ಆಸ್ಪತ್ರೆ, ಶಾಲೆ ಆವರಣದಲ್ಲಿ ಜಂಕ್‌ ಫುಡ್‌ ನಿಷೇಧ

KannadaprabhaNewsNetwork |  
Published : Jul 19, 2026, 03:15 AM IST
UT Khader

ಸಾರಾಂಶ

ರಾಜ್ಯದ ಎಲ್ಲಾ ಆಸ್ಪತ್ರೆ ಹಾಗೂ ಶಾಲೆಗಳ ಆವರಣದಲ್ಲಿರುವ ಕ್ಯಾಂಟೀನ್‌ಗಳಲ್ಲಿ ಜಂಕ್‌ ಫುಡ್‌ ನಿಷೇಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

 ಮಂಗಳೂರು :  ರಾಜ್ಯದ ಎಲ್ಲಾ ಆಸ್ಪತ್ರೆ ಹಾಗೂ ಶಾಲೆಗಳ ಆವರಣದಲ್ಲಿರುವ ಕ್ಯಾಂಟೀನ್‌ಗಳಲ್ಲಿ ಜಂಕ್‌ ಫುಡ್‌ ನಿಷೇಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳೂರಿನ ವೆನ್ಲಾಕ್‌ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಕುಂದುಕೊರತೆ ಹಾಗೂ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲಾ ಆಸ್ಪತ್ರೆಗಳ ಹಾಗೂ ಶಾಲೆಗಳ ಕ್ಯಾಂಟೀನ್‌ಗಳಲ್ಲಿ ಜಂಕ್‌ ಫುಡ್‌ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಜನ ವಿಪರೀತವಾಗಿ ಅವಲಂಬನೆಯಾಗಿರುವುದು ಕೂಡ ಸಾಕಷ್ಟು ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಇದರಿಂದಾಗಿ ಕ್ಯಾನ್ಸರ್, ಮೂತ್ರಪಿಂಡ ಮೊದಲಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚುತ್ತಿವೆ. ಇದನ್ನು ಶಾಲೆ ಅಥವಾ ಆಸ್ಪತ್ರೆಯ ಹಂತದಲ್ಲೇ ನಿಯಂತ್ರಿಸಿದರೆ, ದೇಹದ ಆರೋಗ್ಯವನ್ನು ಕನಿಷ್ಠ ಮಟ್ಟದಲ್ಲಾದರೂ ಕಾಪಾಡಲು ಸಾಧ್ಯವಿದೆ. ಅದಕ್ಕಾಗಿ ಆಸ್ಪತ್ರೆ ಮಾತ್ರವಲ್ಲ, ಒಂದರಿಂದ 10ನೇ ತರಗತಿವರೆಗೆ ಇರುವ ಶಾಲೆಗಳ ಸುತ್ತಮುತ್ತ ಕೂಡ ಜಂಕ್ ಫುಡ್ ಮಾರಾಟಕ್ಕೆ ಅವಕಾಶ ನೀಡದಂತೆ ನಿಯಮ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಆರೋಗ್ಯಕರ ಆಹಾರಗಳನ್ನು ಮಾತ್ರ ಕನಿಷ್ಠ ದರದಲ್ಲಿ ಮಾರಾಟ

ರಾಜ್ಯದ ಎಲ್ಲಾ ಆಸ್ಪತ್ರೆ ಹಾಗೂ ಶಾಲೆಗಳ ಆವರಣದಲ್ಲಿರುವ ಕ್ಯಾಂಟೀನ್‌ಗಳಲ್ಲಿ ಆರೋಗ್ಯಕರ ಆಹಾರಗಳನ್ನು ಮಾತ್ರ ಕನಿಷ್ಠ ದರದಲ್ಲಿ ಮಾರಾಟ ಮಾಡಬೇಕು. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಜಂಕ್ ಫುಡ್‌ಗಳನ್ನು ಮಾರಾಟ ಮಾಡುವಂತಿಲ್ಲ ಎಂಬ ನಿಯಮ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಪೂರಕವಾಗಿ ಆಹಾರ ಮತ್ತು ಸುರಕ್ಷತಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಮಾಲ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಮಾರಾಟ ಮಾಡುವ ಆಹಾರ ವಸ್ತುಗಳ ಗುಣಮಟ್ಟವನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ, ಗುಣಮಟ್ಟ ರಹಿತ ಆಹಾರ ವಸ್ತುಗಳ ಮಾರಾಟವನ್ನು ನಿರ್ಬಂಧಿಸಲಾಗುವುದು. ಮಾತ್ರವಲ್ಲ, ಅಂತವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ ಹಾಲಿ ಇರುವ ಆಹಾರ ಗುಣಮಟ್ಟ ತಪಾಸಣಾ ಲ್ಯಾಬ್‌ನ್ನು ಪಿಪಿಪಿ ಮಾದರಿಯಲ್ಲಿ ಅತ್ಯುತ್ಕೃಷ್ಟ ಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಗಿದೆ. ಅಲ್ಲಿ ಆಹಾರ ವಸ್ತುಗಳ ತಪಾಸಣೆ ನಡೆಸಿ ನೀಡುವ ವರದಿಯನ್ನು ಸುಪ್ರೀಂಕೋರ್ಟ್‌ ಕೂಡ ಸಮ್ಮತಿಸುವಂತೆ ಇರಬೇಕು ಎಂದರು. ವೈದ್ಯರ ವರ್ಗಾ ಕೌನ್ಸೆಲಿಂಗ್‌ ನಿಯಮಕ್ಕೆ ತಿದ್ದುಪಡಿ:

ಸರ್ಕಾರಿ ಆಸ್ಪತ್ರೆಗಳ ವೈದ್ಯರ ವರ್ಗಾವಣೆಗೆ ಸಂಬಂಧಿಸಿದ ಕೌನ್ಸೆಲಿಂಗ್‌ ನಿಯಮಕ್ಕೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಈ ಬಗ್ಗೆ ಪರಾಮರ್ಶೆ ನಡೆಸುವಂತೆ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಮುಂದಿನ ವರ್ಗಾವಣೆ ವೇಳೆಗೆ ಕೌನ್ಸೆಲಿಂಗ್‌ ನಿಯಮಕ್ಕೆ ತಿದ್ದುಪಡಿ ತರಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಚಿಕಿತ್ಸೆ ಉಚಿತವಾದರೂಡಿಶ್ಚಾರ್ಜ್‌ ವೇಳೆ ಬಿಲ್‌!:

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತವಾಗಿಯೇ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಚಿಕಿತ್ಸೆಗೆ ತಗಲುವ ವೆಚ್ಚ ಎಷ್ಟು? ಅದಕ್ಕಾಗಿ ಸರ್ಕಾರ ಎಷ್ಟು ಶ್ರಮ ವಹಿಸಿದೆ? ಸರ್ಕಾರ ಓರ್ವ ರೋಗಿಗೆ ಎಷ್ಟು ಮೊತ್ತದ ಖರ್ಚು ಮಾಡುತ್ತದೆ? ಎಂಬುದು ದಾಖಲಾಗುವ ಎಲ್ಲ ರೋಗಿಗಳಿಗೂ ಗೊತ್ತಿರಬೇಕು. ಅದಕ್ಕಾಗಿ ಪ್ರತಿಯೊಬ್ಬ ರೋಗಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೊರಗೆ ಹೋಗುವಾಗ ಅವರ ಚಿಕಿತ್ಸೆಗೆ ಒಟ್ಟು ಎಷ್ಟು ವೆಚ್ಚ ತಗುಲಿದೆ ಎಂಬ ಬಗ್ಗೆ ಸಮಗ್ರ ಬಿಲ್‌ ನೀಡಲಾಗುತ್ತದೆ. ಆದರೆ, ಮೊತ್ತದ ಹಣ ಪಡೆಯುವುದಿಲ್ಲ, ಅದು ಮೊತ್ತ ಪಾವತಿ ರಹಿತ ಬಿಲ್‌ ಆಗಿರುತ್ತದೆ. ಈ ಮಾದರಿಯನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದಲೇ ಪ್ರಾರಂಭಿಸಲಾಗುವುದು. ರಾಜ್ಯದ ಎಲ್ಲ ಕಡೆಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗೆ ಬಿಲ್ಡರ್‌ಗಳು ಎಲ್ಲಾ ದಾಖಲೆ ನೀಡಬೇಕು
ಸಂಪುಟಕ್ಕೆ ಈಗ ಕೋಟಾ ಸಂಕಟ ! - ರಾಜ್ಯದಿಂದ 3, ವರಿಷ್ಠರಿಂದ 2 ಪಟ್ಟಿ