ಕನ್ನಡಪ್ರಭ ವಾರ್ತೆ ಮುಧೋಳ
ಕೃಷ್ಣಾ ಮೇಲ್ದಂಡೆ (ಯುಕೆಪಿ) 3ನೇ ಹಂತದ ಯೋಜನೆಯಿಂದಾಗಿ ಮುಧೋಳ ತಾಲೂಕಿನಲ್ಲಿ ಅಂದಾಜು 30 ಸಾವಿರ ಎಕರೆ ಭೂಮಿ ಮುಳಗಡೆಯಾಗಲಿದ್ದು, ಮೂರು ವರ್ಷದ ಅವಧಿಯಲ್ಲಿ ರೈತರ ಭೂಮಿಗೆ ಪರಿಹಾರ (ಹಣ) ನೀಡಲಾಗುವುದು. ಮುಳುಗಡೆ ಸಂತ್ರಸ್ತ ಹೋರಾಟಗಾರರಿಗೆ ನ್ಯಾಯ ಸಿಕ್ಕಿದೆ. ಈ ಯೋಜನೆಯಿಂದ 5 ಲಕ್ಷ ಹೆಕ್ಟರ್ ಭೂಮಿ ನೀರಾವರಿ ಸೌಲಭ್ಯಕ್ಕೆ ಒಳಪಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ಯುಕೆಪಿ-3 ಯೋಜನೆ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿದ ಹಿನ್ನೆಲೆ ಬುಧವಾರ ನಗರದ ಗಡದನ್ನವರ ಸರ್ಕಲ್ ದಿಂದ ಸಚಿವರನ್ನು ಚಕ್ಕಡಿಯಲ್ಲಿ ಕೂಡ್ರಿಸಿ ಮೆರವಣಿಗೆ ನಡೆಸಿದ ವೇಳೆ ಬಸವೇಶ್ವರ ಸರ್ಕಲ್ ನಲ್ಲಿ ಸೇರಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿ, 30 ವರ್ಷಗಳಿಂದ ಮುಳುಗಡೆ ಸಂತ್ರಸ್ತರು ವೈಜ್ಞಾನಿಕ ಬೆಲೆ ಬೇಕೆಂದು ಹೋರಾಟ ಮಾಡುತ್ತಾ ಬಂದಿದ್ದು, ಇವರಿಗೆ ಕಾಂಗ್ರೆಸ್ ಸರ್ಕಾರ ನ್ಯಾಯ ಒದಗಿಸಿದೆ ಎಂದರು.ಎಸ್.ಎಂ.ಕೃಷ್ಣ ಅವರು ಕೂಡ ರೈತರಿಗೆ ₹638ಕೋಟಿ ಪ್ಯಾಕೇಜ್ ನೀಡಿದ್ದನ್ನು ನೆನಪಿಸಿಕೊಂಡ ಸಚಿವರು, ಸಚಿವರಾದ ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಮಾಜಿ ಸಚಿವ ಎಸ್.ಆರ್. ಪಾಟೀಲ, ಶಾಸಕರಾದ ಜೆ.ಟಿ. ಪಾಟೀಲ, ಎಚ್.ವೈ. ಮೇಟಿ, ವಿಜಯಾನಂದ ಕಾಶಪ್ಪನವರ ಸೇರಿದಂತೆ ಇತರೆ ಶಾಸಕರ ನಿರಂತರ ಪ್ರಯತ್ನದಿಂದ ಭೂಮಿಗೆ ಇಷ್ಟೊಂದು ಬೆಲೆ ಪಡೆಯಲು ಸಾಧ್ಯವಾಯಿತು. ಅದಕ್ಕಾಗಿ ನಾನು ಅವರಿಗೆ ರೈತರ ಪರವಾಗಿ ಅಭಿನಂದಿಸುತ್ತೇನೆಂದು ಎಂದ ಅವರು, ಈ ಬೃಹತ್ ಯೋಜನೆಗೆ ವಿರೋಧ ಪಕ್ಷದವರು ಬೆಂಬಲ ನೀಡಬೇಕೆಂದು ಸಚಿವ ತಿಮ್ಮಾಪೂರ ಮನವಿ ಮಾಡಿದರು.
ಬೀಳಗಿಯ ಶಿವನಗೌಡ ಟಿ. ಪಾಟೀಲ ಮಾತನಾಡಿದರು. ಸಚಿವ ತಿಮ್ಮಾಪೂರ ಅವರನ್ನು ರೈತರು ಹೂಮಾಲೆ ಹಾಕಿ, ಶಾಲು ಹೊದಿಸಿ, ಸನ್ಮಾನಿಸಿ, ಪಟಾಕಿ, ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಕಾಂಗ್ರೆಸ್ ಮುಖಂಡರಾದ ಗೋವಿಂದಪ್ಪ ಗುಜ್ಜನವರ, ಉದಯಕುಮಾರ ಸಾರವಾಡ, ಗಿರೀಶಗೌಡ ಪಾಟೀಲ, ವೆಂಕಣ್ಣ ಗಿಡಪ್ಪನವರ, ಎಸ್.ಪಿ.ದಾನಪ್ಪಗೋಳ,ಅಶೋಕ ಕಿವಡಿ, ಸುದುಗೌಡ ಪಾಟೀಲ, ಮಹಾಂತೇಶ ಮಾಚಕನೂರ,ಸಂಜಯ ತಳೇವಾಡ, ಸುಧಾಕರ ಸಾರವಾಡ, ರಾಜು ಬಾಗವಾನ, ಗಿರೀಶ ಲಕ್ಷಾಣಿ, ಮಹಾದೇವ ಹೊಸಟ್ಟಿ, ರಾಘು ಮೋಕಾಸಿ, ನಾರಾಯಣ ಹವಾಲ್ಗಾರ, ಡಾ.ತಿಮ್ಮಣ್ಣ ಅರಳಿಕಟ್ಟಿ, ದಾನೇಶ ತಡಸಲೂರ, ಮಾರುತಿ ಮಾನೆ, ಕೃಷ್ಣಾ ನಲವಡೆ, ಮಹೇಶ ಬಿಳ್ಳೂರ, ಹನಮಂತ ತೇಲಿ, ಸಂತೋಷ ಪಾಲೋಜಿ ಸೇರಿದಂತೆ ಇತರರು ಇದ್ದರು.ಕಾಂಗ್ರೆಸ್ ಸರ್ಕಾರ ರೈತರ ಕಾಳಜಿ ಮಾಡುವ ಸರ್ಕಾರವಾಗಿದೆ. ರೈತರ ಯಾವುದೇ ಬೇಕು ಬೇಡಿಕೆಗಳಿಗೆ ಸ್ಪಂದಿಸುತ್ತ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಜಿಲ್ಲೆಗೆ ಅಹ್ವಾನಿಸಿ, ಜಿಲ್ಲೆಯ ಸಮಸ್ತ ರೈತರ ಪರವಾಗಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗುವುದು.
ಆರ್.ಬಿ. ತಿಮ್ಮಾಪೂರ ಜಿಲ್ಲಾ ಉಸ್ತುವಾರಿ ಸಚಿವರು