ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯ ಪ್ರವೇಶಾತಿ ಆರಂಭ

KannadaprabhaNewsNetwork |  
Published : Jul 14, 2026, 03:15 AM IST
21 | Kannada Prabha

ಸಾರಾಂಶ

,ಕಲಿಕೆಯನ್ನು ಮುಂದುವರಿಸಲು ಎನ್‌.ಐ.ಒ.ಎಸ್ ಮತ್ತು ರಾಜ್ಯ ಸರ್ಕಾರದ ಅನುಮತಿಯೊಂದಿಗೆ ಈ ಮುಕ್ತ ಶಾಲೆಯನ್ನು ನಡೆಸಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರುಪ್ರತಿಯೊಬ್ಬರಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಬೇಕೆಂಬ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಶಯದ ನಡುವೆಯೂ ಹಲವು ಕಾರಣಗಳಿಂದ ಮಧ್ಯದಲ್ಲೇ ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಆರಂಭವಾಗಿರುವ ನಗರದ ಜೆಎಸ್‌ಎಸ್ ಮಹಾವಿದ್ಯಾಪೀಠ ಕಳೆದ 26 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯಕ್ಕೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.7, 8, 9 ಮತ್ತು 10ನೇ ತರಗತಿಯಲ್ಲಿ ಅನುತ್ತೀರ್ಣರಾದವರು, ನಾನಾ ಕಾರಣಗಳಿಂದ ಅರ್ಧದಲ್ಲೇ ಶಾಲೆ ಬಿಟ್ಟವರು ಹಾಗೂ ಸಾಂಪ್ರದಾಯಿಕ ಶಿಕ್ಷಣದಿಂದ ವಂಚಿತರಾದ ಗ್ರಾಮೀಣ ವಿದ್ಯಾರ್ಥಿಗಳು, ಮಹಿಳೆಯರು, ಆರ್ಥಿಕವಾಗಿ ಹಿಂದುಳಿದವರು, ಕ್ರೀಡಾಪಟುಗಳು ಮತ್ತು ಉದ್ಯೋಗಸ್ಥರಿಗೆ ಗಳಿಕೆಯೊಂದಿಗೆ ಕಲಿಕೆಯನ್ನು ಮುಂದುವರಿಸಲು ಎನ್‌.ಐ.ಒ.ಎಸ್ ಮತ್ತು ರಾಜ್ಯ ಸರ್ಕಾರದ ಅನುಮತಿಯೊಂದಿಗೆ ಈ ಮುಕ್ತ ಶಾಲೆಯನ್ನು ನಡೆಸಲಾಗುತ್ತಿದೆ.ಈಗಾಗಲೇ ಲಕ್ಷಾಂತರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ ಹಾಗೂ ಉನ್ನತ ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರವೇಶಾತಿ ಮತ್ತು ಕೋರ್ಸ್ ಮುಕ್ತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಧೇಯವಾಕ್ಯದೊಂದಿಗೆ ರಾಜ್ಯಾದ್ಯಂತ ಇರುವ ಕಲಿಕಾ ಕೇಂದ್ರಗಳ ಮೂಲಕ ಪ್ರಸ್ತುತ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಪ್ರವೇಶಾತಿ ಬಯಸುವವರಿಗೆ ಕನಿಷ್ಠ 15 ವರ್ಷ ತುಂಬಿರಬೇಕು, ಗರಿಷ್ಠ ವಯೋಮಿತಿ ಇಲ್ಲ. ಪ್ರತಿ ವರ್ಷ ಜೂನ್ ತಿಂಗಳಿನಿಂದ ಪ್ರಾರಂಭವಾಗಿ ಜನವರಿವರೆಗೆ ದಾಖಲಾತಿಗೆ ಅವಕಾಶವಿದೆ. ಅತ್ಯಂತ ಕನಿಷ್ಠ ಶುಲ್ಕದೊಂದಿಗೆ ಪ್ರವೇಶಾತಿ ಪಡೆಯಬಹುದು. ದಾಖಲಾದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುವುದು. ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ಎದುರಿಸಲು ಅವಕಾಶವಿದೆ.ವಿದ್ಯಾರ್ಥಿಗಳು ಮೂರು ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿಷ್, ಹಿಂದಿ ಜೊತೆಗೆ ಐಚ್ಛಿಕ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ವಿಜ್ಞಾನ, ಅರ್ಥಶಾಸ್ತ್ರ, ವಾಣಿಜ್ಯ ಅಧ್ಯಯನ ಮತ್ತು ಗೃಹ ವಿಜ್ಞಾನ - ಈ ಆರು ವಿಷಯಗಳಲ್ಲಿ ಯಾವುದಾದರೂ ಮೂರು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯದ 10ನೇ ತರಗತಿ ಪರೀಕ್ಷೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅವರು ನಡೆಸಲಿದ್ದು, ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಂಡಳಿಯೇ ಅಂಕಪಟ್ಟಿ ವಿತರಿಸುತ್ತದೆ. ಈ ಪರೀಕ್ಷೆಯು ಸಾಮಾನ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತತ್ಸಮಾನವಾಗಿದ್ದು, ಈ ಅಂಕಪಟ್ಟಿ ಆಧಾರದ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರಿ ಸೇರಲು ಹಾಗೂ ಉನ್ನತ ವ್ಯಾಸಂಗ ಮುಂದುವರಿಸಬಹುದು. ಹೆಚ್ಚಿನ ಮಾಹಿತಿ ಹಾಗೂ ಪ್ರವೇಶಾತಿಗಾಗಿ ಅಧಿಕೃತ ವೆಬ್‌ ಸೈಟ್ www.jsskos.com ಸಂಪರ್ಕಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂ.ಕೆ. ಸವಿತಾಗೆ ಎಂಸಿಸಿಐ ಅಭಿನಂದನೆ
ಧಗೆ ಉತ್ತಮ ಕಲಾತ್ಮಕ ಹಾಗೂ ಕಮರ್ಷಿಯಲ್ ಚಿತ್ರ: ಈಶ್ವರ ಕೆರನಳ್ಳಿ