ಪತ್ರಕರ್ತರು ವೃತ್ತಿಪರತೆಗೆ ಕಟಿಬದ್ಧರಾಗಲಿ

KannadaprabhaNewsNetwork |  
Published : Jul 26, 2026, 02:30 AM IST
ಫೋಟೋವಿವರ- (25ಎಚ್‌ಪಿಟಿ1) ಹೊಸಪೇಟೆ ನಗರದಲ್ಲಿ ನಡೆದ ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ’ಪತ್ರಿಕಾ ದಿನಾಚರಣೆ’ ಕಾರ್ಯಕ್ರಮವನ್ನು ರಾಜ್ಯ ಉಪ ಲೋಕಾಯುಕ್ತರು ಹಾಗೂ ನ್ಯಾಯಮೂರ್ತಿ ಬಿ. ವೀರಪ್ಪ ಉದ್ಘಾಟಿಸಿದರು | Kannada Prabha

ಸಾರಾಂಶ

ಮಾಧ್ಯಮ ಸಂಸ್ಥೆಯ ಪ್ರತಿನಿಧಿಯಾಗಿ ನೀವು ಹಿಡಿಯುವ ಲೋಗೋ ಒಂದು ಗನ್ (ತುಪಾಕಿ) ನಂತೆ ಕೆಲಸ ಮಾಡಬೇಕು.

ಹೊಸಪೇಟೆ: ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಪತ್ರಕರ್ತರು ತಮ್ಮ ವೃತ್ತಿಧರ್ಮ, ಸತ್ಯಸಂಧತೆ, ನಿಷ್ಪಕ್ಷಪಾತತನ, ಧೈರ್ಯದಿಂದ ಕೆಲಸ ಮಾಡಬೇಕು ಎಂದು ರಾಜ್ಯ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ತಿಳಿಸಿದರು.

ಇಲ್ಲಿನ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾಧ್ಯಮ ಸಂಸ್ಥೆಯ ಪ್ರತಿನಿಧಿಯಾಗಿ ನೀವು ಹಿಡಿಯುವ ಲೋಗೋ ಒಂದು ಗನ್ (ತುಪಾಕಿ) ನಂತೆ ಕೆಲಸ ಮಾಡಬೇಕು. ನಿಮ್ಮ ಕೈಯಲ್ಲಿರುವ ಲೇಖನಿ ಸತ್ಯವನ್ನು ಬಿಚ್ಚಿಡುವ ಕತ್ತಿಯಂತೆ ಕೆಲಸ ಮಾಡಬೇಕು. ಅಧಿಕಾರಸ್ಥರು, ಭ್ರಷ್ಟರು ನಿಮ್ಮ ಲೇಖನಿಗೆ ಹೆದರಬೇಕೇ ಹೊರತು, ನೀವು ಯಾರ ಒತ್ತಡಕ್ಕೂ ಮಣಿಯಬಾರದು ಎಂದರು.

ಸುಳ್ಳು ಸುದ್ದಿ ನೀಡಿದರೆ 3 ವರ್ಷ ಜೈಲು:

ಪತ್ರಿಕೋದ್ಯಮದಲ್ಲಿ ಸುದ್ದಿ ಪ್ರಕಟಿಸುವ ಮೊದಲು ಅದರ ಸತ್ಯಾಸತ್ಯತೆ ಪರಿಶೀಲಿಸುವುದು ಕಡ್ಡಾಯ. ಯಾರೋ ನೀಡಿದ ಸುಳ್ಳು ಮಾಹಿತಿ ಆಧಾರವಾಗಿಟ್ಟುಕೊಂಡು ಸುದ್ದಿ ಮಾಡಿ ಒಬ್ಬರ ಮಾನ ಹರಾಜು ಹಾಕುವುದು ಧರ್ಮವಲ್ಲ. ಸುಳ್ಳು ದೂರು ಅಥವಾ ಸುಳ್ಳು ಮಾಹಿತಿ ನೀಡಿದರೆ ಲೋಕಾಯುಕ್ತ ಕಾಯ್ದೆಯಡಿ 3 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ₹5000 ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದರು.

ಕನ್ನಡಪ್ರಭ ಹುಬ್ಬಳ್ಳಿ ಸ್ಥಾನಿಕ ಸಂಪಾದಕರಾದ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಪತ್ರಕರ್ತ ವರದಿ ಮಾಡಲು ಮಾಹಿತಿಯನ್ನು ಆಧಾರಿಸಿದರೆ, ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಾಕ್ಷ್ಯಾ ಧಾರಗಳನ್ನು ಪರಿಗಣಿಸುತ್ತವೆ. ಅನ್ಯಾಯ, ಅಧರ್ಮ, ಅಕ್ರಮಗಳು ನಡೆದಾಗ ಸಾಕ್ಷ್ಯಾಧಾರಗಳ ಆಧಾರದಲ್ಲಿ ಸುದ್ದಿ ಮಾಡಿ ನ್ಯಾಯ ಒದಗಿಸುವುದು ಕಷ್ಟಕರ ಕೆಲಸ. ಆದರೂ ಪತ್ರಕರ್ತ ಖಚಿತ ಮಾಹಿತಿ ಮೇರೆಗೆ ಮಾನವೀಯ ನೆಲೆ ಮತ್ತು ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಸುದ್ದಿ ಮಾಡುವರು ಎಂದರು.

ಪತ್ರಿಕೋದ್ಯಮ ಮೌಲ್ಯ ಶೇ.10ರಷ್ಟು ಕುಸಿತವಾಗಿರಬಹುದು. ಆದರೂ ಪತ್ರಿಕಾರಂಗ ತನ್ನದೇ ಆದ ಮೌಲ್ಯವನ್ನು ಉಳಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಪತ್ರಕರ್ತರಿಗೆ ಸಾಮಾಜಿಕ ಭದ್ರತೆ ಮುಖ್ಯವಲ್ಲ. ಸಮಾಜದ ಭದ್ರತೆ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದು ಪ್ರಮುಖ ಆಶಯವಾಗಿದೆ ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸಭೆಯಲ್ಲಿ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲೋಕಾಯುಕ್ತ ಉಪನಿಬಂಧಕ ಎನ್.ವಿ.ಅರವಿಂದ್, ಎಸ್ಪಿ ಎಸ್.ಜಾಹ್ನವಿ, ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಜಿಪಂ ಸಿಇಒ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಷಾ, ವಾರ್ತಾ ಮತ್ತು ಸಾರ್ವಜನಿಕ ಹಿರಿಯ ಸಹಾಯಕ ನಿರ್ದೇಶಕ ಬಿ.ಧನುಂಜಯಪ್ಪ, ಸಂಘದ ರಾಜ್ಯ ಸಮಿತಿ ಸದಸ್ಯ ಪಿ. ವೆಂಕೋಬನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ ಇದ್ದರು.

ಪತ್ರಿಕಾ ರಂಗದಲ್ಲಿ ವಿವಿಧ ರೀತಿಯ ಸಾಧನೆಗೈದ ಸುರೇಶ್ ಚೌವ್ಹಾಣ್, ಉಮಾಪತಿ ಶೆಟ್ಟರ, ಕೆ.ಸೋಮಶೇಖರ್, ಕರಿಬಸಪ್ಪ, ಬಿ.ನಾಗರಾಜ್, ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತರ ಕುಟುಂಬದ ಮಕ್ಕಳಾದ ಜಿ.ವೈಷ್ಣವಿ, ಜಿ.ಎಸ್.ಶ್ರಾವಣಿ, ಕೆ.ಅನನ್ಯ ಅವರಿಗೆ ಪ್ರಶಸ್ತಿ ಪತ್ರ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪತ್ರಿಕಾ ದಿನದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು.

ಪತ್ರಕರ್ತ ಜಯಪ್ಪ ರಾಥೋಡ್ ಸ್ವಾಗತಿಸಿದರು. ಕೆ.ಲಕ್ಷ್ಮಣ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಖಾ ಪ್ರಕಾಶ್ ವಂದಿಸಿದರು. ಹಡಗಲಿ ಅಂದ ಕಲಾವಿದೆ ಕಾವ್ಯ ಪಾರಿ ಪ್ರಾರ್ಥಿಸಿದರು. ಅನಂತ ಜೋಷಿ, ಸುರೇಶ್ ಚೌವ್ಹಾಣ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲಂಕಾರಿ ಸಸ್ಯ ಬೆಳೆದು ಸ್ವಾವಲಂಬಿಗಳಾಗಿ: ಸುಮಾ ನಾಗರಾಜ ಹಾಸ್ಯಗಾರ
ಪೌರ ಕಾರ್ಮಿಕರು ನಾಡಿನ ದೊಡ್ಡ ಶಕ್ತಿ: ಆರ್.ವಿ. ದೇಶಪಾಂಡೆ