ಕನ್ನಡಪ್ರಭ ವಾರ್ತೆ ಮಳವಳ್ಳಿ

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಖಾಸಗೀಕರಣ ಹಾಗೂ ವಿದ್ಯುತ್ ಕಾಯ್ದೆ-2026ರ ತಿದ್ದುಪಡಿ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿದರು.

ಪಟ್ಟಣದ ಸೆಸ್ಕ್ ಕಚೇರಿಯ ಮುಂಭಾಗ ಜಮಾಯಿಸಿದ ವಿದ್ಯುತ್ ಖಾಸಗೀಕರಣ ಹಾಗೂ ವಿದ್ಯುತ್ ಕಾಯ್ದೆ-2026ರ ತಿದ್ದುಪಡಿ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ನೌಕರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸೆಸ್ಕ್ ನ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಪುಟ್ಟಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರದ ಇಂಥ ನೀತಿಯಿಂದ ಮುಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ತೊಂದರೆಯಾಗಲಿದೆ. ಸಾರ್ವಜನಿಕರ ಆಸ್ತಿಯನ್ನು ಖಾಸಗಿಕರಣ ಮಾಡುತ್ತಿರುವುದರಿಂದ ಕೆಳಹಂತ ನೌಕಕರು ಬದುಕಿಗೆ ಸಂಕಷ್ಟ ಎದುರಾಗಲಿದೆ. ಕೂಡಲೇ ಕೇಂದ್ರ ಸರ್ಕಾರ ಖಾಸಗೀಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಸೆಸ್ಕ್ ನ ಸಹಾಯನ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎಸ್.ಪ್ರೇಮ್ ಕುಮಾರ್ ಮಾತನಾಡಿ, ರೈತ ದೇಶದ ಬೆನ್ನೆಲುಬು. ರೈತರಿಗೆ ಸರ್ಕಾರ ಹಲವು ಯೋಜನೆಯಡಿ ವಿದ್ಯುತ್ ನೀಡಲಾಗುತ್ತಿದೆ. ಖಾಸಗೀಕರಣ ಮಾಡಿದರೆ ಯಾರೊಬ್ಬರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ರೈತ ವಿರೋಧಿ ವಿದ್ಯುತ್ ಕಾಯ್ದೆ ಬಿಲ್ಲನ್ನು ತಿದ್ದುಪಡಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.


ಸೆಸ್ಕ್ ನ ಗ್ರಾಮಾಂತರ ಸಹಾಯನ ಕಾರ್ಯನಿರ್ವಾಹಕ ಎಂಜಿನಿಯರ್ ನಿತೀಶ್, ಲೆಕ್ಕಾಧಿಕಾರಿ ಸತೀಶ್, ಸೆಸ್ಕ್ ನೌಕರರ ಸಂಘದ ಅಧ್ಯಕ್ಷ ಮಂಜು, ಕಾರ್ಯದರ್ಶಿ ದಿವಾಕರ್, ಗಿರಿದಾಸ್ ಪಾಲ್ಗೊಂಡಿದ್ದರು.

ಇಂದು ವಿದ್ಯುತ್‌ ವ್ಯತ್ಯಯ

ಹಲಗೂರು: ಸಮೀಪದ ಹಾಡ್ಲಿ ಬಳಿ ಇರುವ 66/11 ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆ.13 ರಂದು ಶುಕ್ರವಾರ ಲಿಂಕ್ ಲೈನ್ ಕಾಮಗಾರಿ ನಿರ್ವಹಣಾ ಕಾರ್ಯ ನಡೆಯಲಿದೆ.ಈ ಕಾರಣದಿಂದ ಹಾಡ್ಲಿ, ಅಗಸನಪುರ, ಜೋಗಿಪುರ, ಮೇಗಳಾಪುರ, ಕಂಸಾಗರ, ಲಿಂಗಣಾಪುರ, ನಡಕಲಪುರ, ನಂಜೇಗೌಡನದೊಡ್ಡಿ, ಗ್ರಾಮದೇವತೆಪುರ, ಕೋಡಿಪುರ, ಹುಲ್ಲಹಳ್ಳಿ, ಹುಲ್ಲಾಗಾಲ, ಚೆನ್ನೀಪುರ, ಬಸವನಪುರ, ಡಿ.ಹಲಸಹಳ್ಳಿ, ಧನಗೂರು, ಕೂನನಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿವಿಧ ಗ್ರಾಮಗಳಲ್ಲಿ ಇಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಮಳವಳ್ಳಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌‌ ಟಿ.ಪುಟ್ಟಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.