ಕನ್ನಡಪ್ರಭ ವಾರ್ತೆ, ತುಮಕೂರು
ಪತ್ರಕರ್ತರು ಪ್ರಜಾಪ್ರಭುತ್ವದ ಆಶಯಗಳು ಸಂವಿಧಾನದ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸುದ್ದಿಗಳನ್ನು ಬರೆಯಬೇಕು. ಸುದ್ದಿ ನೀಡುವ ಬರದಲ್ಲಿ ಸತ್ಯವನ್ನು ಮರೆಮಾಚಿ ಊಹಾಪೋಹದ ಸುಳ್ಳು ಸುದ್ದಿಗಳನ್ನು ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಂದು ಅಂಬೇಡ್ಕರ್ ಮತ್ತು ಗಾಂಧಿಯವರು ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಸಹ ಕೆಲಸ ಮಾಡಿದ್ದರು. ಅವರಿಂದ ಪ್ರೇರಣೆಯಾದ ನಾವುಗಳು ಮೌಲ್ಯಯುತ ಸುದ್ದಿಗಳನ್ನು ಜನರಿಗೆ ನೀಡಬೇಕು. ಸತ್ಯವಾದ ಘಟನೆಯನ್ನು ಪರಿಶೀಲಿಸಿ ಪರಾಮರ್ಶೆ ಮಾಡಿ ಸುಳ್ಳು ಸುದ್ದಿಗಳಿಗೆ ಆಸ್ಪದ ನೀಡದೆ ಜನರಿಗೆ ನೈಜ ವರದಿ ನೀಡಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪತ್ರಕರ್ತರು ಅತಿ ಬೇಗ ಸುದ್ದಿಗಳನ್ನು ನೀಡುವ ತವಕದಲ್ಲಿ ಊಹಾಪೋಹದ ಸುಳ್ಳು ಸುದ್ದಿಗಳು ನೀಡುತ್ತಿದ್ದು ಇದು ಅಪಾಯಕಾರಿಯಾದ ಬೆಳವಣಿಗೆಯಾಗಿದೆ ಎಂದರು.ಧ್ವನಿ ಇಲ್ಲದವರ ಬಗ್ಗೆ ಮಾಧ್ಯಮ ಧ್ವನಿ ಆಗಬೇಕು ಅನ್ಯಾಯದಿಂದ ತುಳಿತಕ್ಕೊಳಗಾದವರ ಪರವಾಗಿ ಪತ್ರಕರ್ತರು ನಿಲ್ಲಬೇಕು. ಇಂತಹ ಗುರುತರವಾದ ಜವಾಬ್ದಾರಿ ನಿಮ್ಮ ಮೇಲಿದ್ದು ಇದರ ಬಗ್ಗೆ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.ಪತ್ರಕರ್ತರು ಮೂಢನಂಬಿಕೆಗಳನ್ನು ನಂಬಬಾರದು. ನಮ್ಮ ಸಮಾಜದಲ್ಲಿ ಎಂದಿಗೂ ಮೌಢ್ಯ, ಕಂದಾಚಾರ ಮೌಢ್ಯತೆಗಳು ಜಾರಿಯಲ್ಲಿದ್ದು, ಸಮಾಜವನ್ನು ತಿದ್ದುವ ಪತ್ರಕರ್ತರು ಇಂತಹವುಗಳನ್ನು ನಂಬಬಾರದು, ಇದಕ್ಕೆ ಪೂರಕವಾದ ಸುದ್ದಿಗಳನ್ನು ಪರಿಶೀಲಿಸಬೇಕು ನನಗೂ ಕೂಡ ಈ ತರಹದ ಅನುಭವವಾಗಿದ್ದು ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಸ್ಥಾನ ಕಳೆದು ಹೋಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ ನಾನು 15 ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ. ಆದರೆ ಏನು ಆಗಲಿಲ್ಲ, ನನ್ನ ಕಾರಿನ ಮೇಲೆ ಕಾಗೆ ಕೂಳಿತುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಉಂಟಾಗುತ್ತದೆ ಎಂದು ಜ್ಯೋತಿಷಿಗಳು ಹೇಳಿದರು ಅದು ಯಾವುದು ನಡೆಯಲಿಲ್ಲ. ಇದನ್ನ ನಂಬದ ನಾನು ಇವರಿಗೂ ಸುಮಾರು 18 ಬಜೆಟ್ ಗಳನ್ನು ಮಂಡಿಸಿದ್ದೇನೆ ಎಂದರು. ಪತ್ರಕರ್ತರಿಗೆ ವೈಚಾರಿಕತೆ ಇರಬೇಕು. ವೈಜ್ಞಾನಿಕತೆಯ ಅಧ್ಯಯನವಾಗಬೇಕು. ಪತ್ರಕರ್ತರು ಅಧ್ಯಯನಶೀಲರಾಗಿ ಸಂಶೋಧನಾತ್ಮಕವಾಗಿ ವರದಿಗಳನ್ನು ನೀಡಬೇಕು. ನಿಷ್ಟುರವಾದ ಸುದ್ದಿಗಳನ್ನು ಪತ್ರಕರ್ತರು ಪ್ರಕಟಿಸಬೇಕು. ಈ ನಿಟ್ಟಿನಲ್ಲಿ ನಾನು ಕೂಡ ಇದಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ ಎಂದು ತಿಳಿಸಿದರು.
ಪತ್ರಕರ್ತರು ಅನೇಕ ಒತ್ತಾಯಗಳು ಮತ್ತು ಬೇಡಿಕೆಗಳನ್ನು ನಮ್ಮ ಮುಂದೆ ಇಟ್ಟಿದ್ದು ಕಳೆದ ಸಮ್ಮೇಳನದಲ್ಲಿ ತಿಳಿಸಿದ ಹಾಗೆ ಬಸ್ ಪಾಸ್ ಪ್ರಕರ್ತರಿಗೆ ವಿತರಣೆ ಮಾಡಲು ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಶೀಘ್ರದಲ್ಲಿ ಪಾಸ್ ಗಳು ಪತ್ರಕರ್ತರ ಕೈ ಸೇರಲಿದೆ ಎಂದರು.ಈಗಾಗಲೇ ಪತ್ರಕರ್ತರಿಗೆ 12,000 ಮಾಶಾಸನ ನೀಡುತ್ತಿದ್ದು ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಸುಮಾರು ಹತ್ತುಕೋಟಿರೂ ವೆಚ್ಚದಲ್ಲಿ ಆರೋಗ್ಯ ವಿಮೆಯನ್ನು ಮಾಡಿಸುವ ಹೊಣೆಗಾರಿಕೆಯನ್ನು ಸರ್ಕಾರ ಹೊಂದಿದೆ ಪತ್ರಕರ್ತರು ಯಾವುದೇ ರೀತಿಯ ನ್ಯಾಯಯುತವಾದ ಬೇಡಿಕೆಗಳನ್ನು ಇಟ್ಟಲ್ಲಿ ಸರ್ಕಾರ ಅದಕ್ಕೆ ಕಟ್ಟಿಬದ್ಧವಾಗಿ ಈಡೇರಿಸುವ ಪ್ರಯತ್ನವನ್ನು ಮಾಡುತ್ತದೆ ಎಂದು ಭರವಸೆ ನೀಡಿದರು.