ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

KannadaprabhaNewsNetwork | Published : Feb 19, 2024 1:32 AM

ಸಾರಾಂಶ

ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಕಾಪಾಡುವ ಮೂಲಕ ಅಪರಾಧ ಮುಕ್ತ ಜೀವನಕ್ಕೆ ಕಾನೂನುಗಳ ಪಾಲನೆ ಅಗತ್ಯವಾಗಿದೆ. ಕಾನೂನು ಪಾಲಿಸುವುದರಿಂದ ಜೀವನ ವಿವಾದ ಮುಕ್ತವಾಗಿ ನೆಮ್ಮದಿಯಿಂದ ಇರವು ಸಾಧ್ಯ

ಕನ್ನಡಪ್ರಭ ವಾರ್ತೆ ಕೋಲಾರ

ಕಾನೂನು ಬಗ್ಗೆ ಗೊತ್ತಿಲ್ಲ ಎಂದು ತಪ್ಪು ಮಾಡಿದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಸಮಾಜದ ಪ್ರತಿಯೊಬ್ಬರಿಗೂ ಅದರ ಅರಿವು ಇರಬೇಕು ಎಂಬುದೇ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶ ಮತ್ತು ಅಪರಾಧ ಮುಕ್ತ ಸಮಾಜ ನಿರ್ಮಾಣದ ಧ್ಯೇಯ ಎಂದು ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್. ಹೊಸಮನಿ ತಿಳಿಸಿದರು.

ಕೆಜಿಎಫ್ ತಾಲೂಕಿನ ಸುಂದರಪಾಳ್ಯದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಗು ಹುಟ್ಟುವ ಮೊದಲೇ ಭ್ರೂಣದಲ್ಲಿರುವಾಗಲೇ ಕಾನೂನು ಇದ್ದು, ಲಿಂಗ ಪತ್ತೆ ಅಪರಾಧ ಎಂದರು.

ಕಾನೂನು ಪಾಲಿಸಿದರೆ ನೆಮ್ಮದಿ

ಅದೇ ರೀತಿ ಹುಟ್ಟಿದ ಕೂಡಲೇ ಜನನ ಪ್ರಮಾಣಪತ್ರ ಪಡೆಯುವುದಿಂದ ಕೊನೆಗೆ ಜೀವ ಕಳೆದುಕೊಂಡ ಮೇಲೆ ಮರಣ ಪ್ರಮಾಣಪತ್ರ ಪಡೆಯುವವರೆಗೂ ಕಾನೂನುಗಳ ಅಡಿ ಇರಬೇಕಾಗಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಕಾಪಾಡುವ ಮೂಲಕ ಅಪರಾಧ ಮುಕ್ತ ಜೀವನಕ್ಕೆ ಕಾನೂನುಗಳ ಪಾಲನೆ ಅಗತ್ಯವಾಗಿದೆ. ಕಾನೂನು ಪಾಲಿಸುವುದರಿಂದ ಜೀವನ ವಿವಾದ ಮುಕ್ತವಾಗಿ ಸುಖಮಯವಾಗಿರುತ್ತದೆ ಎಂದರು.ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯಗಳ ಸೇವನೆ ಪ್ರಕರಣಗಳು ಪತ್ತೆಯಾಗುತ್ತಿದ್ದು, ಇದು ವಿದ್ಯಾರ್ಥಿ ಯುವಜನಾಂಗವನ್ನು ದಾರಿ ತಪ್ಪುವಂತೆ ಮಾಡುತ್ತಿದೆ, ಇದು ಸಮಾಜಕ್ಕೆ ಮಾರಕವೂ ಆಗಿದೆ ಮತ್ತು ಸೇವನೆ ಚಟವಾಗಿ ಅಪರಾಧಗಳಿಗೆ ಪ್ರೇರಣೆ ನೀಡುತ್ತಿದೆ ಎಂದ ಅವರು, ಇದನ್ನು ತಪ್ಪಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.

ಪೋಕ್ಸೋ ಕುರಿತು ಮಾಹಿತಿ

ಶಾಲೆ ಆವರಣದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಮಾದಕ ವಸ್ತುಗಳ ಮಾರಾಟ,ಸೇವನೆ ಕಂಡು ಬಂದರೆ ಸಹಾಯವಾಣಿ ಅಥವಾ ಪೊಲೀಸರಿಗೆ ದೂರು ನೀಡಿ ಎಂದು ತಿಳಿಸಿ, ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಲೈಂಗಿಕ ಕಿರುಕುಳ ಸಹಾ ಪೋಕ್ಸೋ ಕಾಯಿದೆ ಅಡಿ ಶಿಕ್ಷಾರ್ಹ ಎಂದರು.

ಜಿಲ್ಲಾ ವಿಜ್ಞಾನ ಪರಿಷತ್ ಅಧ್ಯಕ್ಷೆ ಮಂಜುಳಾ ಭೀಮರಾವ್, ಮುಖ್ಯಶಿಕ್ಷಕಿ ಜ್ಯೋತಿ, ಶಿಕ್ಷಕರಾದ ಪರಮೇಶ್, ಭೀಮಪ್ಪ, ರಶ್ಮಿ ಇದ್ದರು.

Share this article