ಸೋಮವಾರಪೇಟೆ: ಮಕ್ಕಳ ಗುಡಿ ಬೆಟ್ಟ ಸಂರಕ್ಷಣಾ ಮತ್ತು ಅಭಿವೃದ್ಧಿ ಸಮಿತಿ ಸಭೆಯು ತಾಲೂಕಿನ ಪ್ರಮುಖ ಪ್ರವಾಸಿ ತಾಣ ಮಕ್ಕಳ ಗುಡಿ ಬೆಟ್ಟದಲ್ಲಿ ಸಮಿತಿಯ ಅಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಪ್ರವಾಸಿ ತಾಣ ಮಕ್ಕಳ ಗುಡಿ ಬೆಟ್ಟದಲ್ಲಿ ಕೆಲವೊಂದು ಅಭಿವೃದ್ಧಿ ಕೆಲಸಗಳಾಗಿವೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಬೇಕು. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉದ್ಯಾನ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಾಗುವುದು. ಸಮಿತಿ ಸದಸ್ಯರು ಸಭೆ ಸೇರಿ ಅಭಿವೃದ್ಧಿ ಬಗ್ಗೆ ಸೂಕ್ತ ಯೋಜನೆಗಳನ್ನು ರೂಪಿಸಬೇಕಿದೆ. ಎಲ್ಲಿಯೇ ಅಭಿವೃದ್ಧಿ ಕೆಲಸಗಳಾಗುವ ಸಂದರ್ಭ ಎಲ್ಲರೂ ಆ ಕೆಲಸಗಳಿಗೆ ಕೈ ಜೋಡಿಸಬೇಕು ಎಂದರು. ಸಾಕಷ್ಟು ಪ್ರವಾಸಿ ಸ್ಥಳಗಳು ಸ್ಥಳೀಯ ಗ್ರಾಪಂ ಹೆಸರಿನಲ್ಲಿ ದಾಖಲೆಗಳನ್ನು ಮಾಡಿಸಿಕೊಂಡಿವೆ. ಅದರಂತೆ ಮಕ್ಕಳ ಗುಡಿ ಬೆಟ್ಟದ ಪ್ರದೇಶವನ್ನು ಸರ್ವೆ ಮಾಡಿಸಿಕೊಡಬೇಕೆಂಬ ಮನವಿಗೆ ಸ್ಥಳದಲ್ಲೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ, ಮುಂದಿನ ಒಂದು ವಾರದಲ್ಲಿ ಮಕ್ಕಳ ಗುಡಿ ಬೆಟ್ಟದ ಗಡಿ ಗುರುತಿಸುವ ಕೆಲಸ ಮಾಡಿಸಿಕೊಡಬೇಕೆಂದು ಸೂಚಿಸಿದರು.ಮಕ್ಕಳ ಗುಡಿ ಬೆಟ್ಟದ ಸುತ್ತಲೂ ಸಾಕಷ್ಟು ತ್ಯಾಜ್ಯ ಕಂಡುಬರುತ್ತಿದ್ದು, ಒಂದು ವಾರದಲ್ಲಿ ಸ್ವಚ್ಛ ಮಾಡಿಸುವಂತೆ ಕಿರಗಂದೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಅವರಿಗೆ ಸೂಚಿಸಿದರು. ತ್ಯಾಜ್ಯ ಸಂಗ್ರಹಿಸಲು ಅಲ್ಲಲ್ಲಿ ತೊಟ್ಟಿಗಳು, ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಈ ಆವರಣವನ್ನು ಅಶುದ್ಧಗೊಳಿಸಲು ಮುಂದಾಗುವವರ ಮೇಲೆ ಸೂಕ್ತ ಕ್ರಮ ಮತ್ತು ದಂಡ ವಿಧಿಸುವ ಕೆಲಸ ಮಾಡಬೇಕು. ಆ ಮೂಲಕ ಸಾರ್ವಜನಿಕರು ಇಲ್ಲಿನ ಪರಿಸರವನ್ನು ಆಹ್ಲಾದಿಸುವಂತಾಗಬೇಕು ಎಂದರು.