ಸಾರಾಂಶ
ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ತಲೆಬುರುಡೆ ಲಭಿಸಿದೆ ಎನ್ನಲಾದ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಎಸ್‌ಐಟಿ ಮಹಜರು ನಡೆಸುವ ಸಾಧ್ಯತೆ ಇದೆ.
ಮಂಗಳೂರು : ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ತಲೆಬುರುಡೆ ಲಭಿಸಿದೆ ಎನ್ನಲಾದ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಎಸ್‌ಐಟಿ ಮಹಜರು ನಡೆಸುವ ಸಾಧ್ಯತೆ ಇದೆ.
ಬಂಗ್ಲೆಗುಡ್ಡೆಯಲ್ಲಿ ಇನ್ನಷ್ಟು ಶವಗಳನ್ನು ಹೂಳಲಾಗಿದೆ ಎಂದು ಸೌಜನ್ಯಾ ಮಾವ ವಿಠಲಗೌಡ ಹಾಗೂ ಆತನ ಸಹಚರ ಪ್ರದೀಪ್ ಎಸ್‌ಐಟಿ ವಿಚಾರಣೆ ವೇಳೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಠಲಗೌಡ ಬುರುಡೆ ತೆಗೆದಿರುವುದಕ್ಕೆ ಸಾಕ್ಷಿಯಾಗಿ ಪ್ರದೀಪ್‌ನನ್ನು ಶುಕ್ರವಾರ ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿ ಎಸ್‌ಐಟಿ ಸಾಕ್ಷ್ಯ ದಾಖಲು ಮಾಡಿತ್ತು.
ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಬಂಗ್ಲೆಗುಡ್ಡೆಯಲ್ಲಿ ಇವರನ್ನು ಎಸ್‌ಐಟಿ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ. ಈ ವೇಳೆ ಆರೋಪ ದೃಢಪಟ್ಟರೆ ವಿಠಲಗೌಡ ಅಥವಾ ಪ್ರದೀಪ್‌ನನ್ನು ಎಸ್‌ಐಟಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ವಿಠಲಗೌಡನನ್ನು ಸ್ಥಳಕ್ಕೆ ಕರೆಸಿಕೊಂಡು ಮಹಜರು ನಡೆಸಲಾಗಿದೆ.
ಇದೇ ವೇಳೆ ಭಾನುವಾರ, ಅಧಿಕಾರಿಗಳ ಸಭೆ ನಡೆಸಿದ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ, ಮುಂದಿನ ತನಿಖೆಯ ಮಗ್ಗುಲುಗಳ ಬಗ್ಗೆ ಚರ್ಚೆ ನಡೆಸಿದರು. ತನಿಖೆಯ ಹಾದಿಯ ಬಗ್ಗೆ ನೀಲನಕ್ಷೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅವಶ್ಯವಿದ್ದರೆ ಮತ್ತೆ ವಿಚಾರಣೆಗೆ ಕರೆಸುವಂತೆಯೂ ಅವರು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಎರಡು ವಾರಗಳ ಬಳಿಕ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಭಾನುವಾರ ಬೆಳ್ತಂಗಡಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಹುತೇಕ ಸೋಮವಾರ
ಸ್ನೇಹಮಯಿ ಕೃಷ್ಣ ವಿರುದ್ಧ ದೂರು
ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಮಾವ ವಿಠಲಗೌಡನ ವಿರುದ್ಧ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಪ್ರತಿ ದೂರು ಸಲ್ಲಿಕೆಯಾಗಿದೆ.
ವೆಂಕಪ್ಪ ಕೋಟ್ಯಾನ್ ಎಂಬವರು ಶನಿವಾರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2012ರಲ್ಲಿ ಕೊಲೆಯಾದ ಸೌಜನ್ಯಾಳನ್ನು ಆಕೆಯ ಮಾವ ವಿಠಲಗೌಡ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಸ್ನೇಹಮಯಿ ಕೃಷ್ಣ ಪೊಲೀಸರಿಗೆ ದೂರು ನೀಡಿದ್ದರು. ಸೌಜನ್ಯಾಳಿಗೆ ನ್ಯಾಯ ಒದಗಿಸುವ ಹೋರಾಟದ ದಾರಿ ತಪ್ಪಿಸುವ ದುರುದ್ದೇಶ ಸ್ನೇಹಮಯಿ ಕೃಷ್ಣ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಮೈಸೂರಿನಿಂದ ಕರೆಯಿಸಿ ಈ ರೀತಿ ಹೇಳಿಕೆ ನೀಡಿರುವುದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು. ಸ್ನೇಹಮಯಿ ಕೃಷ್ಣ ಅವರನ್ನು ವಿಚಾರಣೆ ನಡೆಸುವಂತೆ ದೂರು ಪತ್ರದಲ್ಲಿ ಒತ್ತಾಯಿಸಲಾಗಿದೆ.