ಮಂಗಳೂರು: ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ಹೆದ್ದಾರಿ ಹಾಗೂ ರೈಲು ಮಾರ್ಗ ಅಭಿವೃದ್ಧಿಗೆ ಸಂಬಂಧಿಸಿ ಜಂಟಿ ಕಾರ್ಯಸಾಧ್ಯತಾ ವರದಿ(ಡಿಪಿಆರ್) ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದು ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾಡಿ ಘಾಟ್ ಹೆದ್ದಾರಿ ಅಭಿವೃದ್ಧಿಪಡಿಸುವ ದಿಶೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಹಾಗೂ ಶಿರಾಡಿ ಘಾಟ್‌ನಲ್ಲಿ ಪ್ರತ್ಯೇಕ ರೈಲು ಮಾರ್ಗ ರಚಿಸಲು ರೈಲ್ವೆ ಇಲಾಖೆ ಕೂಡ ಡಿಪಿಆರ್ ಸಿದ್ಧಪಡಿಸಲು ಮುಂದಾಗಿದೆ. ಎರಡು ಇಲಾಖೆಗಳು ಪ್ರತ್ಯೇಕವಾಗಿ ಡಿಪಿಆರ್ ಸಿದ್ಧಪಡಿಸಿದರೆ ಅನುಮೋದನೆಗೆ ಕಷ್ಟವಾಗುತ್ತದೆ. ಇದರ ಬದಲು ಎರಡು ಇಲಾಖೆಗಳು ಸೇರಿ ಒಂದೇ ಡಿಪಿಆರ್ ಸಿದ್ಧಪಡಿಸಬೇಕು. ಆಗ ಪರಿಸರ ಇಲಾಖೆಯ ನಿರಕ್ಷೇಪಣೆ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದರು.
ಕೊಂಕಣ ರೈಲ್ವೆ ಹಾಗೂ ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ನಿಗಮ(ಎಚ್‌ಎಂಆರ್‌ಡಿಸಿಎಲ್)ವನ್ನು ಭಾರತೀಯ ರೈಲ್ವೆ ಜೊತೆ ವಿಲೀನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಜನಾಂದೋಲನವೂ ನಡೆಯಬೇಕು ಎಂದರು.
ಸಂಪುಟ ಒಪ್ಪಿಗೆ ನಿರೀಕ್ಷೆ:
ಮಂಗಳೂರು ಕೋಸ್ಟ್‌ಗಾರ್ಡ್ ಅಕಾಡೆಮಿ 2017ರಲ್ಲಿ ಘೋಷಣೆಯಾಗಿದ್ದು, ಒಂದು ಸಾವಿರ ಕೋಟಿ ರು. ಮೊತ್ತವನ್ನು ಕಾಮಗಾರಿಗೆ ಪ್ರಸ್ತಾಪಿಸಲಾಗಿದೆ. ಈ ಮೊತ್ತಕ್ಕೆ ಕೇಂದ್ರ ಸಂಪುಟದ ಒಪ್ಪಿಗೆ ಬೇಕಾಗಿದ್ದು, ಈ ಬಗ್ಗೆ ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.
ಹೆದ್ದಾರಿ ದುರಸ್ತಿಗೆ 26 ಕೋಟಿ ರು.:
ಸುರತ್ಕಲ್- ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ 26 ಕೋಟಿ ರು. ವಿಶೇಷ ಅನುದಾನವನ್ನು ಕೇಂದ್ರ ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ ಬಿಡುಗಡೆಗೊಳಿಸಿದ್ದಾರೆ. ಸುರತ್ಕಲ್‌ನಲ್ಲಿ ಟೋಲ್ ಸಂಗ್ರಹ ರದ್ದುಪಡಿಸಿರುವುದರಿಂದ ಈ ವಿಶೇಷ ಅನುದಾನ ಲಭಿಸಿದೆ. ಮಳೆಗಾಲ ಮುನ್ನ ಈ ಹೆದ್ದಾರಿ ದುರಸ್ತಿ ಪೂರ್ಣಗೊಳ್ಳಲಿದೆ. 12 ಕಿ.ಮೀ. ರಸ್ತೆ ದುರಸ್ತಿ, ತುಂಬೆಯಲ್ಲಿ ಹೆದ್ದಾರಿಯಲ್ಲಿ ನೀರು ನಿಲ್ಲದಂತೆಯೂ ಕಾಮಗಾರಿ ನಡೆಯಲಿದೆ ಎಂದರು.
ಮಂಗಳೂರಿನ ಅಂತಾರಾಷ್ಚ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 45 ಎಕರೆ ಭೂಸ್ವಾಧೀನದ ಅವಶ್ಯಕತೆ ಇದ್ದು, ಅದಾನಿ ಕಂಪನಿ ಹಣ ಹೊಂದಿಸುವ ಭರವಸೆ ನೀಡಿದೆ. ರಾಜ್ಯ ಸರ್ಕಾರ ಈಗಾಗಲೇ ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮಂಗಳೂರು ವಿಮಾನ ನಿಲ್ದಾಣ ಸ್ಥಾಪನೆಯಾಗಿ 50 ವರ್ಷ ಹಾಗೂ ಉಳ್ಳಾಲದ ವೀರರಾಣಿ ಅಬ್ಬಕ್ಕ ಜಯಂತಿಯ 500ನೇ ವರ್ಷಾಚರಣೆ ನೆನಪಿಗೋಸ್ಕರವಾದರೂ ಹೆದ್ದಾರಿ, ರೈಲ್ವೆ, ವಿಮಾನ ನಿಲ್ದಾಣ ಸಮಗ್ರ ಅಭಿವೃದ್ಧಿಯಾಗಬೇಕಾಗಿದೆ ಎಂದರು.
ಶಾಸಕ ವೇದವ್ಯಾಸ್ ಕಾಮತ್, ಮುಖಂಡರಾದ ಪ್ರೇಮಾನಂದ ಶೆಟ್ಟಿ, ರಮೇಶ್ ಕಂಡೆಟ್ಟು, ಸಂಜಯ ಪ್ರಭು, ವಸಂತ ಪೂಜಾರಿ, ಮೋಹನ್‌ರಾಜ್, ಅರುಣ್ ಶೇಟ್ ಇದ್ದರು.