ಸಮಾಜದ ನಾಡಿಮಿಡಿತಕ್ಕೆ ಧ್ವನಿಯಾಗಲಿ ಪತ್ರಕರ್ತರ ಲೇಖನಿ

KannadaprabhaNewsNetwork |  
Published : Aug 30, 2026, 02:00 AM IST
ಪೋಟೊ29ಕೆಎಸಟಿ2 ಕುಷ್ಟಗಿ ತಾಲೂಕಿನ ಹನುಮಸಾಗರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕುಷ್ಟಗಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ 2026-27ನೇ ಸಾಲಿನ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಡಿಜಿಟಲ್, ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆಯೂ ಮುದ್ರಣ ಮಾಧ್ಯಮ ತನ್ನ ವಿಶ್ವಾಸಾರ್ಹತೆ ಉಳಿಸಿಕೊಂಡಿರುವುದು ಮಹತ್ವದ ಸಂಗತಿ

ಕುಷ್ಟಗಿ/ ಹನಮಸಾಗರ: ಸಮಾಜದ ನಾಡಿಮಿಡಿತ ಅರಿತು, ಜನರ ನೋವು–ನಲಿವುಗಳಿಗೆ ಧ್ವನಿಯಾಗಿ, ವಸ್ತುನಿಷ್ಠ ವರದಿಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸವೇ ನಿಜವಾದ ಪತ್ರಿಕೋದ್ಯಮ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ತಾಲೂಕಿನ ಹನುಮಸಾಗರ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಷ್ಟಗಿ ತಾಲೂಕು ಘಟಕದಿಂದ ಆಯೋಜಿಸಿದ್ದ 2026-27ನೇ ಸಾಲಿನ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಿಜಿಟಲ್, ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆಯೂ ಮುದ್ರಣ ಮಾಧ್ಯಮ ತನ್ನ ವಿಶ್ವಾಸಾರ್ಹತೆ ಉಳಿಸಿಕೊಂಡಿರುವುದು ಮಹತ್ವದ ಸಂಗತಿ. ಜನರ ಸಮಸ್ಯೆ ಹುಡುಕಿ, ಅವುಗಳ ಹಿಂದಿನ ವಾಸ್ತವ ಅರಿತು ವರದಿ ಮಾಡಬೇಕು. ಉತ್ತಮ ವರದಿ ಅಧಿಕಾರಿಗಳ ಕಣ್ಣು ತೆರೆಸಬೇಕು. ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ, ಸಮಾಜಕ್ಕೆ ಒಳಿತಾಗುವ ಬರಹಗಳಿಗೆ ಆದ್ಯತೆ ನೀಡಬೇಕು ಎಂದರು.

ಪತ್ರಕರ್ತರು ತಮ್ಮ ಹಲವು ಸಮಸ್ಯೆ ಎದುರಿಸುತ್ತಿದ್ದರೂ ಸಮಾಜದ ಧ್ವನಿಯಾಗಿದ್ದಾರೆ. ವೈಯಕ್ತಿಕ ಸಂಕಷ್ಟಗಳ ನಡುವೆಯೂ ಪತ್ರಿಕಾ ದಿನಾಚರಣೆ ಆಯೋಜಿಸಿರುವುದು ಶ್ಲಾಘನೀಯ. ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಬಳ್ಳಾರಿ ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ್ ಮಾತನಾಡಿ, ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾತ್ರವಲ್ಲ, ಸಮಾಜದ ಕಾವಲುಗಾರನೂ ಹೌದು. ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರ ಮರೆಯಲಾಗದು ಹಲವು ಪತ್ರಿಕೆಗಳು ಜನರಲ್ಲಿ ಜಾಗೃತಿ ಮೂಡಿಸಿವೆ ಎಂದರು.

ಪತ್ರಕರ್ತನು ಧೈರ್ಯ, ನಿಸ್ವಾರ್ಥ ಸೇವೆ ಹಾಗೂ ಸಾಮಾಜಿಕ ಬದ್ಧತೆಯೊಂದಿಗೆ ನೊಂದವರಿಗೆ ನ್ಯಾಯ ಕೊಡಿಸಬೇಕು, ಸರ್ಕಾರದ ಯೋಜನೆಗಳ ಕುರಿತು ಜಾಗೃತಿ, ಕೃಷಿ, ಉದ್ಯೋಗ, ಕೈಗಾರಿಕೆ ಅಭಿವೃದ್ಧಿಯಂತಹ ವಿಚಾರಗಳಿಗೆ ಪತ್ರಕರ್ತರು ಧ್ವನಿಯಾಗಬೇಕು ಎಂದರು.

ಪತ್ರಕರ್ತರ ಲೇಖನಿ ಸಮಾಜದ ಆಶಾಕಿರಣವಾಗಲಿ:

ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಪತ್ರಿಕೋದ್ಯಮದ ಸ್ವರೂಪವೂ ಬದಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮಾಹಿತಿ ಪರಿಶೀಲಿಸದೆ ಸುದ್ದಿಯಾಗಿ ಪ್ರಕಟಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಪತ್ರಕರ್ತರು ಸಾಮಾಜಿಕ ಕಳಕಳಿ ಹಾಗೂ ವೃತ್ತಿಪರ ಬದ್ಧತೆಯೊಂದಿಗೆ ಕಾರ್ಯ ನಿರ್ವಹಿಸಬೇಕು, ತಂತ್ರಜ್ಞಾನ ವೃತ್ತಿಯ ಗುಣಮಟ್ಟ ಹೆಚ್ಚಿಸುವ ಸಾಧನವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗ, ಗುಳೆ, ಮೂಲಸೌಕರ್ಯ ಕೊರತೆ ಸೇರಿದಂತೆ ಜನರ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪತ್ರಕರ್ತರು ಹೆಚ್ಚಿನ ಆದ್ಯತೆ ನೀಡಬೇಕು. ಪರಿಣಾಮಕಾರಿ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆದು, ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕೆಲಸ ಮಾಡಬೇಕು. ಪತ್ರಕರ್ತರ ಲೇಖನಿ ಸಮಾಜದ ಆಶಾಕಿರಣವಾಗಬೇಕು; ಜನರ ನೋವಿಗೆ ಧ್ವನಿಯಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾರ್ಯದರ್ಶಿ ರವೀಂದ್ರ ಬಾಕಳೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಘದ ಅಧ್ಯಕ್ಷ ಪವಾಡೆಪ್ಪ ಚೌಡ್ಕಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ಉತ್ತಮ ವರದಿಗಾರ ಪ್ರಶಸ್ತಿಗೆ ಆಯ್ಕೆಯಾದ ಪರಶಿವಮೂರ್ತಿ ಮಾಟಲದಿನ್ನಿ, ವಿಶೇಷ ಪ್ರಶಸ್ತಿಗೆ ಆಯ್ಕೆಯಾದ ಬಸವರಾಜ ಪಲ್ಲೇದ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಫಕೀರಪ್ಪ ಚಳಗೇರಿ, ರುದ್ರಪ್ಪಗೌಡ, ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ದುರ್ಗೇಶ ಮಡಿವಾಳರ, ಸೂಚಪ್ಪ ಭೋವಿ, ಆಶೀಫ್ ಡಾಲಾಯತ, ಶ್ರೀನಿವಾಸ ಜಹಾಗೀರದಾರ, ವಿ ಆರ್ ತಾಳಿಕೋಟಿ, ನಜಿರಸಾಬ ಮೂಲಿಮನಿ, ಮಂಜುನಾಥ ಹುಲ್ಲೂರು, ಚಂದಪ್ಪ ಕರಡಿ, ಜಯದೇವಿ ಉಪ್ಪಿನ್, ಸಂತೋಷ ತೋಟದ, ಮಲ್ಲಿಕಾರ್ಜುನ ದೋಟಿಹಾಳ, ಗೌರಮ್ಮ ಕುಡತಿನಿ, ಶಾರದಾ ಶೆಟ್ಟರ್‌, ಶ್ರೀದೇವಿ ಮಸ್ಕಿಮಠ, ಈರಣ್ಣ ಬಾದಾಮಿ, ಎನ್.ಶ್ಯಾಮಿದ್, ರೇಣುಕಾ ಪುರದ, ಶೋಭಾ ಪುರ್ತಗೇರಿ ಸೇರಿದಂತೆ ಕುಷ್ಟಗಿ, ಹನುಮಸಾಗರ, ದೋಟಿಹಾಳ ಹಾಗೂ ತಾವರಗೇರಾದ ಪತ್ರಕರ್ತರು, ಗಣ್ಯರು ಉಪಸ್ಥಿತರಿದ್ದರು. ಪತ್ರಕರ್ತ ಏಕನಾಥ ಮೆದಿಕೇರಿ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ
ಕನಿಷ್ಠ ಕಾನೂನು ಅರಿವು ಇಲ್ಲದವರು ಅಯೋಗ್ಯರು: ಶಾಸಕ ಕೃಷ್ಣನಾಯ್ಕ ಸವಾಲು