ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದೃಢ ನಾಗರಿಕ ಸಮಾಜ ನಿರ್ಮಾಣವಾಗಬೇಕಾದರೆ ವಕೀಲರು ಮತ್ತು ನ್ಯಾಯಾಂಗ ವ್ಯವಸ್ಥೆ ಮತ್ತಷ್ಟು ಗಟ್ಟಿಯಾಗಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅಭಿಪ್ರಾಯಪಟ್ಟರು.ಚನ್ನಪಟ್ಟಣ ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆ ಸಹಯೋಗದೊಂದಿಗೆ ನಗರದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ವಕೀಲರ ದಿನಾಚರಣೆ ಹಾಗೂ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಮೊದಲ ರಾಷ್ಟ್ರಪತಿ ಬಾಬುರಾಜೇಂದ್ರ ಪ್ರಸಾದ್ ಅವರ ಜನ್ಮದಿನವನ್ನು ಡಿ. 3ರಂದು ವಕೀಲರ ದಿನವನ್ನಾಗಿ ಅಚರಣೆ ಮಾಡಲಾಗುತ್ತಿದೆ. ಬಾಬುರಾಜೇಂದ್ರ ಪ್ರಸಾದ್ ಅವರು, ಖ್ಯಾತ ವಕೀಲರಾಗಿ, ಸ್ವಾತಂತ್ರ್ಯ ಸಂಗ್ರಾಮ ಚಳವಳಿಯಲ್ಲಿ ಭಾಗವಹಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಹಾಗೂ ದೇಶದ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ಜೊತೆಗೆ ಸಹಕರಿಸಿದವರಲ್ಲಿ ಒಬ್ಬರು ಎಂದರು.ದೇಶ ಮತ್ತು ರಾಜ್ಯದ ಪ್ರಗತಿಯಲ್ಲಿ ವಕೀಲರು ಮತ್ತು ನ್ಯಾಯಾಂಗದ ಕೊಡುಗೆ ಅಪಾರ. ಜನರಲ್ಲಿ ಇಂದಿಗೂ ನ್ಯಾಯಾಂಗದ ಬಗ್ಗೆ ವಿಶ್ವಾಸವಿದೆ. ವಕೀಲರು ಮತ್ತು ನ್ಯಾಯಾಂಗದ ಮೇಲೆ ಅಪಾರವಾದ ಜವಾಬ್ದಾರಿ ಇದೆ. ವಕೀಲರು ಶಿಸ್ತು, ಶ್ರಮ, ಸಮಯ ಪ್ರಜ್ಞೆ, ಆತ್ಮ ವಿಶ್ವಾಸ, ನಿರ್ಭೀತಿಯತೆ ಎಂಬ ಪಂಚಮಂತ್ರಗಳನ್ನು ಜೀವನದಲ್ಲಿ ಆಳವಡಿಸಿಕೊಂಡು ಬಡವರು, ಅಶಕ್ತರು ಹಾಗೂ ನೊಂದವರ ಧ್ವನಿಯಾಗಿ ಅವರ ಹಿತವನ್ನು ಕಾಯುವ ಕೆಲಸ ಮಾಡಿದಾಗ ವಕೀಲರ ವೃತ್ತಿಗೆ ಗೌರವ ಬರುತ್ತದೆ ಎಂದು ಸಲಹೆ ಮಾಡಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ಮಾತನಾಡಿ, ಅಧಿಕಾರ ಅವಧಿಯಲ್ಲಿ ತಾಲೂಕಿಗೆ ಕಣ್ವ ಏತ ನೀರಾವರಿ ಯೋಜನೆ ಮತ್ತು ನೂತನ ನ್ಯಾಯಾಲಯ ಕಟ್ಟಡಕ್ಕೆ ಇದ್ದ ಜಾಗದ ಸಮಸ್ಯೆಯನ್ನು ಬಗೆಹರಿಸಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ್ದನ್ನು ಸ್ಮರಿಸಿಕೊಂಡು, ರಾಜ್ಯದ ಒಣ ಪ್ರದೇಶಕ್ಕೆ ಅನುಕೂಲವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಗಾ- ಕಾವೇರಿ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು. ಆಗ ರಾಜ್ಯದ ಒಣ ಪ್ರದೇಶ ಸಮೃದ್ಧತೆಯನ್ನು ಕಾಣುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಚಿಂತನೆ ಮಾಡಿ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.ಖ್ಯಾತ ಸಾಹಿತಿ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕ ಡಾ.ಕೆ.ಪಿ.ಪುತ್ತೂರಾಯ ಮಾತನಾಡಿ, ನಾಡಿನ ಪ್ರತಿಯೊಬ್ಬರೂ ಭಾಷೆ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ಸ್ವಾಭಿಮಾನದ ಹೃದಯದ ಭಾಷೆಯನ್ನಾಗಿಸಿಕೊಳ್ಳಬೇಕು. ವ್ಯವಹಾರಕ್ಕಾಗಿ ಎಷ್ಟೇ ಭಾಷೆ ಕಲಿಯರಿ, ಆದರೆ, ಮಾತೃಭಾಷೆ ಕನ್ನಡವನ್ನು ಮರೆಯಬಾರದು. ಪ್ರತಿ ವ್ಯವಹಾರವನ್ನು ಕನ್ನಡದಲ್ಲಿ ಮಾಡಬೇಕು. ಅನ್ಯರಿಗೆ ಕನ್ನಡ ಭಾಷೆ ಕಲಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಬಿ.ರೇಣುಕಾ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಸ್.ವಿಶಾಲ್ ರಘು, ಮಾಜಿ ಅಧ್ಯಕ್ಷ ಶಿವರಾಮು ಎಚ್.ಪಿ., ಮಾಜಿ ಉಪಾಧ್ಯಕ್ಷ ರಾಜು ಮಾತನಾಡಿದರು.ಚನ್ನಪಟ್ಟಣ ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ವೆಂಕಟೇಶಪ್ಪ,ವಿ., ಸವಿತ ಪಿ.ಆರ್., ಯೋಗೇಶ್.ಕೆ., ಉಷಾರಾಣಿ ಟಿ.ಎಸ್., ಎಪಿಪಿ ಕೆ.ಆರ್.ನಾಗಚಂದ್ರ, ಶಾರದ ಅವರು ಉಪಸ್ಥಿತರಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಎಸ್.ಬಿ.ಧನಂಜಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಟಿ.ದೇವರಾಜು ಸ್ವಾಗತಿಸಿದರು. ವಕೀಲ ಆರ್. ಧರ್ಮೇಂದ್ರಕುಮಾರ್ ನಿರೂಪಣೆ ಮಾಡಿದರು. ಶ್ರೀಮತಿ ಸೌಮ್ಯ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯಮೂರ್ತಿಗಳನ್ನು ಹಾಗೂ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.