ಜೋಶಿ ಅವರದ್ದು ಏಕಚಕ್ರಾಧಿಪತ್ಯ ಧೋರಣೆ: ಧರಣೇಂದ್ರಯ್ಯ

KannadaprabhaNewsNetwork | Published : Nov 6, 2024 11:59 PM

ಸಾರಾಂಶ

ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತ್ಯೇತರ ಪದವನ್ನು ಬಳಸುವುದರ ಮೂಲಕ ವಿವಾದವನ್ನು ಎಳೆದುತಂದಿದ್ದೇ ಅಧ್ಯಕ್ಷರು. ಅದರ ಅವಶ್ಯಕತೆ ಇರಲಿಲ್ಲ. ಅದರ ಬಗ್ಗೆ ಯಾರೂ ಕೂಡ ಪ್ರಶ್ನಿಸಿರಲಿಲ್ಲ. ವಿವಾದಗಳು ನಮ್ಮಿಂದಲೇ ಸೃಷ್ಟಿಯಾಗುತ್ತಿವೆ. ಸಂಗೀತ ಸಮ್ಮೇಳನಕ್ಕೆ ಸಂಗೀತಗಾರರೇ ಅಧ್ಯಕ್ಷರಾಗುವ ರೀತಿ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳೇ ಅಧ್ಯಕ್ಷರಾಗುವುದು ಸೂಕ್ತ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರ ವರ್ತನೆ ಒಂದು ರೀತಿಯ ಏಕಚಕ್ರಾಧಿಪತ್ಯದಂತೆ ಕಂಡುಬರುತ್ತಿದೆ. ಇದು ಕೆಟ್ಟತನದ್ದು. ಅಧ್ಯಕ್ಷರಾದವರಿಗೆ ಬೇರೆಯವರು ನೀಡುವ ಸಲಹೆಗಳನ್ನೂ ಸ್ವೀಕರಿಸುವ ಮುಕ್ತ ಮನೋಭಾವವಿರಬೇಕು. ಅದಿಲ್ಲದಿರುವುದರಿಂದಲೇ ಗೊಂದಲ, ವಿವಾದಗಳು ಸೃಷ್ಟಿಯಾಗುತ್ತಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ದೂರಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ವಾರದ ಅತಿಥಿ ಸಾಹಿತಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತ್ಯೇತರ ಪದವನ್ನು ಬಳಸುವುದರ ಮೂಲಕ ವಿವಾದವನ್ನು ಎಳೆದುತಂದಿದ್ದೇ ಅಧ್ಯಕ್ಷರು. ಅದರ ಅವಶ್ಯಕತೆ ಇರಲಿಲ್ಲ. ಅದರ ಬಗ್ಗೆ ಯಾರೂ ಕೂಡ ಪ್ರಶ್ನಿಸಿರಲಿಲ್ಲ. ವಿವಾದಗಳು ನಮ್ಮಿಂದಲೇ ಸೃಷ್ಟಿಯಾಗುತ್ತಿವೆ. ಸಂಗೀತ ಸಮ್ಮೇಳನಕ್ಕೆ ಸಂಗೀತಗಾರರೇ ಅಧ್ಯಕ್ಷರಾಗುವ ರೀತಿ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳೇ ಅಧ್ಯಕ್ಷರಾಗುವುದು ಸೂಕ್ತ ಎಂದು ಪ್ರತಿಪಾದಿಸಿದರು

ಅಮೆರಿಕಾಗೆ ಹೋಗಿ ವಿಶ್ವೇಶ್ವರಯ್ಯನವರ ಮೊಮ್ಮಗಳಿಗೆ ಆಹ್ವಾನ ನೀಡಿ ಬರುವ ಅಧ್ಯಕ್ಷರಿಗೆ ಬೆಂಗಳೂರಿನಲ್ಲಿರುವ ತ್ರಿವೇಣಿ ಮಗಳು ಕಾಣಿಸುವುದೇ ಇಲ್ಲ. ಕನ್ನಡಿಗರನ್ನು ವಿದೇಶಕ್ಕೆ ಹೋಗಿ ಕರೆತರುವ ಅಗತ್ಯವಿಲ್ಲ. ನಮ್ಮಲ್ಲಿರುವ ಕನ್ನಡಿಗರನ್ನು ಆಹ್ವಾನಿಸಿ ಒಗ್ಗೂಡಿಸಿಕೊಂಡು ವಿವಾದರಹಿತವಾಗಿ ಸಮ್ಮೇಳನ ನಡೆಸುವುದು ಹೆಚ್ಚು ಅರ್ಥಪೂರ್ಣ ಎಂದು ಹೇಳಿದರು.

ಎರಡೂ ಸಮ್ಮೇಳನ ಅರ್ಥಪೂರ್ಣ:

ಜಿಲ್ಲೆಯಲ್ಲಿ ಮೊದಲ ಬಾರಿಗೆ ೧೯೭೪ ರಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಿತು. ಮೊದಲ ಬಾರಿಗೆ ಮಹಿಳೆಗೆ ಸಮ್ಮೇಳಾಧ್ಯಕ್ಷ ಸ್ಥಾನ ಕೊಟ್ಟ ಹೆಗ್ಗಳಿಕೆ ಮಂಡ್ಯದ್ದಾಗಿದೆ. ಆ ಸಮ್ಮೇಳನದಲ್ಲಿ ಏಳು ಗೋಷ್ಠಿಗಳು, ನಂತರ ಸಂಜೆ ಶಂಕರಗೌಡರ ಪಾದುಕಾ ಕಿರೀಟಿ ನಾಟಕ ಪ್ರದರ್ಶನ ಇತ್ತು ಎಂದು ಹೇಳಿದರು.

೧೯೯೪ ರಲ್ಲಿ ಚದುರಂಗರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವೂ ಯಶಸ್ವಿಯಾಗಿ ನಡೆಯಿತು. ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದರು. ಸಮ್ಮೇಳನಕ್ಕೆ ಹಾ.ಮಾ.ನಾಯಕ್, ವೆಂಕಟಾಚಲಶಾಸ್ತ್ರಿ, ಎಸ್.ಎಲ್.ಭೈರಪ್ಪ ಮುಂತಾದವರು ಭಾಗವಹಿಸಿದ್ದರು. ಜಿ.ಮಾದೇಗೌಡರು ಸಮ್ಮೇಳನದ ನೇತೃತ್ವ ವಹಿಸಿದ್ದರು ಎಂದು ಸಾಹಿತ್ಯ ಸಮ್ಮೇಳನ ಮತ್ತು ಅಧ್ಯಕ್ಷರ ಕುರಿತಂತೆ ವಿವರವಾಗಿ ತಿಳಿಸಿಕೊಟ್ಟರು.

೧೯೯೪ರ ಸಾಹಿತ್ಯ ಸಮ್ಮೇಳನದಿಂದ ಮೊದಲ ಬಾರಿಗೆ ಹಣ ಉಳಿತಾಯ ಮಾಡಿದ ಕೀರ್ತಿ ಲಭಿಸಿತು. ಆ ಹಣವನ್ನು ಕಲಾಮಂದಿರ, ಕುವೆಂಪು ಪ್ರತಿಮೆ ಮತ್ತು ಬಂದೀಗೌಡ ಬಡಾವಣೆಯಲ್ಲಿ ಕನ್ನಡ ಭವನ ನಿರ್ಮಿಸಲಾಯಿತು ಎಂದು ಹಿಂದಿನ ಎರಡು ಸಮ್ಮೇಳನದ ನೆನಪುಗಳನ್ನು ಮೆಲುಕು ಹಾಕಿದರು.

ಲೇಖಕಿಯರ ಸಮ್ಮೇಳನ:

ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದಲ್ಲದೆ ಏಳು ತಾಲ್ಲೂಕುಗಳಲ್ಲಿ ಪುಸ್ತಕ ಮಾರಾಟ ಮಾಡಲಾಯಿತು. ತಳ್ಳುವ ಗಾಡಿಯಲ್ಲಿ ಪುಸ್ತಕ ಮಾರಾಟ ಮಾಡಿದ್ದು ನೆನಪಿದೆ. ಅದರ ೨೫ರಷ್ಟು ಕಮಿಷನ್ ಹಣದಲ್ಲಿ ಕಾರ್ಯಕ್ರಮ ರೂಪಿಸಲಾಯಿತು. ಎಸ್.ಡಿ.ಜಯರಾಮ್ ಅವರ ಸಹಕಾರದಿಂದ ಲೇಖಕಿಯರ ಸಮ್ಮೇಳನ ನಡೆಸಲಾಗಿತ್ತು. ೨೫೦೦ ಮಂದಿ ಭಾಗವಹಿಸಿದ್ದರು. ೧೯೭೮ ರಲ್ಲಿ ಬಿಎಂಶ್ರೀ ವಿಚಾರ ಸಂಕಿರಣ ನಡೆಸಿ ‘ಸಂಭಾವನೆ’ ಗ್ರಂಥ ಸಮರ್ಪಣೆ ಮಾಡಲಾಯಿತು. ತಮ್ಮ ಒಂಭತ್ತು ವರ್ಷದ ಅವಧಿಯಲ್ಲಿ ೬೫೦ ಕಾರ್ಯಕ್ರಮಗಳನ್ನು ಮಾಡಲಾಯಿತು. ಜಿಲ್ಲೆಯ ಜನತೆಯ ಬೆಂಬಲ, ಸಹಕಾರ ಮರೆಯುವಂತಿಲ್ಲ. ಕನ್ನಡ ಪರವಾದ ಕಾರ್ಯಕ್ರಮಗಳಿಗೆ ಜನರ ಸಹಕಾರ ಇದ್ದೇ ಇರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಅದ್ಧೂರಿತನ ಬೇಡ:

ಹಣ ಹೆಚ್ಚು ಬಂದಷ್ಟು ಖರ್ಚಿನ ಮಿತಿ ಏರುತ್ತದೆ. ಇಂದಿನ ಸಂದರ್ಭಕ್ಕೆ ೧೫-೨೦ ಕೋಟಿ ರು. ಸಾಕು. ಅತಿ ಹೆಚ್ಚಿನ ಅದ್ಧೂರಿತನ ಬೇಡ. ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಊಟದ ವ್ಯವಸ್ಥೆಯನ್ನು ಅವರೇ ಮಾಡಿಸಬಹುದು. ಉಳಿದ ಹಣವನ್ನು ಇತರೆ ವ್ಯವಸ್ಥೆಗೆ ಬಳಸಬಹುದು ಎಂದು ಅಭಿಪ್ರಾಯಪಟ್ಟರು.

ಹಂಪನಾ ಅವರನ್ನು ಅಧ್ಯಕ್ಷತೆಗೆ ಪರಿಗಣಿಸಿ:

ಹಂಪ ನಾಗರಾಜಯ್ಯ ಅವರು ದೊಡ್ಡ ವಿದ್ವಾಂಸರು. ಅವರ ವಿದ್ಯಾಭ್ಯಾಸ ಮಂಡ್ಯದಲ್ಲಿ ನಡೆದಿದೆ. ಅವರ ಶಿಷ್ಯರು ಹಲವಾರು ಜನರಿದ್ದಾರೆ. ಹಳಗನ್ನಡ ಕಾವ್ಯದಲ್ಲಿ ಪರಿಣತಿ ಹೊಂದಿರುವ ಅವರ ಬಗ್ಗೆ ದೇಶ ವಿದೇಶದಲ್ಲಿ ಪಾಂಡಿತ್ಯದ ಪರಿಚಯವಿದೆ.೭೦-೮೦ ಕೃತಿಗಳನ್ನು ರಚಿಸಿದ್ದಾರೆ.ಅವರನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮಾಡಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾಹಿತಿಗಳನ್ನು ನಂಬುವುದು ಕಷ್ಟ:

ಒಂದು ವೇಳೆ ರಾಜಕಾರಣಿಗಳನ್ನು ನಂಬಬಹುದು, ಸಾಹಿತಿಗಳನ್ನು ನಂಬುವುದು ಕಷ್ಟ. ಶೇ.೬೦ರಷ್ಟು ಸಾಹಿತಿಗಳಲ್ಲಿ ಜಾತಿ-ಗುಂಪುಗಾರಿಕೆ, ಅಸೂಹೆ ಹೆಚ್ಚು ಎಂದು ವಿಷಾದಿಸಿದ ಧರಣೇಂದ್ರಯ್ಯ ಅವರು, ಆದಿಕವಿ ಪಂಪ ೧೦ ನೇ ಶತಮಾನದಲ್ಲಿ ‘ಮನುಜ ಕುಲಂ ತಾನೊಂದೆ ವಲಂ’ ಎಂದು ಹೇಳಿದರೆ, ೧೨ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆ ಸಾರಿದರು. ೧೫ನೇ ಶತಮಾನದಲ್ಲಿ ದಾಸರು ‘ಕುಲ ಕುಲವೆಂದು ಹೊಡೆದಾಡದಿರಿ’ ಎಂದರು. ೨೦ನೇ ಶತಮಾನದಲ್ಲಿ ಕುವೆಂಪು ‘ವಿಶ್ವಮಾನವ’ ಸಂದೇಶ ನೀಡಿದರು. ಆದರೂ ಸಹ ಜಾತೀಯತೆ ಹೋಗಲಾಡಿಸಲು ಸಾಧ್ಯವಾಗಿಲ್ಲ. ಸಾಹಿತಿಗಳಲ್ಲಿ ಅಸೂಹೆ, ದ್ವೇಷ ಹೆಚ್ಚು. ಯಾರಿಗಾದರೂ ಪ್ರಶಸ್ತಿ ಬಂದರೆ, ಏಳಿಗೆಯಾದರೆ ಸಹಿಸಿಕೊಳ್ಳುವುದಿಲ್ಲ ಎಂದರು.

ಸಂವಾದದಲ್ಲಿ ಸಂಘದ ಅಧ್ಯಕ್ಷ ಬಿ.ಪಿ. ಪ್ರಕಾಶ್, ಕಾರ್ಯದರ್ಶಿ ಆನಂದ್, ಉಪಾಧ್ಯಕ್ಷ ನವೀನ್ ಕುಮಾರ್ ಭಾಗವಹಿಸಿದ್ದರು.

Share this article