ಕನ್ನಡಪ್ರಭ ವಾರ್ತೆ ಮಂಡ್ಯ
ನಾಗಮಂಗಲ ತಾಲೂಕಿನ ಹಿಂದಿನ ತಹಸೀಲ್ದಾರ್ ಎಲ್.ಎಂ.ನಂದೀಶ್, ಹಿಂದಿನ ಎಲ್‌ಎನ್‌ಡಿ ಶಿರಸ್ತೇದಾರ್ ಸಿ.ಪ್ರಸನ್ನಕುಮಾರ್, ಪ್ರಥಮ ದರ್ಜೆ ಸಹಾಯಕ ಎನ್.ಪಿ.ಶಶಿಧರ್, ದ್ವಿತೀಯ ದರ್ಜೆ ಸಹಾಯಕರಾದ ಬಿ.ಸಿ.ಸತೀಶ್ ಮತ್ತು ಎ.ಡಿ.ಅಭಿನಂದನ್ ವಿರುದ್ಧ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, ೧೯೫೭ರ ನಿಯಮ ೧೧ ಮತ್ತು ೧೧ಎ ನಿಯಮಾವಳಿಗಳ ನಿಯಮ ೧೩ರಡಿ ಜಂಟಿ ವಿಚಾರಣೆಗೆ ಆದೇಶಿಸಿದ್ದು ಶಿಸ್ತು ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ನಾಗಪ್ಪ ಎಸ್.ಪರೀಟ್ ಆದೇಶಿಸಿದ್ದಾರೆ.
ಹಿಂದಿನ ತಹಸೀಲ್ದಾರ್ ಕೆ.ಎಂ.ಸ್ವಾಮಿಗೌಡ ವಯೋನಿವೃತ್ತಿ ಹೊಂದಿರುವುದರಿಂದ ಅವರನ್ನು ಜಂಟಿ ಇಲಾಖಾ ವಿಚಾರಣೆ ನಡೆಸಲು ಅವಕಾಶವಿರುವುದಿಲ್ಲವಾದ ಕಾರಣ ಅವರಿಗೆ ಮಾತ್ರ ಸಂಬಂಧಿಸಿದಂತೆ ಇಲಾಖಾ ವಿಚಾರಣಾ ಪ್ರಕರಣವನ್ನು ಕಂದಾಯ ಇಲಾಖೆಗೆ ಹಿಂದಿರುಗಿಸಿ ಅವರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ.ತನಿಖಾ ತಂಡ ರಚನೆ:
೬೯೪ರಲ್ಲಿ ೩೫೯ ಪ್ರಕರಣಗಳಿಗೆ ಮಂಜೂರಾತಿ:
ಬಗರ್‌ಹುಕುಂ ಸಾಗುವಳಿ ಮಂಜೂರಾತಿಗೆ ಪರಿಗಣಿಸಿರುವ ೬೯೪ ಅರ್ಜಿಗಳು ಸಕ್ರಮೀಕಣ ಸಮಿತಿ ಸಭೆಯ ನಡವಳಿಯಲ್ಲಿ ನಮೂದಾಗಿರಲಿಲ್ಲ. ಆದರೂ ಸಹ ೬೯೪ ಪ್ರಕರಣಗಳ ಪೈಕಿ ೩೫೯ ಪ್ರಕರಣಗಳಲ್ಲಿ ಮಂಜೂರಾತಿ ಆದೇಶ ನೀಡಿ ಸಾಗುವಳಿ ಚೀಟಿ ವಿತರಿಸಿದ್ದರು. ಉಳಿದ ೩೩೫ ಪ್ರಕರಣಗಳಲ್ಲಿ ಕಿಮ್ಮತ್ತು ಪಾವತಿಸಲು ನೋಟೀಸ್ ನೀಡಿದ್ದರು. ಸಾಗುವಳಿ ಚೀಟಿಯ ನೈಜತೆಯನ್ನು ಪರಿಶೀಲಿಸದೆ ನೇರವಾಗಿ ತಹಸೀಲ್ದಾರ್ ಹಂತದಲ್ಲಿಯೇ ಸಾಗುವಳಿ ಚೀಟಿ ನೀಡಲು ಕಾನೂನುಬಾಹೀರವಾಗಿ ಕ್ರಮ ವಹಿಸಿರುವುದು ಕಂಡುಬಂದಿತ್ತು.ವರ್ಗಾವಣೆ ನಂತರವೂ ಸಾಗುವಳಿ ಚೀಟಿಗೆ ಸಹಿ:
ಎಲ್.ಎಂ.ನಂದೀಶ್ ಅವರು ಕರ್ತವ್ಯದಿಂದ ಬಿಡುಗಡೆಗೊಂಡ ನಂತರವೂ ಸಾಗುವಳಿ ಚೀಟಿಗೆ ಸಹಿ ಮಾಡಿದ್ದರು. ಬಗರ್‌ಹುಕುಂ ಸಕ್ರಮೀಕರಣ ಸಮಿತಿ ಸಭೆಯಲ್ಲಿ ವಜಾ ಮಾಡಿರುವ ಕೆಲವೊಂದು ಅರ್ಜಿಗಳನ್ನು ಸಕ್ಷಮ ಪ್ರಾಧಿಕಾರದ ಆದೇಶವಿಲ್ಲದೆ ಸಮಿತಿಯು ಅರ್ಜಿಯನ್ನು ಅಂಗೀಕರಿಸದಿದ್ದರೂ ಸಾಗುವಳಿ ಚೀಟಿ ನೀಡಲಾಗಿತ್ತು. ಕೆಲವೊಂದು ಅರ್ಜಿಗಳಲ್ಲಿ ಮೂಲ ಅರ್ಜಿದಾರರ ಹೆಸರನ್ನು ತಿದ್ದಿ ಹೊಸದಾಗಿ ಅರ್ಜಿದಾರರ ಹೆಸರುಗಳನ್ನು ಬರೆದು ಸಾಗುವಳಿ ಚೀಟಿ ನೀಡಲಾಗಿತ್ತು. ಬಗರ್‌ಹುಕುಂ ಸಕ್ರಮೀಕರಣ ಸಮಿತಿಯ ಸದಸ್ಯರಾಗಿದ್ದ ಅನುರಾಧ ಅವರಿಗೂ ಸಹ ಜಮೀನು ಮಂಜೂರು ಮಾಡಿರುವುದು ವಿಶೇಷವಾಗಿತ್ತು.ಕಿಮ್ಮತ್ತು ಪಾವತಿಸದಿದ್ದರೂ ಸಾಗುವಳಿ ಚೀಟಿ:
ಅರಣ್ಯ ವ್ಯಾಪ್ತಿಗೆ ಒಳಪಡುವ ಸರ್ವೇ ನಂಬರ್‌ನಲ್ಲಿ ಅರಣ್ಯ ಇಲಾಖೆ ಅಭಿಪ್ರಾಯ ಪಡೆಯದೆ ಜಮೀನು ಮಂಜೂರಾತಿಗೆ ಕ್ರಮ ವಹಿಸಿ ಸಾಗುವಳಿ ಚೀಟಿ ನೀಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಕಿಮ್ಮತ್ತು ಪಾವತಿಸಲು ಅರ್ಜಿದಾರರಿಗೆ ನೋಟೀಸ್ ನೀಡಿದ್ದರೆ, ಹಲವಾರು ಪ್ರಕರಣಗಳಲ್ಲಿ ಕಿಮ್ಮತ್ತು ಪಾವತಿಸುವ ಮೊದಲೇ ಮಂಜೂರಾತಿ ಆದೇಶ, ಸಾಗುವಳಿ ಚೀಟಿಗೆ ಸಹಿ ಮಾಡಿರುವುದು ಕಂಡುಬಂದಿದೆ.ಕೆಲವೊಂದು ಕಡತಗಳಲ್ಲಿ ದರಖಾಸ್ತು ಮೆಮೋರಾಂಡಂನಲ್ಲಿ ವಿಷಯ ನಿರ್ವಾಹಕರು, ಶಿರಸ್ತೇದಾರ್, ತಹಸೀಲ್ದಾರ್ ಅವರು ಪರಿಶೀಲಿಸಿ ಸಹಿ ಮಾಡಿರುವುದಿಲ್ಲ. ಅಭಿಪ್ರಾಯ, ಆದೇಶ ಬರೆದಿಲ್ಲ. ಗ್ರಾಮಸ್ಥರ ಮಹಜರ್ ಕಲಂನಲ್ಲಿ ಮಹಜರ್ ಮಾಡಿ ಗ್ರಾಮಸ್ಥರ ಸಹಿ ಪಡೆದಿರುವುದಿಲ್ಲ.
ಹೆಚ್ಚು ವಿಸ್ತೀರ್ಣ ಮಂಜೂರು:ಅರ್ಜಿದಾರರು ಕೋರಿರುವ ವಿಸ್ತೀರ್ಣಕ್ಕಿಂತ ಹೆಚ್ಚಿನ ವಿಸ್ತೀರ್ಣ ಮಂಜೂರು ಮಾಡಿರುವುದು, ಭೂಮಾಪಕರು ತಯಾರಿಸಿರುವ ನಕ್ಷೆಯಲ್ಲಿ ನಮೂದಿಸಿರುವ ವಿಸ್ತೀರ್ಣಕ್ಕಿಂತ ಹೆಚ್ಚಿನ ವಿಸ್ತೀರ್ಣ ಮಂಜೂರು ಮಾಡಿರುವುದು ಹಾಗೂ ಸಕ್ರಮೀಕರಣ ಸಮಿತಿ ಸಭೆಗೆ ಮಂಡಿಸಿದ ವಿಸ್ತೀರ್ಣಕ್ಕೂ ಸಾಗುವಳಿ ಚೀಟಿ ನೀಡಿದ ವಿಸ್ತೀರ್ಣಕ್ಕೂ ವ್ಯತ್ಯಾಸವಿರುವುದು ಕೆಲವೊಂದು ಪ್ರಕರಣಗಳಲ್ಲಿ ಗೋಚರಿಸಿದೆ.
ಒಂದೇ ಕುಟುಂಬದವರಿಗೂ ಮಂಜೂರು:ಅನೇಕ ಪ್ರಕರಣಗಳಲ್ಲಿ ಒಂದೇ ಕುಟುಂಬದ ತಂದೆ- ಮಗ, ಅತ್ತೆ- ಸೊಸೆ, ಗಂಡ- ಹೆಂಡತಿ ಅವರಿಗೆ ಮಂಜೂರು ಮಾಡಿರುವುದು, ದೊಡ್ಡ ಹಿಡುವಳಿದಾರರಿಗೂ ಜಮೀನು ಮಂಜೂರು ಮಾಡಿರುವುದು ತನಿಖೆಯಿಂದ ಬಹಿರಂಗವಾಗಿದೆ.
ತನಿಖಾ ತಂಡದ ವರದಿಯನ್ವಯ ಸರ್ಕಾರಿ ಜಮೀನುಗಳ ಭೂ ಮಂಜೂರಾತಿಯಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ, ನಿಯಮಗಳು, ಮಾನದಂಡಗಳನ್ನು ಉಲ್ಲಂಘಿಸಿ ಅಕ್ರಮ ಭೂ ಮಂಜೂರಾತಿಯಲ್ಲಿ ಭಾಗಿಯಾಗಿರುವ ಅಧಿಕಾರಿ- ನೌಕರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ೬ ಮಾರ್ಚ್ ೨೦೨೫ರಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.