ಶಿವಮೊಗ್ಗ: ಜೀತ ಪದ್ಧತಿ ಒಂದು ಅಮಾನವೀಯ ಮತ್ತು ಹೀನಾಯ ಪದ್ಧತಿಯಾಗಿದ್ದು, ಅದನ್ನು ಹೋಗಲಾಡಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ್ ನಾಯಕ್ ಹೇಳಿದರು.
ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿ.ಪಂ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಶಿವಮೊಗ್ಗ ಹಾಗೂ ಮುಕ್ತಿ ಅಲಯನ್ಸ್ ಕರ್ನಾಟಕ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಮತ್ತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ದೇಶವು ಅಭಿವೃದ್ಧಿ ಪಥದಲ್ಲಿ ಸಾಗಿ ಜಾಗತಿಕ ಮಟ್ಟದಲ್ಲಿ ಅನೇಕ ರೀತಿಯ ಸಾಧನೆ ಮಾಡುತ್ತಿದ್ದರೂ ಈ ಅಮಾನವೀಯ, ಅಮಾನುಷವಾದ ಜೀತ ಪದ್ಧತಿಯಿಂದ ಮಾತ್ರ ಮುಕ್ತಿ ಪಡೆಯಲಾಗುತ್ತಿಲ್ಲ. ಜೀತಪದ್ಧತಿ ನಮ್ಮಲ್ಲಿ ಇನ್ನೂ ಇದೆ ಎಂದು ಹೇಳಿಕೊಳ್ಳಲು ಅವಮಾನವಾಗುತ್ತಿದೆ. ಇದರಷ್ಟು ಹೀನಾಯ ಮತ್ತೊಂದಿಲ್ಲ. ಇದನ್ನು ನಿರ್ಮೂಲನೆ ಮಾಡಲು ಪ್ರಾಮಾಣಿಕ ಪ್ರಯತ್ನ ಆಗಬೇಕು ಎಂದರು.
ಜೀತ ಪದ್ಧತಿ ನಿರ್ಮೂಲನೆಯಲ್ಲಿ ಅನುಷ್ಠಾನ ಅಧಿಕಾರಿಗಳ ಜವಾಬ್ದಾರಿ ಮತ್ತು ಪಾತ್ರ ಮಹತ್ತರವಾಗಿದೆ. ಜೀತಪದ್ಧತಿಯನ್ನು ಶೋಧಿಸಿ, ಸೂಕ್ತ ಕಾನೂನು ಕ್ರಮ ಜೊತೆಗೆ ಶಿಕ್ಷೆ ಆಗಬೇಕು. ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಈ ಪ್ರಕ್ರಿಯೆಯ ಕುರಿತಾದ ತಾಂತ್ರಿಕತೆ ಬಗ್ಗೆ ತಿಳಿದುಕೊಂಡು ಕಾರ್ಯೋನ್ಮುಖರಾಗಬೇಕು. ಇಂತಹ ಪ್ರಕರಣಗಳಲ್ಲಿ ಪೊಲೀಸರು ಸೂಕ್ಷ್ಮ ರೀತಿಯಲ್ಲಿ ವ್ಯವಹರಿಸಬೇಕು. ಪೊಲೀಸ್ ಇಲಾಖೆಯ ಸಹಕಾರ ಹೆಚ್ಚಾಗಬೇಕು ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಜೀತ ಪದ್ಧತಿ ನಿರ್ಮೂಲನೆಗೆ ಹಕ್ಕು ನೀಡಲಾಗಿದೆ. ಹಾಗೂ ಕಾನೂನು ಜಾರಿಯಾಗಿದೆ. ಇದನ್ನು ನಾವು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಇನ್ನೂ ಜೀತ ಪದ್ಧತಿ ಕೊನೆಗೊಳ್ಳದಿರುವುದಕ್ಕೆ ಕಾರಣ ನೋಡಬೇಕು. ಕೆಳಸ್ತರದಿಂದ ಬಂದ, ಬಡವರು ಈ ಪದ್ಧತಿಗೆ ಒಳಗಾಗುವುದನ್ನು ಕಾಣುತ್ತೇವೆ. ಜೀತ ಪದ್ಧತಿ ತಂದೆ ಪಡೆದ ಸಾಲ ತೀರಿಸಲಾರದ ಮಕ್ಕಳಿಂದ ಮಕ್ಕಳಿಗೆ ಹೀಗೆ ವಂಶ ಪಾರಂಪರ್ಯವಾಗಿ ಮುಂದುವರೆಯುವುದನ್ನು ಕಂಡಿದ್ದೇವೆ ಎಂದು ತಿಳಿಸಿದರು.ಜೀತಪದ್ಧತಿಯಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಯಾವುದೇ ಸ್ಥಾನಮಾನ, ಸ್ವಾತಂತ್ರವಿರುವುದಿಲ್ಲ. ನಮ್ಮ ರಾಜ್ಯದ ಜನ ಇತರೆ ರಾಜ್ಯಗಳಿಗೆ ಹಾಗೂ ಬೇರೆ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು ಜೀತ ಮಾಡುತ್ತಿರುವುದನ್ನೂ ಕಂಡಿದ್ದೇವೆ. ಇತ್ತೀಚೆಗೆ ಕಾರ್ಖಾನೆ, ಹೋಟೆಲ್, ಕಾಫಿ ಎಸ್ಟೇಟ್‌ಗಳಲ್ಲಿ ಆಧುನಿಕ ಜೀತ ಪದ್ಧತಿಯನ್ನೂ ಕಾಣುತ್ತಿದ್ದೇವೆ. ಆದರೆ ದಾಳಿಗೆ ತೆರಳಿದ ಸಂದರ್ಭದಲ್ಲಿ ದಿನಗೂಲಿ ಎನ್ನುತ್ತಾರೆ. ಇದನ್ನು ಕಂಡುಹಿಡಿಯುವುದು ಕಷ್ಟವಾದರೂ ಈ ಕೆಲಸ ಮಾಡಬೇಕು ಎಂದರು.ಜೀತ ಪದ್ಧತಿ (ರದ್ದತಿ) ಕಾಯ್ದೆ 1976 ಕುರಿತು ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್ ಸಂತೋಷ್, ಜೀತ ಪದ್ಧತಿ ಒಂದು ಸಾಮಾಜಿಕ ಪಿಡುಗು. ಮೂಲಭೂತ ಹಕ್ಕಿನ ಉಲ್ಲಂಘನೆ. ಮೇಲ್ನೋಟಕ್ಕೆ ಜೀತ ಪದ್ಧತಿ ಕಂಡು ಬರುವುದಿಲ್ಲ. ಇತ್ತೀಚೆಗೆ ವಿನೂತನ ಸ್ವರೂಪ ಪಡೆದಿದ್ದರಿಂದ ಶೋಧ ಕಷ್ಟವಾಗಿದೆ. ಒಂದು ವ್ಯವಸ್ಥೆಯಾಗೇ ಮಾರ್ಪಾಡಾಗಿದೆ. ಆದರೂ ಅನುಷ್ಠಾನ ಇಲಾಖೆಗಳು ಶೋಧಿಸಿ, ಈ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕಿದೆ ಎಂದು ಹೇಳಿದರು.ಕಾಯ್ದೆಯನ್ವಯ ಜೀತಕ್ಕಾಗಿ ಮುಂಗಡವಾಗಿ ಹಣ ನೀಡುವಂತಿಲ್ಲ. ಹಣ ನೀಡಿ ಜೀತದ ಕರಾರು ಮಾಡಿಕೊಳ್ಳುವುದು ಅಪರಾಧ. ಹೀಗೆ ನೀಡಿದ ಹಣಕ್ಕೆ ಬದಲಾಗಿ ಕೆಲಸ ಮಾಡಬೇಕೆಂದು ಒತ್ತಾಯಿಸುವುದು ಅಪರಾಧ. ಇದನ್ನು ಪ್ರೋತ್ಸಾಹಿಸುವುದು ಸಹಿತ ಅಪರಾಧವಾಗುತ್ತದೆ. ಜೀತಕ್ಕಾಗಿ ಮನೆ ನೀಡುವಂತಿಲ್ಲ. ಅಡಮಾನ ಪಡೆಯುಂತಿಲ್ಲ, ಹೀಗೆ ನೀಡಿದ ಮನೆಯಿಂದ ಹೊರಹಾಕುವಂತಿಲ್ಲ. ಈ ಕಾಯ್ದೆಯಡಿ ಬಡವನಿಗೆ ನೀಡುವ ಹಣ ಸಾಲ ಎಂದು ಪರಿಗಣಿಸಿ ಪ್ರಕರಣ ದಾಖಲಾಗುತ್ತದೆ. ಪೊಲೀಸರು ಎಫ್‌ಐಆರ್ ದಾಖಲಿಸಿ, ಕ್ರಮ ಕೈಗೊಳ್ಳುತ್ತಾರೆ. ತಪ್ಪಿತಸ್ಥನಿಗೆ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಬಹುದು ಎಂದು ತಿಳಿಸಿದರು.ಮುಕ್ತಿ ಅಲಯನ್ಸ್ ಕರ್ನಾಟಕದ ಸಂಚಾಲಕ ಬೃಂದಾ ಅಡಿಗೆ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಜೀತ ಪದ್ಧತಿ (ರದ್ದತಿ) ಕಾಯ್ದೆ, ಅನುಷ್ಠಾನ ಕುರಿತು ಮಾತನಾಡಿದರು.
ಜಿ.ಪಂ. ಉಪ ಕಾರ್ಯದರ್ಶಿ ಸುಜಾತ, ಎಸಿ ಸತ್ಯನಾರಾಯಣ, ಮುಕ್ತಿ ಅಲಯನ್ಸ್ ಕರ್ನಾಟಕ ಸಂಸ್ಥೆಯ ಸದಸ್ಯರಾದ ರಾಜೇಂದ್ರ, ಸ್ಟ್ಯಾನ್ಲಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಎಂಎಡಿಬಿ ಅಧಿನ ಕಾರ್ಯದರ್ಶಿ ಹನುಮಾನಾಯಕ್ ಸ್ವಾಗತಿಸಿದರು.