ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿಯಾಗಿದ್ದು, ತಮ್ಮ ಕರ್ತವ್ಯವನ್ನು ನಿಷ್ಠೆ, ಪ್ರಾಮಾಣಿಕತೆ ಹಾಗೂ ಧೈರ್ಯದಿಂದ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕೆಗಳು ಸಮಾಜಕ್ಕೆ ದಾರಿದೀಪವಾಗಿವೆ. ಒಂದು ಸಣ್ಣ ಪೆನ್ನಿನ ಮೂಲಕ ಸತ್ಯವನ್ನು ಸಮಾಜದ ಮುಂದೆ ತರುವ ಶಕ್ತಿ ಪತ್ರಕರ್ತರಿಗಿದೆ. ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ವ್ಯವಸ್ಥೆ ತಪ್ಪು ಮಾಡಿದರೆ ಅದನ್ನು ನಿರ್ಭೀತಿಯಿಂದ ಜನರ ಮುಂದೆ ತರುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಎಂದು ಹೇಳಿದರು.ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ರಾಘವೇಂದ್ರ ಮಾತನಾಡಿ, ಪತ್ರಿಕೋದ್ಯಮವು ಸಮಾಜದ ಕನ್ನಡಿಯಾಗಿದೆ. ಸಮಾಜದಲ್ಲಿ ನಡೆಯುವ ಬೆಳವಣಿಗೆಗಳು, ಸಮಸ್ಯೆಗಳು, ಸಾಧನೆಗಳು ಹಾಗೂ ಜನರ ಧ್ವನಿಯನ್ನು ನಿಖರವಾಗಿ ಜನರ ಮುಂದೆ ತರುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು.
ಮಂಡ್ಯ ಮಲ್ಲೇಶ್ ಮಾತನಾಡಿ, ಪತ್ರಿಕೆಗಳೇ ಇಲ್ಲದಿದ್ದರೆ ಸಮಾಜದ ಸ್ಥಿತಿಯನ್ನು ಊಹಿಸುವುದೂ ಕಷ್ಟ. ಜನರ ಸಮಸ್ಯೆಗಳು, ಸರ್ಕಾರದ ಕಾರ್ಯಚಟುವಟಿಕೆಗಳು ಹಾಗೂ ಸಮಾಜದ ಒಳಿತು- ಕೆಡುಕುಗಳನ್ನು ಜನರಿಗೆ ತಲುಪಿಸುವ ಪ್ರಮುಖ ಮಾಧ್ಯಮವೇ ಪತ್ರಿಕೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ಎಚ್.ಆರ್.ಅನಂತೇಗೌಡ, ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತಿಕೆರೆ ಜಯರಾಮ್, ರಾಜ್ಯ ಕಾರ್ಯದರ್ಶಿ ಸಿ.ಎನ್.ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್ ಕಾಡುಕೊತ್ತನಹಳ್ಳಿ, ತಾಲೂಕು ಅಧ್ಯಕ್ಷ ಶಿವನಂಜಯ್ಯ, ಜಿಲ್ಲಾ ಉಪಾಧ್ಯಕ್ಷ ಕೆ.ಸಿ.ಮಂಜುನಾಥ್, ರವಿ ಸವಂದಿಪುರ, ಚಿನಕುರುಳಿ ಲೋಕೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಕೆ.ಎನ್.ನಾಗೇಗೌಡ, ಎಚ್.ಶಿವರಾಜು, ರಾಷ್ಟ್ರೀಯ ಮಂಡಳಿ ಸದಸ್ಯ ಎಂ.ಎಸ್. ಶಿವಪ್ರಕಾಶ್, ತಾಲೂಕು ಉಪಾಧ್ಯಕ್ಷ ಸಿ.ಹರೀಶ್, ಪ್ರಧಾನ ಕಾರ್ಯದರ್ಶಿ ಎಂ.ಆರ್.ಚಕ್ರಪಾಣಿ, ಕಾರ್ಯದರ್ಶಿ ಎಂ.ಪಿ.ವೆಂಕಟೇಶ್, ಖಜಾಂಚಿ ಪಿ.ನಂದೀಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.