ಧಾರವಾಡ: ಅತಿಯಾದ ಮತ್ತು ನಿರಂತರ ಮಳೆಯಿಂದಾಗಿ ಹಾನಿ ಆಗಿರುವ ಬೆಳೆಗಳ ಜಂಟಿ ಸಮೀಕ್ಷೆಯನ್ನು ಮುಂದಿನ ಏಳು ದಿನಗಳಲ್ಲಿ ಪೂರ್ಣಗೊಳಿಸಿ, ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ತುರ್ತಾಗಿ ವರದಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಶನಿವಾರ ಬೆಳಗ್ಗೆ ಬೆಂಗಳೂರಿನ ತಮ್ಮ ಗೃಹ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ, ಸಿಇಒ ಮತ್ತು ಎಸ್.ಪಿ. ಅವರೊಂದಿಗೆ ವಿವಿಧ ಜಿಲ್ಲೆಗಳಲ್ಲಿ 2024ರ ಹಿಂಗಾರು ಅವಧಿಯಲ್ಲಿ ಅಧಿಕ ಮಳೆಯಿಂದ ಉಂಟಾದ ಹಾನಿ ಮತ್ತು ನಷ್ಟದ ಕುರಿತು ಪರಿಶೀಲನಾ ಸಭೆ ಜರುಗಿಸಿದ ಅವರು, ಜನ, ಜಾನುವಾರು ಜೀವ ಹಾನಿ ಸಂಭವಿಸಿದ 48 ಗಂಟೆಯಲ್ಲಿ ನಿಯಮಾನುಸಾರ ಪರಿಹಾರ ನೀಡಬೇಕು. ಮನೆ ಹಾನಿ ಪ್ರಾಥಮಿಕ ವರದಿ ದಾಖಲಿಸಬೇಕು ಎಂದು ಆದೇಶಿಸಿದರು.ಜೀವ ಹಾನಿ, ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹೋಗಿ, ಸಾರ್ವಜನಿಕರನ್ನು ಭೇಟಿ ಮಾಡಿ, ಸಾಂತ್ವನ ಹೇಳಬೇಕು ಮತ್ತು ಹಾನಿ ಪರಿಶೀಲಿಸಿ, ಸೂಕ್ತ ಪರಿಹಾರ ನೀಡಲು ಕ್ರಮವಹಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.
ಹಸಿರು ಪಟಾಕಿಗೆ ಮಾತ್ರ ಅವಕಾಶದೀಪಾವಳಿ ಹಬ್ಬ ಬರುತ್ತಿದೆ, ಹಸಿರು ಪಟಾಕಿ ಹಚ್ಚಲು ಮಾತ್ರ ಅವಕಾಶ ನೀಡಬೇಕು. ಪಟಾಕಿ ಮಾರಾಟಕ್ಕೆ ನಿಗದಿತ ಸ್ಥಳ ಗುರುತಿಸಿ, ಅವಕಾಶ ನೀಡಬೇಕು. ಪಟಕಿ ದಾಸ್ತಾನು ಸ್ಥಳಗಳಿಗೆ, ಪಟಾಕಿ ಮಾರಾಟ ಅಂಗಡಿಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ಹಸಿರು ಪಟಾಕಿ ಮಾತ್ರ ಇರುವ ಬಗ್ಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು. ಬೆಳಗ್ಗೆ 8ರಿಂದ ರಾತ್ರಿ 10ರ ವರೆಗೆ ಮಾತ್ರ ಪಟಾಕಿ ಹಚ್ಚಲು ಅವಕಾಶ ನೀಡಬೇಕು. ಈ ನಿಯಮಗಳನ್ನು ಮೀರಿ, ಕಾನೂನು ಉಲ್ಲಂಘನೆ ಮಾಡುವವರ ಮೇಲೆ ಎಫ್.ಐ.ಆರ್. ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.
ನಿರಂತರ ಮಳೆಯಿಂದಾಗಿ ಜಿಲ್ಲೆಯ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಜಿಪಂ ಸಿಇಒ ತಮ್ಮ ಜಿಲ್ಲೆ ವ್ಯಾಪ್ತಿಯ ಎಲ್ಲ ಕೆರೆಗಳ ಹೂಳೆತ್ತುವ, ಒತ್ತುವರಿ ತೆರವುಗೊಳಿಸುವ ಕಾರ್ಯ ಮಾಡಬೇಕು ಮತ್ತು ಕೆರೆಗಳ ಒಡ್ಡು, ಕಟ್ಟೆ ಒಡೆಯದಂತೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.ಮನೆ ಹಾನಿ ವಿಸ್ತರಣೆ
ಮನೆ ಹಾನಿ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೆಪ್ಟೆಂಬರ್ ವರೆಗೆ ಹೊರಡಿಸಿದ್ದ ಆದೇಶವನ್ನು ನವೆಂಬರ್ 30ರ ವರೆಗೆ ಮುಂದುವರಿಸಲಾಗುವುದು. ಈ ಕುರಿತು ಆದೇಶವನ್ನು ಸದ್ಯದಲ್ಲಿ ಹೊರಡಿಸಲಾಗುವುದು. ಅದರಂತೆ ಮನೆ ಹಾನಿ ಪರಿಹಾರ ವಿತರಿಸಬೇಕೆಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಮತ್ತೆ ಬೀಜಕ್ಕೆ ಮನವಿ
ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೆನ್ಸದಲ್ಲಿ ಖುದ್ದು ಹಾಜರಿದ್ದ ಸಚಿವ ಸಂತೋಷ ಲಾಡ್, ಅತಿಯಾದ ಮತ್ತು ನಿರಂತರ ಮಳೆಯಿಂದಾಗಿ ಹಿಂಗಾರು ಬಿತ್ತನೆ ಬೀಜಗಳು ಮೊಳಕೆ ಮೂಡದೆ ಭೂಮಿಯಲ್ಲಿಯೇ ನಷ್ಟವಾಗಿವೆ. ಕಡಲೆ ಮರು ಬಿತ್ತನೆಗೆ ಇನ್ನೂ ಹಂಗಾಮು ಇರುವುದರಿಂದ ಈಗಾಗಲೇ ಬೀಜ ಪಡೆದ ರೈತರಿಗೂ ಸಬ್ಸಿಡಿ ದರದಲ್ಲಿ ಕಡಲೆ ಬೀಜ ವಿತರಣೆಗೆ ಆದೇಶ ಮಾಡಬೇಕು ಎಂದು ಮನವಿ ಮಾಡಿದರು.ಮುಖ್ಯಮಂತ್ರಿಗಳೊಂದಿಗೆ ಕಂದಾಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು, ಕೃಷಿ ಸಚಿವರು, ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಕೃಷಿ ಇಲಾಖೆ ಆಯುಕ್ತರು, ಇತರ ಅಧಿಕಾರಿಗಳು ಇದ್ದರು.
2024ರ ಹಿಂಗಾರು ಹಂಗಾಮಿನ ಅ. 1ರಿಂದ 25ರ ವರೆಗೆ ವಾಡಿಕೆ ಮಳೆ 95 ಮಿಮೀ ಇದ್ದದ್ದು, 208 ಮಿಮೀ ವಾಸ್ತವಿಕ ಮಳೆ ಆಗಿದೆ. ಇದು ವಾಡಿಕೆಗಿಂತ ಶೇ. 120ರಷ್ಟು ಹೆಚ್ಚುವರಿ ಆಗಿದೆ. ನಿರಂತರ ಮಳೆಯಿಂದಾಗಿ 65,397 ಪ್ರದೇಶದ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಪ್ರಗತಿಯಲ್ಲಿದ್ದು, ಒಂದು ವಾರದಲ್ಲಿ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ₹1158.66 ಲಕ್ಷ ಮತ್ತು ಎಲ್ಲ ತಾಲೂಕುಗಳ ತಹಸೀಲ್ದಾರ್ ಅವರ ಖಾತೆಗಳಲ್ಲಿ ಒಟ್ಟು ₹711.71 ಲಕ್ಷಗಳು ಸೇರಿ ಒಟ್ಟು ₹1870.37 ಲಕ್ಷಗಳ ಅನುದಾನ ಲಭ್ಯವಿದೆ ಎಂದು ಡಿಸಿ ತಿಳಿಸಿದರು.
ಸಿ.ಎಂ. ಅವರ ವಿಡಿಯೋ ಸಂವಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿಯೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.