ನೆಲಮಂಗಲ: ಪತ್ರಕರ್ತರು ಸಮಾಜದ ಅಭಿವೃದ್ಧಿಗೆ ಸಲಹೆ, ಸೂಚನೆ ನೀಡಿದಾಗ ಅಭಿವೃದ್ಧಿಯ ವೇಗ ಕೂಡ ಹೆಚ್ಚಾಗುತ್ತದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಸಮಾಜದ ಅಭಿವೃದ್ಧಿಗಾಗಿ ಪತ್ರಕರ್ತರ ಸಲಹೆ, ಸೂಚನೆಗಳು ಬಹಳ ಮುಖ್ಯವಾಗಿದ್ದು, ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಪತ್ರಕರ್ತರು ಹೆಚ್ಚಿನ ಒತ್ತು ನೀಡಬೇಕು. ವರದಿಗಳ ಮೂಲ ಸಾಧ್ಯತೆಗಳು ಹಾಗೂ ಸಲಹೆಗಳ ಮೂಲಕ ವರದಿ ಮಾಡಿದಾಗ ಬಹಳಷ್ಟು ಅನುಕೂಲವಾಗುತ್ತದೆ. ಸರಿ ದಾರಿಯಲ್ಲಿ ಹೋಗುವ ಪತ್ರಕರ್ತರನ್ನು ಯಾರೇ ಟಾರ್ಗೆಟ್ ಮಾಡಿದರೂ ಏನೂ ಮಾಡಲು ಸಾಧ್ಯವಿಲ್ಲ. ಪತ್ರಿಕೋದ್ಯಮಕ್ಕೆ ವಿಶೇಷ ಅವಕಾಶವನ್ನು ಸಮಾಜ ನೀಡಿದೆ, ಆ ಗೌರವವನ್ನು ನಾವೆಲ್ಲರೂ ಕಾಪಾಡಿಕೊಂಡು ಹೋಗಬೇಕು ಎಂದರು.
ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸಮಸಮಾಜ ನಿರ್ಮಾಣ ಮಾಡಲು ಹಾಗೂ ಸಮಾಜದ ಸರಿ-ತಪ್ಪುಗಳನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಪತ್ರಿಕೋದ್ಯಮ ಕ್ಷೇತ್ರ ಮಾಡುತ್ತಿದೆ. ಆದರೆ ಇತ್ತೀಚಿನ ಕೆಲ ಬೆಳವಣಿಗೆಗಳು ಪತ್ರಿಕೋದ್ಯಮವನ್ನು ಪ್ರಶ್ನೆ ಮಾಡುವ ಮಟ್ಟಕ್ಕೆ ಹೋಗುತ್ತಿರುವುದು ಬೇಸರ ತಂದಿದ್ದರೂ, ಅನೇಕ ನೈಜ ವರದಿಗಳು ಸಮಾಜದ ಬದಲಾವಣೆಗೆ ಕಾರಣವಾಗಿವೆ ಎಂದರು.ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ : ಪ್ರೆಸ್ ಕ್ಲಬ್ ಕೌನ್ಸಿಲ್ ತಾಲೂಕು ಘಟಕದಿಂದ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೈರವಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶೇಖ್ ಕರೀಂ, ಕಾನೂನು ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಯಣ್ಣ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಿರಾಗ್ ಶೆಟ್ಟಿ, ಸಾಹಿತ್ಯ ಮತ್ತು ಇತಿಹಾಸ ತಜ್ಞರಾದ ಬಾಲಸುಬ್ರಹ್ಮಣ್ಯ ಜಿ.ರಾವ್ ಅವರಿಗೆ ತಾಲೂಕು ಪ್ರೆಸ್ ಕ್ಲಬ್ ಕೌನ್ಸಿಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೈಕಲ್, ಜರ್ಕಿನ್ ವಿತರಣೆ : ನೆಲಮಂಗಲ ತಾಲೂಕಿನ 80ಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ಜರ್ಕಿನ್ ಹಾಗೂ ಪತ್ರಿಕಾ ಏಜೆನ್ಸಿಗಳಿಗೆ ಸೈಕಲ್ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ ಹಾಗೂ ವರದಿಗಳ ಪ್ರತಿ ಸಂಗ್ರಹ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ಪೋಟೋ 2 : ನೆಲಮಂಗಲ ನಗರದ ಬಸವಣ್ಣ ದೇವರ ಮಠದ ಆವರಣದಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್ ತಾಲೂಕು ಘಟಕದಿಂದ ಆಯೋಜಿಸಲಾಗಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಶಾಸಕ ಎನ್.ಶ್ರೀನಿವಾಸ್ ಹಾಗೂ ಗಣ್ಯರು ಸಾಧಕರನ್ನು ಅಭಿನಂದಿಸಿದರು