ಕಾಯಿಲೆಗಳಿಗೆ ಆಹ್ವಾನ ನೀಡುವ ಜಂಕ್‌ ಫುಡ್: ಕೋಟ ಡಾ. ಮಾಧವ ಪೈ

KannadaprabhaNewsNetwork | Published : Apr 5, 2025 12:47 AM

ಸಾರಾಂಶ

ಸಾಸ್ತಾನದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾಂಡೇಶ್ವರ ಬಿಲ್ಲವ ಯುವ ವೇದಿಕೆ ಮತ್ತು ಕೋಟ ಪಂಚವರ್ಣ ಮಹಿಳಾ ಮಂಡಲ ಜಂಟಿ ಆಶ್ರಯದಲ್ಲಿ ‘ಅರಿವು ನಿಮಗಿರಲಿ’ ಮಾಲಿಕೆಯ ೧೩ನೇ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಕೋಟ

ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ, ವೈದ್ಯರ ಸಲಹೆ ಕಡ್ಡಾಯವಾಗಿ ಪಡೆಯಿರಿ ಎಂದು ಕೋಟದ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಕೋಟ ಮಾಧವ ಪೈ ಹೇಳಿದರು

ಭಾನುವಾರ ಸಾಸ್ತಾನದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾಂಡೇಶ್ವರ ಬಿಲ್ಲವ ಯುವ ವೇದಿಕೆ ಮತ್ತು ಕೋಟ ಪಂಚವರ್ಣ ಮಹಿಳಾ ಮಂಡಲ ಜಂಟಿ ಆಶ್ರಯದಲ್ಲಿ ‘ಅರಿವು ನಿಮಗಿರಲಿ’ ಮಾಲಿಕೆಯ ೧೩ನೇ ಕಾರ್ಯಕ್ರಮದಲ್ಲಿ ಕಲ್ಪತರು ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರಿಗೆ ‘ಪ್ರಸ್ತುತ ಕಾಲಘಟ್ಟದಲ್ಲಿ ಆರೋಗ್ಯ’ ಎಂಬ ವಿಷಯದಲ್ಲಿ ಮಾತನಾಡಿದರು.

ನಮ್ಮ ಹಿರಿಯರ ಹೇಳಿಕೊಟ್ಟ ಆಹಾರ ಕ್ರಮಗಳಿಂದ ನಾವುಗಳು ಕ್ಷೇಮವಾಗಿದ್ದೆವು. ಆದರೆ, ಆಧುನಿಕ ಕಾಲಘಟ್ಟದಲ್ಲಿ ನಾವಿದ್ದೇವೆ, ಆದರೆ ನಮ್ಮ ಆಹಾರ ಪದ್ಧತಿ ನಮ್ಮಿಂದಲೇ ಬದಲಾಗಿದೆ, ಇದು ಹಲವು ರೀತಿಯ ಕಾಯಿಲೆಗಳ ಆಹ್ವಾನಕ್ಕೆ ಕಾರಣವಾಗಿದೆ. ಜಂಕ್ ಫುಡ್ ಹಾವಳಿಯಿಂದ ಮನುಕುಲವೇ ಸಮಸ್ಯೆ ಎದುರಿಸುತ್ತಿದೆ. ಸ್ತ್ರೀ ರೋಗ, ಸಂತಾನ ಸಮಸ್ಯೆ, ಸ್ತನ ಹಾಗೂ ಗರ್ಭಕೋಶಗಳ ಕ್ಯಾನ್ಸರ್ ಅತಿಯಾಗುತ್ತಿದೆ. ಇದಕ್ಕೆಲ್ಲ ನಮ್ಮ ಆಹಾರ ಕ್ರಮಗಳ ಬದಲಾವಣೆಯೊಂದೇ ಪರಿಹಾರ, ಜೊತೆಗೆ ಆಗಾಗ್ಗೆ ವೈದ್ಯರಿಂದ ಪರಿಹಾರ ಕಂಡುಕೊಳ್ಳಿ ಎಂದು ಕರೆ ಕೊಟ್ಟರು.

ಸಾಸ್ತಾನ ಕೆನರಾ ಬ್ಯಾಂಕ್ ಅಧಿಕಾರಿ ದೀಪಿಕಾ ಕೃಷ್ಣ, ಪ್ರಸ್ತುತ ಸರ್ಕಾರದಿಂದ ಹಾಗೂ ಬ್ಯಾಂಕ್‌ಗಳ ಯೋಜನೆಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಬಿಲ್ಲವ ಯುವ ವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘದ ಗೌರವ ಸಲಹೆಗಾರ ಚೆನ್ನಯ್ಯ ಪೂಜಾರಿ, ಬಿಲ್ಲವ ಯುವ ವೇದಿಕೆ ಮಾಜಿ ಅಧ್ಯಕ್ಷ ರವಿ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.

ಕಲ್ಪತರು ಸ್ವಸಹಾಯ ಸಂಘದ ಸೀಮಾ ವಿಜಯ ಪೂಜಾರಿ ಸ್ವಾಗತಿಸಿದರು. ಉಷಾ ಗಣೇಶ್ ಪೂಜಾರಿ ವಂದಿಸಿದರು. ಬಿಲ್ಲವ ಯುವ ವೇದಿಕೆ ಮುಖಂಡ ಸುರೇಶ್ ಪೂಜಾರಿ ನಿರೂಪಿಸಿದರು.

Share this article