ಗದಗ: ಕೆ.ಎಚ್. ಪಾಟೀಲ ಅವರ ಚಿಂತನೆ, ಬದುಕು ಹಾಗೂ ರಚನಾತ್ಮಕ ಕಾರ್ಯಗಳು ಗ್ರಾಮೀಣ ಜನರ ಮೊಗದಲ್ಲಿ ನಗು ಮೂಡಿಸುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸೆಂಟರ್ ಫಾರ್ ಹ್ಯೂಮನ್ ಎಕ್ಸಲೆನ್ಸ್‌ನ ಸ್ವಾಮಿ ವಿವೇಕಾನಂದ ಪಿಯು ಕಾಲೇಜ್ ಆವರಣದಲ್ಲಿ ಸಹಕಾರ ಕ್ಷೇತ್ರದ ಭೀಷ್ಮ ಕೆ.ಎಚ್. ಪಾಟೀಲ ಜನ್ಮ ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಇತಿಹಾಸ ಗೌರವಿಸೋಣ, ಭವಿಷ್ಯ ನಿರ್ಮಿಸೋಣ ಅಡಿ ಬರಹದಡಿ ನಡೆದ ಆರ್‌ಎಂಎಸ್ ಸಂಸ್ಥೆಯ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಗ್ ಸೈನ್ಸಸ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ಉಚಿತ ಶಿಕ್ಷಣ ದೊರೆಯುವಂತಾಗಬೇಕು. ಎಲ್ಲ ಸಂಸ್ಥೆಗಳು ಸ್ವಾವಲಂಬಿಗಳಾಗಬೇಕು ಎನ್ನುವ ಕೆ.ಎಚ್. ಪಾಟೀಲ ಅವರ ಚಿಂತನೆಗಳನ್ನು ಸಾಮಾಜಿಕವಾಗಿ, ರಾಜಕೀಯವಾಗಿ ಪ್ರಬಲವಾಗಿಸುವ ನೈತಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗುಣಮಟ್ಟದ ಶಿಕ್ಷಣ ಕೆ.ಎಚ್. ಪಾಟೀಲ ಅವರ ವಿಶೇಷ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆರ್‌ಎಂಎಸ್ ಸಂಸ್ಥೆಯು ಕಿಡ್ನಿ ಕಸಿ ಅತ್ಯಾಧುನಿಕ ಕೇಂದ್ರ ಸ್ಥಾಪನೆ ಹಾಗೂ ಯಶಸ್ವಿ ಚಿಕಿತ್ಸೆ ನೀಡಿದೆ. ಅದೇ ರೀತಿ ಇನ್ಸಿಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಕಟ್ಟಡ ಲೋಕಾರ್ಪಣೆಗೊಳಿಸುವ ಮೂಲಕ ಕೆ.ಎಚ್. ಪಾಟೀಲ ಅವರ ಕನಸುಗಳನ್ನು ನನಸಾಗಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಕೆ.ಎಚ್. ಪಾಟೀಲ ಅವರ ಜನ್ಮಶತಮಾನೋತ್ಸವ ಅಂಗವಾಗಿ ವರ್ಷ ಪೂರ್ತಿ 52 ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಕೆ.ಎಚ್. ಪಾಟೀಲ ಅವರ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಮಾತನಾಡಿ, ವಿದ್ಯಾರ್ಥಿಗಳು ಬಡತನ-ಸಿರಿತನ, ಕಷ್ಟ-ಸುಖ ಏನೇ ಇರಲಿ ನಿತ್ಯ 18 ಗಂಟೆಗಳ ಕಾಲ ಓದಬೇಕು. ಉನ್ನತ ಅಧ್ಯಯನ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದರು.ಜೆ.ಕೆ. ಜಮಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಕೆ.ಎಚ್. ಪಾಟೀಲ ಅವರ ಜೀವನ ಹಾಗೂ ಶೋಷಣೆ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಹೊಂದಿದ್ದ ಚಿಂತನೆಯನ್ನು ಕಾರ್ಯರೂಪಕ್ಕೆ ತರಲು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಕೆಲಸಗಳನ್ನು ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಕೆ.ಎಚ್. ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಡಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆ.ಎಚ್. ಪಾಟೀಲ ಅವರು ಸಾಧನೆ ಮಾಡಿರುವ ಅಭಿವೃದ್ಧಿಯ ಪಥದಲ್ಲಿ ಹೆಜ್ಜೆ ಹಾಕೋಣ, ಅವರ ಪ್ರೇರಣಾದಾಯಕ ಕೆಲಸಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದು ಹೇಳಿದರು.ಈ ವೇಳೆ ಸಹಕಾರಿ ಭೀಷ್ಮ ಕೆ.ಎಚ್. ಪಾಟೀಲ ಅವರ ಜೀವನ, ರಾಜಕೀಯ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಾಧನೆ ಕುರಿತಾದ ಕಿರುಚಿತ್ರ ಪ್ರದರ್ಶಿಸಲಾಯಿತು. ನಂತರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಮೃದ್ಧಿ ಶ್ರೀಧರ ಸಿದ್ಲಿಂಗ್ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ವಿದ್ಯಾ ಮುದರಡ್ಡಿ, ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಮಾಬೂಬಿ ಭದ್ರಾಪೂರ, ಕಲಾ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಪಡೆದ ಪವಿತ್ರಾ ಹೊಸಳ್ಳಿ ಹಾಗೂ ನರ್ಸಿಂಗ್‌ನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶ್ರೀದೇವಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಮುಖಂಡರಾದ ಮೋಹನ ಹುಲಕೋಟಿ, ಬಿ.ಬಿ. ಅಸೂಟಿ, ಡಾ. ಸತೀಶ ಹೊಂಬಾಳಿ, ಡಾ. ಭಾವನಾ ಖೋನಾ, ಡಾ. ಬಸಯ್ಯ ಹಿರೇಮಠ, ಅಕ್ಬರಸಾಬ್ ಬಬರ್ಚಿ, ಪ್ರಭು ಬುರಬುರೆ, ಡಾ. ಪ್ಯಾರಾಲಿ ನೂರಾನಿ, ಅಪ್ಪಣ್ಣ ಇನಾಮತಿ, ಡಾ. ವೇಮನ ಸಾಹುಕಾರ, ಅಶೋಕ ಮಂದಾಲಿ ಇದ್ದರು. ಡಾ. ಎಸ್.ಆರ್. ನಾಗನೂರ ಸ್ವಾಗತಿಸಿದರು. ಐಶ್ವರ್ಯ ಹೂಲಿ ಪ್ರಾರ್ಥಿಸಿದರು. ಉಷಾ ಕಾರಂತ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬಾಹುಬಲಿ ಜೈನರ ನಿರೂಪಿಸಿದರು.ಲೋಕಾರ್ಪಣೆ: ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆಯಲ್ಲಿ ಹಳ್ಳಿ ಸೊಗಡಿನ ಕಲೆಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯ ಸ್ಮರಣಿಕೆ ಕೇಂದ್ರವನ್ನು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಹಾಗೂ ಸಚಿವ ಎಚ್.ಕೆ. ಪಾಟೀಲ ಲೋಕಾರ್ಪಣೆಗೊಳಿಸಿದರು.