ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಚರ್ಮಗಂಟು ರೋಗವು ದನಗಳು ಮತ್ತು ಎಮ್ಮೆಗಳಲ್ಲಿ ಕಳೆದೆರಡು ವರ್ಷಗಳಲ್ಲಿ ರೈತರ ಹಾಗೂ ಹೈನುಗಾರಿಕೆ ಉದ್ಯಮಕ್ಕೆ ಬಾರಿ ಹೊಡೆತ ಕೊಟ್ಟ ಹಿನ್ನೆಲೆಯಲ್ಲಿ ಅದರ ತಡೆಗಾಗಿ ಪಶು ಸಂಗೋಪನಾ ಇಲಾಖೆಯ ವತಿಯಿಂದ ಜೂ. 20 ರಿಂದ ಜು. 20 ವರೆಗೆ ರೋಗಕ್ಕೆ ಉಚಿತವಾಗಿ ಲಸಿಕೆ ಹಾಕುವ ಅಭಿಯಾನವನ್ನು ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ.ತಾಲೂಕಿನ ಪ್ರತಿಯೊಂದು ಮನೆ ಮನೆಗೂ ನಮ್ಮ ಇಲಾಖೆ ಪಶುವೈದ್ಯರು, ಪಶು ವೀಕ್ಷಕರು, ಪಶುಪಾಲಕರು ಭೇಟಿ ನೀಡಿ ಜಾನುವಾರಿಗೆ ಉಚಿತವಾಗಿ ರೋಗ ನಿರೋಧಕ ಲಸಿಕೆ ಹಾಕಲಿದ್ದಾರೆ.
ಇದರ ಜೊತೆಗೆ ಕುರಿ, ಮೇಕೆಗಳಿಗೆ ಕರುಳುಬೇನೆ ರೋಗದ ವಿರುದ್ದದ ಲಸಿಕೆ ಹಾಕಲಿದ್ದು ರೈತರು ತಪ್ಪದೆ ಲಸಿಕೆ ಹಾಕಬೇಕು ಎಂದು ಸಹಾಯಕ ಪಶು ನಿರ್ದೇಶಕ ಡಾ. ಮಂಜುನಾಥ್ ತಿಳಿಸಿದ್ದಾರೆ.ರೋಗದ ಸೂಚನೆ
ಎಮ್ಮೆಗಳಿಗೆ ಹೋಲಿಸಿದರೆ ದನಗಳಲ್ಲಿ ಈ ರೋಗವು ತೀವ್ರವಾಗಿರುತ್ತದೆ. ರೋಗದ ಪ್ರಮುಖ ಲಕ್ಷಣವೆಂದರೆ ಚರ್ಮದಲ್ಲಿ ಗಂಟುಗಳು ಉಂಟಾಗುವುದು. ಇದು ಪ್ರಾಣಿಜನ್ಯ ರೋಗವಲ್ಲ ಮನುಷ್ಯರಿಗೆ ಈ ರೋಗವು ಹರಡುವುದಿಲ್ಲ. ಸೋಂಕಿತ ರಾಸುಗಳ ಹಾಲನ್ನು ಪ್ಯಾಶ್ಚರೀಕರಿಸಿ ಕಾಯಿಸಿ ಬಳಸಬಹುದು.ಈ ರೋಗವು ಪ್ರಮುಖವಾಗಿ ಸಂದೀಪದಿ ಕೀಟಗಳು, ಸೊಳ್ಳೆಗಳು ಉಣ್ಣೆಗಳು ಮತ್ತು ಕಚ್ಚುವ ನೊಣಗಳಿಂದ ಹರಡುತ್ತವೆ. ಸೋಂಕಿತ ಜಾನುವಾರುಗಳ ಸಾಗಾಣಿಕೆಯಿಂದ ಸೋಂಕು ಹರಡುಬಹುದಾಗಿದ್ದು ನೀರು ಮತ್ತು ಆಹಾರದ ಮೂಲಕವೂ ಈ ರೋಗ ಹರಡುತ್ತದೆ.
ರೋಗ ಲಕ್ಷಣಗಳುರಾಸುಗಳಲ್ಲಿ ಹಾಲಿನ ಇಳುವರಿಯಲ್ಲಿ ತೀವ್ರ ಇಳಿತ ಕಂಡುಬಂದು ಹೈನುಹಾರಿಕೆಗೆ ಹೊಡೆತ ಬೀಳಲಿದ್ದು, ತೀವ್ರ ಜ್ವರ, ದೇಹದ ಬಹುತೇಕ ಭಾಗಗಳಲ್ಲಿ ಒಂದರಿಂದ ಐದು ಸೆಂಟಿಮೀಟರ್ ಗಾತ್ರದ ಚರ್ಮದಗಂಟುಗಳು ಕಾಣಿಸಿ ಕೊಳ್ಳುತ್ತದೆ, ಕೀಲುಗಳ ಬಾವು ಮತ್ತು ಊತದಿಂದಾಗಿ ರೋಗಪೀಡಿತ ರಾಸುಗಳು ಮಲಗಲು ಸಾಧ್ಯವಾಗುವುದಿಲ್ಲ. ಚರ್ಮದ ಗಂಟುಗಳು ಹಲವಾರು ತಿಂಗಳುಗಳವರೆಗೆ ಇರುತ್ತದೆ.
ಗರ್ಭ ಧರಿಸಿದ ರಾಸುಗಳಲ್ಲಿ ಗರ್ಭಪಾತವಾಗಬಹುದು. ತೀವ್ರವಾದ ಸೋಂಕು ಇರುವ ಜಾನುವಾರುಗಳು ನ್ಯೂಮೋನಿಯಾ, ಕೆಚ್ಚಲುಬಾವು, ಕೊಳೆತ ಚರ್ಮದ ಗಾಯಗಳಿಂದಾಗಿ ಜಾನುವಾರುಗಳ ಚೇತರಿಕೆ ನಿಧಾನವಾಗಬಹುದು. ಸಾವು ಕೂಡ ಸಂಭವಿಸಬಹುದು. ಆದ್ದರಿಂದ ಪಶುವೈದ್ಯರ ಮೇಲ್ವಿಚಾರಣೆಯೊಂದಿಗೆ, ರೋಗ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆ ನೀಡಬೇಕು.ರೋಗ ನಿಯಂತ್ರಣ ಕ್ರಮಗಳು
ಆರೋಗ್ಯವಂತ ರಾಸುಗಳಿಗೆ ಕಡ್ಡಾಯವಾಗಿ ರೋಗ ನಿರೋಧಕ ಲಸಿಕೆ ಹಾಕಿಸುವುದು ಆರೋಗ್ಯವಂತ ಪ್ರಾಣಿಗಳಿಂದ ಸೋಂಕಿತ ಪ್ರಾಣಿಗಳನ್ನು ಪ್ರತ್ಯೇಕಿಸುವುದು,ಪ್ರಾಣಿಗಳ ಸಾಗಾಣಿಕೆ ಮೇಲೆ ನಿರ್ಬಂಧ ಹೇರುವುದು, ಹಿಂಡು ಹಿಂಡಾಗಿ ಜಾನುವಾರುಗಳು ಮೇಯುವುದನ್ನು ತಪ್ಪಿಸಬೇಕು. ನೊಣ ,ಸೊಳ್ಳೆ , ಉಣ್ಣೆ ಮತ್ತು ಕೀಟಗಳನ್ನು ನಿಯಂತ್ರಿಸಬೇಕು ಹಾಗೂ ಕಚ್ಚದಂತೆ ಮುಂಜಾಗ್ರತೆ ವಹಿಸಬೇಕು, ಸೊಳ್ಳೆ ಪರದೆ ಇಲ್ಲವೇ ಕೀಟ ಬಲೆಗಳನ್ನು ಬಳಕೆ ಮಾಡಬೇಕು.