ಕನ್ನಡಪ್ರಭ ವಾರ್ತೆ
ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಎರಡೇ ಜಾತಿಗಳಿದ್ದು ಕುಲಕುಲವೆಂದು ನೀವೇಕೆ ಹೊಡೆದಾಡುವಿರೆಂದು ಅಂದಿನ ಕಾಲದಲ್ಲಿಯೇ ದಾಸಶ್ರೇಷ್ಠ ಕನಕದಾಸರು ಕೀರ್ತನೆಯೊಂದಿಗೆ ಬಡಿದೆಬ್ಬಿಸಿದ್ದರೂ ಸಹ ಇಲ್ಲಿಯವರೆಗೂ ಅದು ಸಾಧ್ಯವಾಗಿಲ್ಲ. ಇನ್ನು ಮುಂದಾದರೂ ಜಾತಿ ವ್ಯವಸ್ಥೆಯಿಂದ ಸಮಾಜ ಮುಕ್ತವಾಗಬೇಕಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು. ನಗರದ ತಾಲೂಕು ಆಡಳಿತದ ವತಿಯಿಂದ ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಕನಕದಾಸ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಜಯಂತಿಗಳು ಚುನಾವಣೆಗಳಿಗೆ ಮಾತ್ರ ಸೀಮಿತವಾಗಬಾರದು. ಆದರೆ ಕೆಲವರು ಚುನಾವಣೆಗಳು ಹತ್ತಿರ ಬಂದಾಗ ಅದ್ದೂರಿಯಾಗಿ ಜಯಂತಿ ಮಾಡಲು ಮುಂದಾಗುತ್ತಾರೆ. ನಾನು ರಾಜಕೀಯ ಪ್ರವೇಶ ಮಾಡಿದಾಗಲೇ ಗೊತ್ತಾಗಿದ್ದು ಜಾತಿಗಳ ಬಗ್ಗೆ. ಆದರೆ ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಬೇಕು ಆಗ ಮಾತ್ರ ಸಮಾಜ ಉದ್ದಾರವಾಗಲಿದೆ. ಅಂದಿನ ಕಾಲದಲ್ಲಿಯೇ ಸಮಾಜದಲ್ಲಿ ಜಾತಿ ವ್ಯವಸ್ಥೆ ವಿರುದ್ದ ಕೀರ್ತನೆಗಳ ಮುಖಾಂತರ ಹೋರಾಟ ನಡೆಸಿದ ಕನಕದಾಸರನ್ನು ನಾವೆಲ್ಲರೂ ಸ್ಮರಿಸಬೇಕು. ಜಾತಿಗಳ ನಡುವೆ ಮೇಲುಕೀಳು ಭಾವನೆಯನ್ನು ತೊಡೆದು ಹಾಕಲು ಕನಕದಾಸರು ಕೀರ್ತನೆಗಳ ಮೂಲಕ ಅಂದೇ ಹೋರಾಟ ನಡೆಸಿದ್ದರು ಎಂದರು. ಜಿಲ್ಲಾ ಅಹಿಂದ ಅಧ್ಯಕ್ಷ ಲಿಂಗರಾಜು ಮಾತನಾಡಿ, ಕನಕದಾಸರು ಯಾವುದೊ ಒಂದು ಸಮಾಜವನ್ನು ಗಣನೆಗೆ ತೆಗೆದುಕೊಂಡು ಸಂದೇಶ ನೀಡದೆ ಎಲ್ಲಾ ಸಮಾಜಗಳು ಒಟ್ಟಾಗಿರಬೇಕೆಂಬ ದೃಷ್ಟಿಯಿಂದ ದಾಸ ಸಾಹಿತ್ಯದ ಮೂಲಕ ಸಮಾಜದ ಅಭಿವೃದ್ದಿಗೆ ಶ್ರಮಿಸಿದ್ದರು. ಜಾತಿಗಳ ನಡುವೆ ಮೇಲುಕೀಳು ಭಾವನೆಯನ್ನು ತೊಡೆದು ಹಾಕಲು ಅಂದೇ ಹೋರಾಟ ನಡೆಸಿದ್ದರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿಕೊಳ್ಳಲು ಕನಕದಾಸರಂತಹ ಮಹಾಪುರುಷರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದ್ದು, ಎಲ್ಲರೂ ಸಮಾನರೆಂಬ ಮನೋಭಾವನೆ ಬೆಳೆಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಪವನ್‌ಕುಮಾರ್, ತಾ.ಪಂ ಇಓ ಸುದರ್ಶನ್, ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿದರು. ನಿವೃತ್ತ ಶಿಕ್ಷಕ ಸೋಮಶೇಖರ್ ಉಪನ್ಯಾಸ ನೀಡಿದರು. ಸಮಾಜದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಜಕ್ಕನಹಳ್ಳಿ ಲಿಂಗರಾಜು, ತರಕಾರಿ ಗಂಗಾಧರ್, ಬಿಇಓ ಚಂದ್ರಯ್ಯ, ಜಿ.ಪಂ ಮಾಜಿ ಸದಸ್ಯ ಗೋವಿಂದಪ್ಪ, ಹಿಂದುಳಿದ ವರ್ಗಗಗಳ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ, ನಗರಸಭಾ ಸದಸ್ಯರಾದ ಓಹಿಲಾ, ವಿನುತಾ ಸೇರಿದಂತೆ ಸಮಾಜದ ಮುಖಂಡರು, ಇಲಾಖೆಗಳ ಸಿಬ್ಬಂದಿಗಳು ಭಾಗವಹಿಸಿದ್ದರು.