ಕನ್ನಡಪ್ರಭ ವಾರ್ತೆ ಅಥಣಿ
ಪತ್ರಿಕೆಗಳು ಮತ್ತು ಪತ್ರಕರ್ತರು ನಿರ್ಭೀತಿಯಿಂದ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಪಾರದರ್ಶಕತೆ ಹಾಗೂ ನಿಷ್ಪಕ್ಷಪಾತದಿಂದ ವರದಿಗಳನ್ನು ನೀಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ , ಅಥಣಿ ತಾಲೂಕು ಘಟಕದಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ, ಸಾಧಕರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಜೊತೆಗೆ 4ನೇ ಅಂಗವಾಗಿ ಪತ್ರಿಕಾ ರಂಗ ಪ್ರಮುಖ ಪಾತ್ರ ವಹಿಸುತ್ತದೆ. ಪತ್ರಿಕೆಗಳು ಮತ್ತು ಪತ್ರಕರ್ತರು ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪದೋಷ ತಿದ್ದುವ ಕೆಲಸ ಮಾಡಬೇಕು. ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನ ತಮ್ಮ ಹರಿತವಾದ ಲೇಖನಿಗಳ ಮೂಲಕ ಎತ್ತಿ ತೋರಿಸಿದಾಗ ವ್ಯವಸ್ಥೆಯನ್ನು ಸರಿದಾರಿಗೆ ತರಲು ಸಾಧ್ಯವಿದೆ. ಇದರಿಂದ ಜನಸಾಮಾನ್ಯರಿಗೆ ನ್ಯಾಯ ಕೊಡಿಸಲು ಪತ್ರಕರ್ತರಿಂದ ಸಾಧ್ಯವಿದೆ ಎಂದು ಹೇಳಿದರು.ಸುದ್ದಿಯ ಮೂಲವನ್ನ ಹುಡುಕುವುದರ ಜೊತೆಗೆ ಸತ್ಯವನ್ನ ಬೆಳಕಿಗೆ ತಂದು, ಜನಪರ ಯೋಜನೆ ಮತ್ತು ಚಿಂತನೆಗಳಿಗೆ ಚಾಲನೆ ನೀಡಲು ಪತ್ರಕರ್ತರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಮಾಜಿ ಶಾಸಕ ಷಹಜಾನ ಡೊಂಗರಗಾವ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಪತ್ರಿಕೆಗಳು ಸಮಾಜದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸ್ವಾತಂತ್ರ್ಯಾ ನಂತರವೂ ಕೂಡ ಪತ್ರಿಕಾರಂಗದಲ್ಲಿ ಅನೇಕ ಸುಧಾರಣೆ ಕಂಡಿದೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಪತ್ರಕರ್ತರು ಸತ್ಯ, ನಿಷ್ಠುರ ವರದಿಗಳನ್ನು ನೀಡುವ ಮೂಲಕ ಸಮಾಜದಲ್ಲಿ ಸುಧಾರಣೆಗೆ ಪ್ರೇರಣೆಯಾಗಬೇಕು. ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.ಹಿರಿಯ ಪತ್ರಕರ್ತ ಸಿ. ಎ. ಇಟ್ನಾಳಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕೋದ್ಯಮ ನಡೆದು ಬಂದ ಧಾರಿ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯ ಚಟುವಟಿಕೆಗಳು ಕುರಿತು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಸುಕ್ಷೇತ್ರ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಣ್ಣಾಸಾಬ ತೆಲಸoಗ ಮಾತನಾಡಿದರು.ಹಿರಿಯ ಪತ್ರಕರ್ತ ಎಸ್.ಡಿ. ಚಕ್ರವರ್ತಿ, ಸಮಾಜ ಸೇವಕ ರಾಮನಗೌಡ ಪಾಟೀಲ, ಮಹಿಳಾ ಸಾಹಿತಿ ಡಾ.ಅರ್ಚನಾ ಅಥಣಿ, ಅಭಿಯಂತರ ಪ್ರವೀಣ ಹುಣಸಿಕಟ್ಟಿ ಮತ್ತು ಆದರ್ಶ ಶಿಕ್ಷಕ ಎಸ್.ಕೆ. ಖೋತ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪತ್ರಿಕಾ ದಿನಾಚರಣೆಯ ಅಂಗವಾಗಿ ಮನೆ ಮನೆಗೆ ಪತ್ರಿಕೆಗಳನ್ನು ಹಂಚುವ ವಿತರಕರಿಗೆ ಉಡುಗೊರೆ ನೀಡಲಾಯಿತು.ಸಮಾರಂಭದಲ್ಲಿ ಪಟ್ಟಣದ ಹಿರಿಯ ವೈದ್ಯ ಡಾ ಮಲ್ಲಿಕಾರ್ಜುನ ಹಂಜಿ, ಎಸ್.ಎಸ್.ಎಂ.ಎಸ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಸ್. ಕಾಂಬಳೆ, ತಾಪಂ ಸಿಇಒ ಶಿವಾನಂದ ಕಲ್ಲಾಪುರ, ತಾಲೂಕ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಮೋರಟಗಿ, ಜಿಪಂ ಎಂಜಿನಿಯರ್ ವೀರಣ್ಣ ವಾಲಿ, ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅಣ್ಣಾಸಾಬ ತೆಲಸoಗ ಸ್ವಾಗತಿಸಿದರು. ವಿಜಯ ಹುದ್ದಾರ ನಿರೂಪಿಸಿದರು. ಶಿವಕುಮಾರ ಅಪರಾಜ ವಂದಿಸಿದರು.ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನ ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದು ಸಾಮಾಜಿಕ ಜಾಲತಾಣ ಹೆಚ್ಚು ಜನಪ್ರಿಯವಾಗುತ್ತಿದೆ. ಯುವ ಪತ್ರಕರ್ತರು ಡಿಜಿಟಲ್ ಮಾಧ್ಯಮ ಬಳಸಿಕೊಳ್ಳಲು ಹಲವು ಅವಕಾಶಗಳಿವೆ. ಈ ಮೂಲಕ ಅನೇಕ ಪತ್ರಕರ್ತರು ಉದ್ಯೋಗ ಕಂಡುಕೊಂಡಿದ್ದು, ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ತಮ್ಮದೇ ಆದ ಡಿಜಿಟಲ್ ಮಾಧ್ಯಮ ರೂಪಿಸಿಕೊಂಡು ಬದುಕು ರೂಪಿಸಿಕೊಳ್ಳಬೇಕು.
- ನಿರೂಪಮ ಕೆ.ಎಸ್. ಹಿರಿಯ ಪತ್ರಕರ್ತೆಇಂದಿನ ತಂತ್ರಜ್ಞಾನದಿಂದ ಬದಲಾದ ಕಾಲಚಕ್ರದಲ್ಲಿ ಪತ್ರಿಕೋದ್ಯಮದಲ್ಲಿ ಭಾರಿ ಪೈಪೋಟಿ ಇದೆ. ಸುದ್ದಿ ಬಿಂಬಿಸುವ ಅವಸರದಲ್ಲಿ ಸತ್ಯ ಮರೆಯಬಾರದು. ಪತ್ರಿಕೋದ್ಯಮ ಇಂದು ಸಂಕಷ್ಟದಲ್ಲಿದ್ದು, ಸತ್ಯ ಹಾಗೂ ಪ್ರಾಮಾಣಿಕ ಪತ್ರಕರ್ತರು ಆರ್ಥಿಕವಾಗಿ ಹಿಂದುಳಿದು ಬಡತನದಲ್ಲಿಯೇ ಜೀವನ ಮುಗಿಸುತ್ತಾರೆ.-ಲಕ್ಷ್ಮಣ ಸವದಿ ಶಾಸಕ ಅಥಣಿ ಮತಕ್ಷೇತ್ರ