ಪತ್ರಕರ್ತರು ಸಮಾಜದ ಎರಡು ಕಣ್ಣು: ಶಾಸಕ ಕೊತ್ತೂರು ಮಂಜುನಾಥ್‌

KannadaprabhaNewsNetwork |  
Published : Jul 02, 2026, 01:15 AM IST
೧ಕೆಎಲ್‌ಆರ್-೯ಕೋಲಾರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಶಾಸಕ ಕೊತ್ತೂರು ಮಂಜುನಾಥ್ ಸನ್ಮಾನಿಸುತ್ತಿರುವುದು. | Kannada Prabha

ಸಾರಾಂಶ

ಪತ್ರಕರ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣು ಭ್ರಷ್ಟಾಚಾರ ಬಯಲಿಗೆಳೆಯುತ್ತದೆ, ಮತ್ತೊಂದು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ

ಕನ್ನಡಪ್ರಭ ವಾರ್ತೆ ಕೋಲಾರ

ಪತ್ರಕರ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣು ಭ್ರಷ್ಟಾಚಾರ ಬಯಲಿಗೆಳೆಯುತ್ತದೆ, ಮತ್ತೊಂದು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿದರು.

ಕೋಲಾರ-ವೈಟ್ ಫೀಲ್ಡ್ ನೇರ ರೈಲು ಯೋಜನೆಗೆ ರಾಜ್ಯ ಸರ್ಕಾರ ಭೂಮಿ ನೀಡಲು ಸಿದ್ಧವಿದೆ. ಯೋಜನೆಯ ಪೂರ್ಣ ವೆಚ್ಚ ಕೇಂದ್ರ ಸರ್ಕಾರವೇ ಭರಿಸಬೇಕು. ಈ ಕುರಿತು ಸಿಎಂ ಮಟ್ಟದಲ್ಲಿ ಚರ್ಚೆ ನಡೆದಿದೆ. ಕಾಂತರಾಜ್ ಸರ್ಕಲ್‌ನಲ್ಲಿ ಇಲಾಖೆಯ ಜಾಗದಲ್ಲಿ ರೇಷ್ಮೆ ಪಾರ್ಕ್ ನಿರ್ಮಿಸಲು ಅವಕಾಶವಿದೆ. ರೈತರಿಗೆ ನೆರವು ನೀಡಲಾಗುವುದು, ಬಸ್ ಮಾರ್ಗವನ್ನೂ ಸರಿಪಡಿಸಲಾಗುವುದು ಎಂದು ಹೇಳಿದರು.

ನಿವೇಶನ, ಭೂಸ್ವಾಧೀನ: ಕೋಲಾರದ ಕೋಲಾರಮ್ಮ ಕೆರೆ ಸುತ್ತಲಿನ ಜಾಗ ಭೂಸ್ವಾಧೀನಪಡಿಸಲು ನಿರ್ಧರಿಸಲಾಗಿದೆ. ರೈತರು ಮಾರಾಟ ಮಾಡಿದರೆ ಖರೀದಿಸಲಾಗುವುದು, ಇಲ್ಲದಿದ್ದರೆ ೫೦:೫೦ ಅನುಪಾತದಲ್ಲಿ ಅಭಿವೃದ್ಧಿಪಡಿಸಿ ನೀಡಲಾಗುವುದು. ಇಲ್ಲಿಯೂ ಪತ್ರಕರ್ತರಿಗೆ ನಿವೇಶನ ನೀಡಲಾಗುವುದು. ಪತ್ರಕರ್ತರ ಸಂಘಕ್ಕೆ ೨ ಎಕರೆ ಜಾಗ ನೀಡಲು ಸಿದ್ಧವಿದ್ದು, ಸ್ಥಳವನ್ನು ಈಗಾಗಲೇ ನಿಗದಿಪಡಿಸಿದ್ದು ಪರಿಶೀಲನೆ ನಡೆಸಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಎಂ. ಮಲ್ಲೇಶ್ ಬಾಬು ಮಾತನಾಡಿ, ರಾಜ್ಯ ಸರ್ಕಾರ ಜಮೀನು ನೀಡಿದರೆ ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಕೋಲಾರದಿಂದ ವೈಟ್ ಫೀಲ್ಡ್‌ಗೆ ನೇರ ರೈಲು ಯೋಜನೆ ಕೊಡಿಸುವ ಜವಾಬ್ದಾರಿ ನನ್ನದು. ಶಾಸಕರು ಬಂದರೆ ಸಚಿವ ವಿ. ಸೋಮಣ್ಣ ಜೊತೆ ಸಮಾಲೋಚನೆ ನಡೆಸಬಹುದು ಎಂದರು.

ರಾಷ್ಟ್ರೀಯ ಹೆದ್ದಾರಿಯ ಕಾಂತರಾಜ್ ಸರ್ಕಲ್ ಬಳಿ ರೇಷ್ಮೆ ಪಾರ್ಕ್‌ಗೆ ೧೧ ಎಕರೆ ಜಮೀನು ಲಭ್ಯವಿದೆ. ಮಾವು ಶಿಥಲೀಕರಣ ಘಟಕ ಸ್ಥಾಪನೆ ಕಷ್ಟದ ಕೆಲಸ. ಅದಕ್ಕೆ ಮಾರುಕಟ್ಟೆ ವ್ಯವಸ್ಥೆಬೇಕು. ಮಧ್ಯಾಹ್ನದ ಬಿಸಿಯೂಟದಲ್ಲಿ ಮಾವಿನ ಉತ್ಪನ್ನಗಳನ್ನು ನೀಡುವ ಬಗ್ಗೆ ರಾಜ್ಯ ಸರ್ಕಾರ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಕೆ.ಸಿ.ವ್ಯಾಲಿ ನೀರು ಬಾರದಿದ್ದರೆ ರೈತರು ಪರಿಸ್ಥಿತಿಯೇ ಬೇರೆ ರೀತಿ ಇರುತಿತ್ತು. ಈ ಬಗೆಗಿನ ಪರ ವಿರೋಧ ಬೇರೆ ಪ್ರಶ್ನೆ. ಕುಡಿಯುವ ನೀರಿನ ಯೋಜನೆಗೆ ಎಲ್ಲ ಶಾಸಕರ ಸಹಕಾರ ಅಗತ್ಯ. ಕೃಷ್ಣಾ ನದಿ ನೀರು ತರುವ ವಿಚಾರದಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ ಎಂದರು.

ಪೆನ್ ಖಡ್ಗಕ್ಕಿಂತ ಹರಿತವಾದದ್ದು. ಕೋವಿಡ್ ಸಮಯದಲ್ಲಿ ಮಾಧ್ಯಮದವರು ಅದ್ಭುತವಾಗಿ ಕೆಲಸ ಮಾಡಿದರು. ಆದರೆ ಸುದ್ದಿ ವಾಹಿನಿಗಳು ತಮ್ಮ ಧೋರಣೆ ಬದಲಿಸಿಕೊಳ್ಳಬೇಕು ಎಂದು ಸಂಸದರು ಕಿವಿಮಾತು ಹೇಳಿದರು.

ಪತ್ರಕರ್ತರ ಭವನದ ಮೊದಲ ಮಹಡಿ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿದರೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್ ಮಾತನಾಡಿ, ಪತ್ರಕರ್ತರು ಇಂದು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ಸಂಘದಿಂದಲೇ ೧೫ ಲಕ್ಷದವರೆಗೆ ಅಂಚೆ ವಿಮೆ ಮಾಡಿಸಲಾಗಿದೆ. ೨೦೩೨ರಲ್ಲಿ ಸಂಘದ ಶತಮಾನೋತ್ಸವ ಜಿಲ್ಲೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ಸಂಘದ ಸಂಸ್ಥಾಪಕ ಡಿ.ವಿ. ಗುಂಡಪ್ಪ ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಷಯ ಎಂದರು.

ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವಿ. ಮುನಿರಾಜು ಮಾತನಾಡಿ, ಶಾಸಕ ಕೊತ್ತೂರು ಮಂಜುನಾಥ ರಾಜಕೀಯಕ್ಕೆ ಬರುವುದಕ್ಕೆ ಮೊದಲಿನಿಂದಲೂ ಕೊಟ್ಟ ಮಾತು ತಪ್ಪಿಲ್ಲ. ಕೋಲಾರ ಪತ್ರಕರ್ತರ ಸಂಘಕ್ಕೆ ಸುಮಾರು ೨೬ ಲಕ್ಷ ರು. ಕೊಟ್ಟಿದ್ದು ಅಲ್ಲದೆ ಅವರೇ ಮುತುವರ್ಜಿ ವಹಿಸಿ ಪತ್ರಕರ್ತರ ಭವನ ಎಸಿ ಸಭಾಂಗಣ ಮಾಡಿಕೊಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿ ಇಂತಹ ಭವನವಿಲ್ಲ. ಇದಕ್ಕೆ ಕೊತ್ತೂರು ಮಂಜುನಾಥ್ ಕಾರಣ ಎಂದು ಶ್ಲಾಘಿಸಿದರು.

ಪತ್ರಕರ್ತರ ಧ್ವನಿ:

ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಿ ಮಾಧ್ಯಮ ಸಲಹೆಗಾರರಾಗಿದ್ದ ಕೆ.ವಿ. ಪ್ರಭಾಕರ್ ಪತ್ರಕರ್ತರ ಧ್ವನಿಯಾಗಿ ನಿಂತು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಬಿ.ವಿ.ಗೋಪಿನಾಥ್ ಅಧ್ಯಕ್ಷರಾಗಿದ್ದಾಗ ಕಲ್ಯಾಣ ನಿಧಿ ಸ್ಥಾಪನೆ ಮಾಡಿ ೧ ಕೋಟಿ ರು.. ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಅದರಲ್ಲಿ ಬರುವ ಬಡ್ಡಿ ಹಣದಲ್ಲಿ ಪತ್ರಕರ್ತರ ಆರೋಗ್ಯಕ್ಕೆ ನೀಡಲು ತೀರ್ಮಾನ ಮಾಡಿದ್ದಾರೆ. ಇದನ್ನು ಪೂರ್ಣಗೊಳಿಸುವ ಕೆಲಸ ಈಗಿನ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮಾಡಬೇಕು ಎಂದರು.

ಕೋಲಾರ-ಚಿಕ್ಕಬಳ್ಳಾಪುರ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ. ಸುರೇಶ್ ಕುಮಾರ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಸುರೇಶ್ ಇದ್ದರು. ಕೆ.ವಿ.ನಾಗರಾಜ್ ಪ್ರಾರ್ಥಿಸಿ, ಖಜಾಂಚಿ ಬಿ.ಎಲ್. ರಾಜೇಂದ್ರಸಿಂಹ ಸ್ವಾಗತಿಸಿ, ಕಾರ್ಯದರ್ಶಿ ಜೆ.ಜಿ. ಶ್ರೀನಿವಾಸಮೂರ್ತಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ದಿಗ್ಗಜ ಪತ್ರಕರ್ತರ ಹೆಸರಿನಲ್ಲಿ ನೀಡುವ ವಾರ್ಷಿಕ ಪ್ರಶಸ್ತಿಗಳನ್ನು ಹಿರಿಯ ಪತ್ರಕರ್ತರಿಗೆ ನೀಡಿ ಗೌರವಿಸಲಾಯಿತು. ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಯಿತು.

ಬಾಕ್ಸ್....

ವಾರ್ಷಿಕ ಪ್ರಶಸ್ತಿ ಪುರಸ್ಕೃತರು

ಜಿ. ನಾರಾಯಣಸ್ವಾಮಿ ನೆನಪಿನ ಪ್ರಶಸ್ತಿ: ಕೆ.ಎಸ್.ಗಣೇಶ್. ಕೆ.ಆರ್. ಕೃಷ್ಣಸ್ವಾಮಿ ನೆನಪಿನ ಪ್ರಶಸ್ತಿ: ಅಬ್ಬಣಿಶಂಕರ್. ಬಿ.ವಿ.ನರಸಿಂಹಮೂರ್ತಿ ನೆನಪಿನ ಪ್ರಶಸ್ತಿ: ಎ.ಸದಾನಂದ. ಕೆ.ಪ್ರಹ್ಲಾದರಾವ್ ನೆನಪಿನ ಪ್ರಶಸ್ತಿ: ಎಸ್.ನಾರಾಯಣಸ್ವಾಮಿ. ಬಿ.ಆರ್ಮುಗಂ ನೆನಪಿನ ಪ್ರಶಸ್ತಿ: ಎಚ್.ದೊರೈ ಅರಸು. ಬಿ.ಎನ್.ಗುರುಪ್ರಸಾದ್ ನೆನಪಿನ ಪ್ರಶಸ್ತಿ: ಎನ್.ಮುನಿವೆಂಕಟೇಗೌಡ. ಎಂ.ಮಲ್ಲೇಶ್ ನೆನಪಿನ ಪ್ರಶಸ್ತಿ: ಎನ್.ರಾಮು. ಎಂ.ಜಿ.ಪ್ರಭಾಕರ ನೆನಪಿನ ಪ್ರಶಸ್ತಿ: ಎಂ.ಸುಬ್ರಮಣಿ. ಸಿ.ಎಂ.ರಂಗಾರೆಡ್ಡಿ ನೆನಪಿನ ಪ್ರಶಸ್ತಿ: ಕೆ.ಎನ್.ಮಹೇಶ್. ವಿ.ಎಂ.ನಾಗಪ್ಪ ನೆನಪಿನ ಪ್ರಶಸ್ತಿ: ಜಮ್ಮನಹಳ್ಳಿ ಕೃಷ್ಣಪ್ಪ. ಎಚ್.ಎನ್.ಸೋಮಶೇಖರಗೌಡ ನೆನಪಿನ ಪ್ರಶಸ್ತಿ: ಎಸ್.ವೇಣುಗೋಪಾಲ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯಿಂದ ಮತದಾನದ ಹಕ್ಕು ಕಸಿಯುವ ಕುತಂತ್ರ
ನಕಲಿ ಜಾತಿ ಪ್ರಮಾಣಪತ್ರ ರದ್ಧತಿಗೆ ಒತ್ತಾಯ