ಎಸ್ಐಆರ್ ಪ್ರಕ್ರಿಯೆ ರದ್ದುಪಡಿಸಲು ಸಂಯುಕ್ತ ಹೋರಾಟ

KannadaprabhaNewsNetwork |  
Published : Oct 24, 2026, 01:30 AM IST
23ಕೆಡಿವಿಜಿ1-ದೇಶಾದ್ಯಂತ ಎಸ್ಐಆರ್ ಪ್ರಕ್ರಿಯೆ ರದ್ಧುಪಡಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಸಂಯುಕ್ತ ಹೋರಾಟ-ಕರ್ನಾಟಕದಿಂದ ದಾವಣಗೆರೆಯಲ್ಲಿ ಶುಕ್ರವಾರ ಪ್ರತಿಭಟಿಸಿ, ಎಸಿ ಕಚೇರಿ ಮುಖಾಂತರ ರಾಷ್ಟ್ರಪತಿಗೆ ಮನವಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ದೇಶಾದ್ಯಂತ ಕೈಗೊಂಡ ಎಸ್ಐಆರ್ ಪ್ರಕ್ರಿಯೆ ರದ್ದುಪಡಿಸಿ, ಸಿಇಸಿ ಜ್ಞಾನೇಶಕುಮಾರ ಅವರನ್ನು ವಜಾಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳನ್ನು ಒಳಗೊಂಡ ಸಂಯುಕ್ತ ಹೋರಾಟ- ಕರ್ನಾಟಕ ಜಿಲ್ಲಾ ಘಟಕದಿಂದ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

- ಸಿಇಸಿ ಜ್ಞಾನೇಶಕುಮಾರ ವಜಾಗೊಳಿಸಿ, ತನಿಖೆ ಕೈಗೊಳ್ಳುವಂತೆ ವಿವಿಧ ಸಂಘಟನೆಗಳ ಒತ್ತಾಯ । ರಾಷ್ಟ್ರಪತಿಗೆ ಮನವಿ ರವಾನೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶಾದ್ಯಂತ ಕೈಗೊಂಡ ಎಸ್ಐಆರ್ ಪ್ರಕ್ರಿಯೆ ರದ್ದುಪಡಿಸಿ, ಸಿಇಸಿ ಜ್ಞಾನೇಶಕುಮಾರ ಅವರನ್ನು ವಜಾಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳನ್ನು ಒಳಗೊಂಡ ಸಂಯುಕ್ತ ಹೋರಾಟ- ಕರ್ನಾಟಕ ಜಿಲ್ಲಾ ಘಟಕದಿಂದ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಯುಕ್ತ ಕರ್ನಾಟಕದ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಘೋಷಣೆ ಕೂಗಿ ಪ್ರತಿಭಟಿಸಿದ ರೈತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರು ನಂತರ ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿಗಳ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಅರ್ಪಿಸಿದರು.

ಸಂಘಟನೆ ಮುಖಂಡರು ಮಾತನಾಡಿ, ಎಸ್‌ಕೆಎಂ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ಎಸ್ಐಆರ್ ರದ್ದುಪಡಿಸುವಂತೆ, ಮತದಾರರ ಪಟ್ಟಿಯಿಂದ ಹೆಸರು ಕೈ ಬಿಟ್ಟವರನ್ನು ಮತ್ತೆ ಪಟ್ಟಿಗೆ ಸೇರ್ಪಡೆ ಮಾಡಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರನ್ನು ಆ ಸ್ಥಾನದಿಂದ ವಜಾ ಮಾಡಬೇಕು. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲೂ ನಾವೆಲ್ಲರೂ ಪಾಲ್ಗೊಳ್ಳಲಿದ್ದೇವೆ ಎಂದರು.

ದೆಹಲಿ ಪೊಲೀಸರು ಮತ್ತು ಆಡಳಿತಾರೂಢ ಸರ್ಕಾರದ ಸಂಘಟನೆಗಳ ಕ್ರಿಮಿನಲ್ ಶಕ್ತಿಗಳು ನವದೆಹಲಿಯಲ್ಲಿ ವಿದ್ಯಾರ್ಥಿನಿಯರು ಸೇರಿದಂತೆ ಪ್ರತಿಭಟನಾಕಾರರ ಮೇಲೆ ನಡೆಸುತ್ತಿರುವ ಕ್ರೂರ ಪ್ರಹಾರ ಮತ್ತು ಚಿತ್ರಹಿಂಸೆಯನ್ನು ಖಂಡಿಸುತ್ತೇವೆ. ಒಂದುವೇಳೆ ನರೇಂದ್ರ ಮೋದಿ ಸರ್ಕಾರವು ಇದೇ ರೀತಿ ದಾಳಿ, ದೌರ್ಜನ್ಯ ಮುಂದುವರಿಸಿದರೆ ಮಹಿಳೆಯರು, ವಿದ್ಯಾರ್ಥಿಗಳು, ಯುವಜನರನ್ನು ರಕ್ಷಿಸಲು ದೇಶದ ಎಲ್ಲೆಡೆಯಿಂದ ರೈತರು ದೆಹಲಿಗೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.

ದೇಶದಲ್ಲಿ ಪ್ರತಿಭಟಿಸುವುದು ನಮ್ಮೆಲ್ಲರ ಮೂಲಭೂತ ಹಕ್ಕು. ಶಾಂತಿಯುತ ಹೋರಾಟ ನಡೆಸಿದ್ದವರ ಮೇಲೆ ದಾಳಿ ಮಾಡುವುದು ಸಂವಿಧಾನ ಮತ್ತು ಕಾನೂನಿನ ಆಡಳಿತಕ್ಕೆ ವಿರುದ್ಧವಾಗಿದೆ. ರಾಜಧಾನಿಯಲ್ಲಿ ನಡೆಯುತ್ತಿರುವ ವ್ಯಾಪಕ ಅಪರಾಧಗಳನ್ನು ಸುಮೋಟೋ ದೂರುಗಳಾಗಿ ಸ್ವೀಕರಿಸದ ಮತ್ತು ಶಿಕ್ಷಣದ ವಿಚಾರದಲ್ಲಿ ಕ್ರಮ ಕೈಗೊಳ್ಳದ ನ್ಯಾಯಾಂಗ ಹಾಗೂ ಸುಪ್ರೀಂ ಕೋರ್ಟ್ ವಿರುದ್ಧ ಎಸ್‌ಕೆಎಂ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತದೆ. ಹೋರಾಟದಿಂದಾಗಿ ಕಾನೂನು, ಸುವ್ಯಸ್ಥೆ ಕುಸಿದಿದೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟದಲ್ಲಿ ದೇಶಾದ್ಯಂತ ರೈತರು, ಸಾರ್ವಜನಿಕರು ಒಂದಾಗಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುತ್ತಿದ್ದೇವೆ. ಎಸ್ಐಆರ್ ಪ್ರಕ್ರಿಯೆ ತಕ್ಷಣ ರದ್ದುಪಡಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್‌ಗೆ ವಜಾ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಪಾರದರ್ಶಕತೆ ಇಲ್ಲದೇ, ಮತದಾರರ ಪಟ್ಟಿಯಿಂದ ತೆಗೆದು ಹಾಕಲಾದ 13.41 ಕೋಟಿ ನಾಗರೀಕರ ಮತದಾನದ ಹಕ್ಕನ್ನು ಮರಳಿಸಬೇಕು. 2023ರ ಕಾಯ್ದೆಗೆ ತಿದ್ದುಪಡಿ ತಂದು, ಆಯ್ಕೆ ಸಮಿತಿಯಲ್ಲಿ ಸಂಪುಟ ಸದಸ್ಯರ ಬದಲಿಗೆ ನ್ಯಾಯಮೂರ್ತಿಗಳನ್ನು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೂ ನಮ್ಮ ಹೋರಾಟ ನಿರಂತರ ನಡೆಯಲಿದೆ ಎಂದು ಎಚ್ಚರಿಸಿದರು.

ಸಂಯುಕ್ತ ಹೋರಾಟ-ಕರ್ನಾಟಕದ ಜಿಲ್ಲಾ ಮುಖಂಡರಾದ ಆವರಗೆರೆ ಎಚ್.ಜಿ.ಉಮೇಶ, ಹೊನ್ನೂರು ಮುನಿಯಪ್ಪ, ಬುಳ್ಳಾಪುರ ಹನುಮಂತಪ್ಪ, ಮಧು ತೊಗಲೇರಿ, ಸತೀಶ ಅರವಿಂದ, ಹೆಗ್ಗೆರೆ ರಂಗಪ್ಪ, ಅರುಣಕುಮಾರ, ಈ.ಶ್ರೀನಿವಾಸ, ರಮೇಶ ಸಿ.ದಾಸರ್, ಡಿ.ಎಲ್‌.ಕುಬೇರಪ್ಪ, ಹಿರೇಕೋಗಲೂರು ಎಚ್.ಎಸ್.ಪ್ರಕಾಶ ಹೊಸಮನಿ, ತಿಪ್ಪೇಸ್ವಾಮಿ ಅಣಬೇರು, ಮಂಜುನಾಥ ಕುಕ್ಕವಾಡ, ಎಚ್.ಪಿ.ಉಮೇಸ, ಕೆ.ಎಚ್.ಆನಂದರಾಜು, ಪವಿತ್ರಾ, ಸುರೇಶ ಯರಗುಂಟೆ, ಐರಣಿ ಚಂದ್ರು, ನಿಂಗರಾಜು ಶಿರಮಗೊಂಡನಹಳ್ಳಿ ಇತರರು ಇದ್ದರು.

- - -

* ಬೇಡಿಕೆಗಳೇನೇನು?

- ದಾವಣಗೆರ ಜಿಲ್ಲೆಯಲ್ಲಿ ತೀವ್ರ ಬರದ ಹಿನ್ನೆಲೆ ಬರ ಪರಿಹಾರ, ಬೆಳೆಹಾನಿ ಪರಿಹಾರದ ಹಣ ಸಮರ್ಪಕವಾಗಿ ಬಿಡುಗಡೆ ಮಾಡಬೇಕು.

- ಗ್ರಾಮೀಣರಿಗೆ ವರ್ಷವಿಡೀ ಉದ್ಯೋಗ ಕಲ್ಪಿಸಬೇಕು. ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡಬೇಕು.

- ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. **MSP@C2+50%** ಗಾಗಿ ಕಾನೂನುಬದ್ಧ ಗ್ಯಾರಂಟಿ ನೀಡಬೇಕು.

- ಮುಕ್ತ ವ್ಯಾಪಾರ ಒಪ್ಪಂದ ರದ್ದುಪಡಿಸಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು.

- ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ನೀಡಬೇಕು.

- ಪಿಂಚಣಿ ಮತ್ತು ಸಮಗ್ರ ವಿಮಾ ಸೌಲಭ್ಯ ಕಲ್ಪಿಸಬೇಕು.

- ವಿದ್ಯುತ್ ಖಾಸಗೀಕರಣ ಮತ್ತು ಬಿತ್ತನೆ ಬೀಜ ವಿಧೇಯಕ 2025 ರದ್ದುಗೊಳಿಸಬೇಕು.

- ರೈತರು ಮತ್ತು ಆದಿವಾಸಿಗಳ ಭೂಮಿ ಹಕ್ಕುಗಳ ರಕ್ಷಣೆ ಮಾಡಬೇಕು.

- 4 ಕಾರ್ಮಿಕ ಸಂಹಿತೆ ಹಿಂಪಡೆಯಬೇಕು, ಉದ್ಯೋಗ ಖಾತ್ರಿ ಯೋಜನೆ ಮರು ಸ್ಥಾಪಿಸಬೇಕು.

- - -

-23ಕೆಡಿವಿಜಿ1:

ದೇಶಾದ್ಯಂತ ಎಸ್ಐಆರ್ ಪ್ರಕ್ರಿಯೆ ರದ್ದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಸಂಯುಕ್ತ ಹೋರಾಟ- ಕರ್ನಾಟಕದಿಂದ ಶುಕ್ರವಾರ ದಾವಣಗೆರೆಯಲ್ಲಿ ಪ್ರತಿಭಟಿಸಿ ಎಸಿ ಕಚೇರಿ ಮುಖಾಂತರ ರಾಷ್ಟ್ರಪತಿಗೆ ಮನವಿ ಅರ್ಪಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಅಂತಾರಾಷ್ಟ್ರೀಯ ಬೌದ್ದ ಮಹಾಸಮ್ಮೇಳನ
ಬೆಳೆ, ಕೃಷಿ ಸಾಲ ಬಲವಂತ ವಸೂಲಿ ಸಲ್ಲ: ಜಿಲ್ಲಾಧಿಕಾರಿ ಶ್ರೀರೂಪ