ದಂಪತಿ ಕೊಲೆ ಪ್ರಕರಣ: ಮಂಗಳೂರು ಕೋರ್ಟ್‌ನಲ್ಲಿ ಆರೋಪ ಸಾಬೀತು

KannadaprabhaNewsNetwork |  
Published : Jan 15, 2026, 03:00 AM IST
ಕೋರ್ಟ್ ಆದೇಶ | Kannada Prabha

ಸಾರಾಂಶ

ಮೂಲ್ಕಿ ಪೊಲೀಸ್‌ ಠಾಣೆ ವ್ಯಾಪ್ತಿಯ ಏಳಿಂಜೆ ಗ್ರಾಮದಲ್ಲಿ 2020ರಲ್ಲಿ ದಂಪತಿ ಕೊಲೆ ಮಾಡಿದ ಪ್ರಕರಣದಲ್ಲಿ ಸ್ಥಳೀಯ ನಿವಾಸಿ ಆಲ್ಫೋನ್ಸ್ ಸಲ್ದಾನಾ (52) ಎಂಬಾತನ ಮೇಲಿನ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಜ.14ರಂದು ಪ್ರಮಾಣ ಪ್ರಕಟ

ಮಂಗಳೂರು: ಮೂಲ್ಕಿ ಪೊಲೀಸ್‌ ಠಾಣೆ ವ್ಯಾಪ್ತಿಯ ಏಳಿಂಜೆ ಗ್ರಾಮದಲ್ಲಿ 2020ರಲ್ಲಿ ದಂಪತಿ ಕೊಲೆ ಮಾಡಿದ ಪ್ರಕರಣದಲ್ಲಿ ಸ್ಥಳೀಯ ನಿವಾಸಿ ಆಲ್ಫೋನ್ಸ್ ಸಲ್ದಾನಾ (52) ಎಂಬಾತನ ಮೇಲಿನ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಜ.14ರಂದು ಶಿಕ್ಷೆ ಪ್ರಮಾಣ ಪ್ರಕಟವಾಗುವ ಸಾಧ್ಯತೆಯಿದೆ.ಏಳಿಂಜೆ ಗ್ರಾಮದ ನಿವಾಸಿ ವಿನ್ಸೆಂಟ್ ಡಿಸೋಜ (49) ಹಾಗೂ ಅವರ ಪತ್ನಿ ಹೆಲೆನ್ ಡಿಸೋಜ (43) ಕೊಲೆಯಾದವರು. ಇವರ ನೆರೆಮನೆ ನಿವಾಸಿಯೇ ಅಪರಾಧಿ ಆಲ್ಫೋನ್ಸ್‌ ಸಲ್ದಾನಾ.ಆಲ್ಫೋನ್ಸ್‌ನ ಜಾಗದಲ್ಲಿರುವ ಮರದ ಕೊಂಬೆಗಳು ವಿನ್ಸೆಂಟ್‌ ಮನೆ ಜಾಗದಲ್ಲಿ ಬೀಳುವ ಬಗ್ಗೆ ತಕರಾರು ಇತ್ತು. ಈ ಸಮಸ್ಯೆ ಬಗೆಹರಿಸಲು ವಿನ್ಸೆಂಟ್‌, 2020ರ ಏ.29ರಂದು ಬೆಳಗ್ಗೆ 10 ಗಂಟೆಗೆ ಆಲ್ಫೋನ್ಸ್‌ನನ್ನು ತನ್ನ ಮನೆಗೆ ಕರೆದಿದ್ದಾನೆ. ಮಾತುಕತೆ ಗಲಾಟೆಗೆ ತಿರುಗಿದೆ. ಏಕಾಏಕಿ ಕ್ರೋಧಗೊಂಡ ಆಲ್ಫೋನ್ಸ್‌ ಅಲ್ಲೇ ಇದ್ದ ಹಾರೆಯಿಂದ ವಿನ್ಸೆಂಟ್‌ಗೆ ಹೊಡೆಯಲು ಮುಂದಾಗಿದ್ದಾನೆ. ಬಳಿಕ ತನ್ನ ಮನೆಯ ಅಡುಗೆ ಕೋಣೆಯಿಂದ ಚೂರಿ ತಂದು ವಿನ್ಸೆಂಟ್‌ನ ಎಡ ಹೊಟ್ಟೆ, ಭುಜ, ಬೆನ್ನು ಹಾಗೂ ಇತರ ಕಡೆ ತೀವ್ರವಾಗಿ ತಿವಿದಿದ್ದಾನೆ.ಇದನ್ನು ನೋಡಿದ ವಿನ್ಸೆಂಟ್‌ ಪತ್ನಿ ಹೆಲೆನ್ ಡಿಸೋಜ ಗಂಡನನ್ನು ರಕ್ಷಿಸಲು ಮುಂದಾದಾಗ ಆಕೆಗೂ ಎದೆ, ಸೊಂಟ, ಇತರ ಕಡೆ ಚೂರಿಯಿಂದ ತಿವಿದಿದ್ದಾನೆ. ಗಂಭೀರ ಗಾಯಗೊಂಡಿದ್ದ ವಿನ್ಸೆಂಟ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ಹೆಲೆನ್ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ.

ತನಿಖೆ ನಡೆಸಿದ ಆಗಿನ ಮೂಲ್ಕಿ ಪೊಲೀಸ್ ನಿರೀಕ್ಷಕರ ಜಯರಾಮ ಡಿ. ಗೌಡ ಅವರು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 24 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿ ಒಟ್ಟು 46 ದಾಖಲೆಗಳನ್ನು ಗುರುತಿಸಿತ್ತು. ನಂತರ ಪ್ರಕರಣ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ/ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದು, ಅಲ್ಲಿ ಆಲ್ಫೋನ್ಸ್ ಸಲ್ದಾನ ದೋಷಿ ಎಂದು ತೀರ್ಪು ನೀಡಿದೆ.ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಲಾ ಮಾರ್ಗರೇಟ್ ಕ್ರಾಸ್ತಾ ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದಾರೆ. ವಿಚಾರಣೆ ಕಾಲದಲ್ಲಿ ಮೂಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ಕಾವ್ಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2259.56 ಕೋಟಿ ಅನುದಾನ ಮಂಜೂರು
ಮನರೇಗಾ ಮರುನಾಮಕರಣದಿಂದ ಬಡವರ ಅನ್ನದ ಬಟ್ಟಲಿಗೆ ಕನ್ನ: ಬಿಪಿನ್ ಚಂದ್ರ ಪಾಲ್‌