದ ಉದ್ಯಾನ, ಕಾರಿಡಾರ್ ಶಾಪಿಂಗ್ ಮಳಿಗೆಗಳು, ಹೋಟೆಲ್ ವ್ಯವಸ್ಥೆ, ನೀರಿನ ಕಾರಂಜಿ, ಮಳೆ ನೃತ್ಯ ಮೊದಲಾದ ವಿನೂತನ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮೊದಲಿದ್ದ ಜಲಪಾತದ ರೂಪಕ್ಕೆ ಹೆಚ್ಚಿನ ಮೆರಗು ನೀಡಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಪ್ರವಾಸಿಗರ ರಕ್ಷಣೆ, ಸುರಕ್ಷತೆಗಾಗಿ ವಿಶೇಷ ಪೊಲೀಸ್ ಚೌಕಿ ಸ್ಥಾಪಿಸಲಾಗುವುದು. ಜಲಪಾತದ ಇತಿಹಾಸ, ಸ್ಥಳದ ಮಾಹಿತಿ, ಒದಗಿಸುವ ಗೈಡ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ರಾಜ್ಯದಲ್ಲಿಯೇ ಮಾದರಿ ಪ್ರವಾಸೋದ್ಯಮ ಆಕರ್ಷಣೆಯಾಗಿ ಮಳೆ ನೃತ್ಯವನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಹ್ಯೆದರಾಬಾದ್ನಲ್ಲಿರುವ ರೇನ್ ಡ್ಯಾನ್ಸ್ ಸ್ಥಳ ಪರಿಶೀಲನೆ ಮಾಡಿ ಅದರ ಮಾದರಿಯಲ್ಲಿ ಇಲ್ಲಿಯೂ ಕೆಲಸ ಮಾಡಲಾಗುವುದು. ಜಲಪಾತದಲ್ಲಿ ರೋಪ್ ವೇ ಹಾಗೂ ಕೆಲವು ಹಳೆಯ ಕಟ್ಟಡವನ್ನು ಹೊಸ ಮಾದರಿಯಲ್ಲಿ ನಿರ್ಮಿಸಲಾಗುವುದು. ಈ ಬಗ್ಗೆ ಶೀಘ್ರ ಬೆಂಗಳೂರಿನಲ್ಲಿ ಸಭೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.ಉಪವಿಭಾಗಾಧಿಕಾರಿ ಯತೀಶ್, ತಹಶೀಲ್ದಾರ್ ಚಂದ್ರಶೇಖರ್ ನಾಯಕ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. ೬ಕೆ.ಎಸ್.ಎ.ಜಿ.೧
ಸಾಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ, ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಜೋಗ ಅಭಿವೃದ್ದಿ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು.