ಕನ್ನಡಪ್ರಭ ವಾರ್ತೆ ಕಂಪ್ಲಿ
ಪಟ್ಟಣದ ನಡುವಿನ ಮಸೀದಿಯಿಂದ ಜೋಗಿ ಕಾಲುವೆತನಕದ ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊಳಿಸಿದ್ದು, ಜೆಸಿಬಿಗಳ ಮೂಲಕ ರಸ್ತೆ ಬದಿಯ ಮನೆ ಹಾಗೂ ಮಳಿಗೆ ಪುರಸಭೆ ಅಧಿಕಾರಿಗಳು ತೆರವುಗೊಳಿಸಿದರು.ಅಧಿಕಾರಿಗಳು ಜೆಸಿಬಿಗಳ ಮೂಲಕ ಬೆಳ್ಳಂಬೆಗ್ಗೆ ಮನೆ ಒಡೆಯಲು ಬಂದಿದ್ದಾರೆ. ತೆರವುಗೊಳಿಸಿಕೊಳ್ಳುತ್ತೇವೆ ಎಂದರೂ ಬಲವಂತವಾಗಿ ನಮ್ಮನ್ನು ಮನೆಯಿಂದ ಹೊರಗೆಳೆದು ಕಟ್ಟಡಗಳನ್ನು ಒಡೆದು ಹಾಕ್ತಿದ್ದಾರೆ. ಏ.3ರ ನೋಟಿಸನ್ನು ಏ.11ರ ಸಂಜೆ ಮನೆಗೆ ಅಂಟಿಸಿ ಏ.12ರ ಬೆಳಗ್ಗೆ ಒಡೆಯುತ್ತಿದ್ದಾರೆ. ಮನೆಯಲ್ಲಿ ಮಕ್ಕಳು ಇದ್ದಾರೆ, ಅವಕಾಶ ನೀಡಿ ಎಂದರೂ ಲೆಕ್ಕಿಸದೇ ಪುರಸಭೆಯವರು ದೌರ್ಜನ್ಯ ಎಸಗುತ್ತಿದ್ದಾರೆ. ಕೋರ್ಟ್ ನಿಂದ 27 ಮನೆಯವರು ಸ್ಟೇ ತಂದಿದ್ದರೂ ಏಕಾಏಕಿ ದೌರ್ಜನ್ಯದಿಂದ ಮನೆ ಒಡೆಯುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕೆಲವರು ನಮ್ಮ ಕಟ್ಟಡಗಳನ್ನು ನಾವೇ ತೆರವುಗೊಳಿಸಿಕೊಳ್ಳುತ್ತೇವೆ. ಸ್ವಲ್ಪ ಕಾಲಾವಕಾಶ ನೀಡುವಂತೆ ಆಗ್ರಹಿಸಿ ಮನೆಗಳ ಬಾಗಿಲಿಗೆ ಕೂತು ಪ್ರತಿಭಟಿಸಿದರು.ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, ಅಗಲೀಕರಿಸುವ 500 ಮೀ. ರಸ್ತೆಯಲ್ಲಿ ಎಡಭಾಗದಲ್ಲಿ 75, ಬಲಭಾಗದಲ್ಲಿ 60 ಮನೆಗಳಿವೆ. ಒಂದು ಮನೆಯವರು ಮಾತ್ರ ನ್ಯಾಯಾಲಯದಿಂದ ಸ್ಟೇ ತಂದಿದ್ದು, 28 ಮನೆಯವರು ನ್ಯಾಯಾಲಯದಿಂದ ಪುರಸಭೆಗೆ ನೋಟಿಸ್ ಕೊಡಿಸಿದ್ದಾರಷ್ಟೆ. ರಸ್ತೆ ಅಗಲೀಕರಣಕ್ಕಾಗಿ 2025ರ ಮಾ.1ರಂದು ಶಾಸಕರು, ಪುರಸಭೆ ಅಧ್ಯಕ್ಷರ ಸಮಕ್ಷಮದಲ್ಲಿ ನಿವಾಸಿಗಳ ಸಭೆ ನಡೆಸಿ, ರಸ್ತೆ ಮಧ್ಯದಿಂದ ಎರಡು ಬದಿ ತಲಾ 17.5ಅಡಿ ತೆರವುಗೊಳಿಸಲು ನಿರ್ಧರಿಸಿದೆ. ಸ್ವಯಂ ತೆರವುಗೊಳಿಸಲು ಮುಂದಾದರೆ ಪುರಸಭೆ ಜೆಸಿಬಿ ಒದಗಿಸುವುದಾಗಿ ಹಲವು ಬಾರಿ ಮೌಖಿಕವಾಗಿ ತಿಳಿಸಿದೆ. ಯುಗಾದಿ ಹಬ್ಬವಿದೆ ತೆರವು ಬೇಡ ಎಂದಿದ್ದರಿಂದ ಹದಿನೈದು ದಿನ ತಡೆದು ಇಂದು ತೆರವಿಗೆ ಮುಂದಾಗಿದ್ದೇವೆ. ಕಾನೂನು ಪ್ರಕಾರ ನಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಾಲ್ಕು ಜೆಸಿಬಿಗಳು, 50ಜನ ಪೌರ ಕಾರ್ಮಿಕರು, ಪುರಸಭೆ ಸಿಬ್ಬಂದಿ ರಸ್ತೆ ಅಗಲೀಕರಣದಲ್ಲಿ ಪಾಲ್ಗೊಂಡಿದ್ದರು. ಜೆಸ್ಕಾಂ, ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಒಬ್ಬ ಆರಕ್ಷಕ ನಿರೀಕ್ಷಕ, ನಾಲ್ವರು ಆರಕ್ಷಕ ಉಪ ನಿರೀಕ್ಷಕರು, 80ಜನ ಪೊಲೀಸರು, ಒಂದು ಜಿಲ್ಲಾ ಸಶಸ್ತ್ರ ಪಡೆ ರಸ್ತೆ ಅಗಲೀಕರಣ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಒದಗಿಸಿದ್ದರು.