ಶಿಕ್ಷಣ, ಉದ್ಯೋಗ ಪಡೆದ ನಂತರವೇ ಮದುವೆ ಬಗ್ಗೆ ನಿರ್ಣಯಿಸಿ

KannadaprabhaNewsNetwork |  
Published : Oct 10, 2024, 02:18 AM IST
9ಎಚ್‍ಆರ್‍ಆರ್ 1ಹರಿಹರದಲ್ಲಿ ಮಾನವ ಬಂಧುತ್ವ ವೇದಿಕೆ, ಸತೀಶ್ ಜಾರಕಿಹೊಳಿ ಫೌಂಡಶನ್‍ನಿಂದ ಮೈತ್ರಿವನದಲ್ಲಿ ಆಯೋಜಿಸಿದ್ದ ಮಹಿಳಾ ಗ್ರಾಮ ಅಧಿಕಾರಿ ಅಕಾಂಕ್ಷಿಗಳ ತರಬೇತಿ ಕಾರ್ಯ ಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿದರು. | Kannada Prabha

ಸಾರಾಂಶ

ಉನ್ನತ ಶಿಕ್ಷಣ ಪೂರೈಸಿ ಉದ್ಯೋಗ ಪಡೆದು, ನಂತರ ಮದುವೆ ಬಗ್ಗೆ ನಿರ್ಣಯಿಸಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ಹಂತದಲ್ಲೆ ಪ್ರೀತಿ, ಪ್ರೇಮದ ಸುಳಿಯಲ್ಲಿ ಸಿಲುಕಿ ಮುಂದಿನ ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಹರಿಹರ ಮೈತ್ರಿವನದಲ್ಲಿ ಮಹಿಳಾ ಗ್ರಾಮ ಅಧಿಕಾರಿ ಆಕಾಂಕ್ಷಿಗಳ ತರಬೇತಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹರಿಹರ ಉನ್ನತ ಶಿಕ್ಷಣ ಪೂರೈಸಿ ಉದ್ಯೋಗ ಪಡೆದು, ನಂತರ ಮದುವೆ ಬಗ್ಗೆ ನಿರ್ಣಯಿಸಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ಹಂತದಲ್ಲೆ ಪ್ರೀತಿ, ಪ್ರೇಮದ ಸುಳಿಯಲ್ಲಿ ಸಿಲುಕಿ ಮುಂದಿನ ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ನಗರದ ಮೈತ್ರಿವನದಲ್ಲಿ ಮಾನವ ಬಂಧುತ್ವ ವೇದಿಕೆ, ಸತೀಶ್ ಜಾರಕಿಹೊಳಿ ಫೌಂಡೇಶನ್‍ನಿಂದ ಮಂಗಳವಾರ ಆಯೋಜಿಸಿದ್ದ, ಮಹಿಳಾ ಗ್ರಾಮ ಅಧಿಕಾರಿ ಆಕಾಂಕ್ಷಿಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾನೂನು ಪ್ರಕಾರ 18 ವರ್ಷ ತುಂಬಿದ ಮೇಲೆ ತಮಗಿಷ್ಟವಾದ ವ್ಯಕ್ತಿಯೊಂದಿಗೆ ಪ್ರೀತಿ ಮಾಡಿ, ಮದುವೆ ಮಾಡಿಕೊಳ್ಳಬಹುದು ಎಂಬ ಧೋರಣೆ ಹೊಂದಿದ್ದರೆ, ಬದುಕಿನಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮನ್ನು ಸಾಕಿ, ಬೆಳೆಸಿದ ತಂದೆ, ತಾಯಿ ಬಂಧು ಬಳಗದವರಿಗೆ ಜೀವನ ಪರ್ಯಂತ ನೋವು ನೀಡುತ್ತೀರಿ ಎಂದು ಎಚ್ಚರಿಸಿದರು.

ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಷೇರು ಮಾರುಕಟ್ಟೆ ಲಾಭ, ಲೈಂಗಿಕ ಹಗರಣ, ಡ್ರಗ್ಸ್ ಕೊರಿಯರ್ ಬಂದಿದೆ, ಹವಾಲಾದ ಮೂಲಕ ಹಣದ ವರ್ಗಾವಣೆ ಮಾಡಿದ್ದೀರೆಂದು ಬೆದರಿಸಿ ಲಕ್ಷಾಂತರ ರು. ವಂಚನೆ ಪ್ರಕರಣಗಳು ನಡೆಯುತ್ತಿವೆ. ವಿದ್ಯಾವಂತರೆ ವಂಚನೆಗೆ ಒಳಗಾಗುತ್ತಿರುವುದು ವಿಪರ್ಯಾಸ. ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಫೋಟೋ, ಮಾಹಿತಿ ಸೋರಿಕೆ ಆಗದಂತೆ ಎಚ್ಚರಿಕೆ ವಹಿಸಬೇಕು. ಇಂತಹ ವಂಚಕರು ಫೋನ್ ಮಾಡಿದರೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಅಥವಾ 112ಗೆ ಫೋನ್ ಮಾಡಬೇಕು ಎಂದು ತಿಳಿಸಿದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಜಾತಿ, ಧರ್ಮ, ವರ್ಣದಂತೆಯೆ ಹೆಣ್ಣು, ಗಂಡೆಂಬ ಲಿಂಗಭೇದ ಭಾರತೀಯ ಸಮಾಜದ ಜ್ವಲಂತ ಸಮಸ್ಯೆಯಾಗಿದೆ. ಸಮಾಜದಲ್ಲಿ ಲಿಂಗ ತಾರತಮ್ಯತೆ, ಮೂಢನಂಬಿಕೆಗಳನ್ನು ನಿವಾರಿಸಲು ನಮ್ಮ ಸಂಸ್ಥೆ ಶ್ರಮಿಸುತ್ತಿದೆ ಎಂದರು.

ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಸ್ವಂತ ಆದಾಯದಲ್ಲಿ ರಾಜ್ಯದ ಹಲವು ಕೇಂದ್ರಗಳಲ್ಲಿ ಬಡ ಅಭ್ಯರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ವಸತಿ, ಆಹಾರದ ವ್ಯವಸ್ಥೆ ಮಾಡಿ ತರಬೇತಿ ನೀಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಗ್ರಾಮ ಅಧಿಕಾರಿ ಅಕಾಂಕ್ಷಿಗಳು ಹಾಜರಿದ್ದರು.

- - -

ಕೋಟ್‌ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶ್ರಮ ಪಡುವವರಿಗೆ ಸಫಲ್ಯತೆ ಸಿಗುತ್ತದೆ. ಕೇಂದ್ರ, ರಾಜ್ಯ ಸರ್ಕಾರ ಸೇರಿದಂತೆ ವಿವಿಧ ಸರ್ಕಾರಿ ಉದ್ಯೋಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿದ್ದು, ಶ್ರದ್ಧೆಯಿಂದ ಸಿದ್ಧತೆ ನಡೆಸಿದರೆ ಒಂದಲ್ಲ ಒಂದು ಉದ್ಯೋಗ ಪಡೆಯಬಹುದು

- ಉಮಾ ಪ್ರಶಾಂತ್‌, ಜಿಲ್ಲಾ ಎಸ್‌ಪಿ

- - - -9ಎಚ್‍ಆರ್‍ಆರ್1:

ಹರಿಹರದಲ್ಲಿ ಮಾನವ ಬಂಧುತ್ವ ವೇದಿಕೆ, ಸತೀಶ್ ಜಾರಕಿಹೊಳಿ ಫೌಂಡಶನ್‍ನಿಂದ ಮೈತ್ರಿವನದಲ್ಲಿ ಆಯೋಜಿಸಿದ್ದ ಮಹಿಳಾ ಗ್ರಾಮ ಅಧಿಕಾರಿ ಅಕಾಂಕ್ಷಿಗಳ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ