ಮಣ್ಣಿನ ಫಲವತ್ತತೆ ಹೆಚ್ಚಿಸಲು ಸೆಣಬಿನ ಬೆಳೆ ಆಸರೆ

KannadaprabhaNewsNetwork | Published : May 14, 2024 1:00 AM

ಸಾರಾಂಶ

ವಿಜಯನಗರ ಜಿಲ್ಲೆಯ ಕಮಲಾಪುರ ಹಾಗೂ ಹೊಸಪೇಟೆ ಹೋಬಳಿಯ ರೈತರು ಈ ಉಪಾಯ ಕಂಡುಕೊಂಡಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ತುಂಗಭದ್ರಾ ಜಲಾಶಯದ ನೀರನ್ನು ನೆಚ್ಚಿಕೊಂಡು ಭತ್ತ, ಕಬ್ಬು ಬೆಳೆಯುವ ರೈತರು ಈಗ ಮಣ್ಣಿನ ಫಲವತ್ತತೆ ಹೆಚ್ಚಿಸುವುದಕ್ಕಾಗಿ ಸೆಣಬಿನ ಬೆಳೆ ಬೆಳೆದಿದ್ದಾರೆ. ಈ ಸೆಣಬನ್ನು ಹಸಿರೆಲೆ ಗೊಬ್ಬರವನ್ನಾಗಿಸಿ ಮಣ್ಣು ಸವಕಳಿ ತಡೆಯುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಕಮಲಾಪುರ ಹಾಗೂ ಹೊಸಪೇಟೆ ಹೋಬಳಿಯ ರೈತರು ಈ ಉಪಾಯ ಕಂಡುಕೊಂಡಿದ್ದು, ಪದೇಪದೇ ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಇದರಿಂದ ಮಣ್ಣು ಕೂಡ ಸವಕಳಿಯಾಗುತ್ತಿದೆ. ಹಾಗಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಈಗಾಗಲೇ ಎಕರೆ ಗಟ್ಟಲೇ ಸೆಣಬು ಬೆಳೆದಿದ್ದಾರೆ. ಈ ಬೆಳೆಯನ್ನೇ ಗೊಬ್ಬರವನ್ನಾಗಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತಿದ್ದಾರೆ.

ಕಮಲಾಪುರ ಹೋಬಳಿ ಹಾಗೂ ಹೊಸಪೇಟೆ ಹೋಬಳಿಯ ರೈತರು ಈಗಾಗಲೇ ಸೆಣಬು ಬೆಳೆದಿದ್ದಾರೆ. ಈ ಬೆಳೆ ಒಂದೂವರೆ ತಿಂಗಳಿನಿಂದ ಎರಡು ತಿಂಗಳಾಗುತ್ತಲೇ ಕಟಾವು ಮಾಡಿ, ಭತ್ತ, ಕಬ್ಬು ಬೆಳೆಯುವ ಜಮೀನಿನಲ್ಲಿ ಹಾಕಲಾಗುತ್ತದೆ. ಮಣ್ಣು ತೇವಾಂಶ ಇರುವಾಗಲೇ ಸೆಣಬು ಕಟಾವು ಮಾಡಿ ಹಾಕಲಾಗುತ್ತದೆ. ಒಂದು ವೇಳೆ ಮಣ್ಣು ತೇವಾಂಶ ಇಲ್ಲದಿದ್ದರೆ, ನೀರು ಹಾಯಿಸಲಾಗುತ್ತದೆ. ಈ ಸೆಣಬು ಹಸಿರೆಲೆ ಗೊಬ್ಬರವಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸಲಿದೆ. ಇದರಿಂದ ಮಣ್ಣಿನ ಫಲಿತಾಂಶವನ್ನೂ ಹೆಚ್ಚಿಸಲಿದೆ.

ತುಂಗಭದ್ರಾ ಜಲಾಶಯದ ನೀರನ್ನು ಬಳಕೆ ಮಾಡಿ ನೀರಾವರಿ ಮಾಡುವ ಪ್ರದೇಶದಲ್ಲಿ ಮಣ್ಣು ಸವಕಳಿಯಾಗುತ್ತಿದೆ ಎಂದು ಹಲವು ಬಾರಿ ಕೃಷಿ ವಿಜ್ಞಾನಿಗಳೇ ಹೇಳಿದ್ದಾರೆ. ಹಾಗಾಗಿ ಈ ಮಣ್ಣಿನ ಸವಕಳಿ ತಪ್ಪಿಸಿ, ಮಣ್ಣಿನ ಫಲತತ್ತೆಗಾಗಿ ಸೆಣಬು ಬೆಳೆದು ರೈತರು ಹಸಿರೆಲೆ ಗೊಬ್ಬರವನ್ನಾಗಿಸುತ್ತಿದ್ದಾರೆ. ಈ ಭಾಗದಲ್ಲಿ ಸೆಣಬು ಬೆಳೆದರೂ ಅದನ್ನು ಬೆಳೆಯನ್ನಾಗಿಸಿ ಉತ್ಪನ್ನ ಮಾಡದೇ ರೈತರು ಗೊಬ್ಬರವನ್ನಾಗಿಸುತ್ತಿದ್ದಾರೆ. ಹಾಗಾಗಿ ಈ ಭಾಗದಲ್ಲಿ ಕೃಷಿ ಚಟುವಟಿಕೆಗೂ ಈ ಬೆಳೆ ಪೂರಕವಾಗಿದೆ ಎಂದು ಹೇಳುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಭತ್ತ, ಕಬ್ಬು ಬೆಳೆಗೆ ಆಸರೆ:

ತುಂಗಭದ್ರಾ ಜಲಾಶಯದ ರಾಯ, ಬಸವ, ಬೆಲ್ಲ, ತುರ್ತಾ, ಕಾಳಗಟ್ಟ ಕಾಲುವೆಗಳನ್ನು ನೆಚ್ಚಿಕೊಂಡು ಹೊಸಪೇಟೆ ಕಸಬಾ ಹೋಬಳಿ ಹಾಗೂ ಕಮಲಾಪುರ ಹೋಬಳಿ ಭಾಗದಲ್ಲಿ 4500 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಹಾಗೂ 2500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ತುಂಗಭದ್ರಾ ಜಲಾಶಯದ ನೀರಿನಲ್ಲಿ ಅದರಲ್ಲೂ ವಿಜಯನಗರ ಕಾಲದ ಕಾಲುವೆಗಳಿಂದ ವರ್ಷದಲ್ಲಿ ಎರಡು ಬೆಳೆ ಬೆಳೆಯಲಾಗುತ್ತದೆ. ಹಾಗಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ರೈತರು ಈ ಮಾರ್ಗ ಕಂಡುಕೊಂಡಿದ್ದಾರೆ. ಅಲ್ಲದೆ, ಕೃಷಿ ಜಮೀನುಗಳಿಗೆ ಕೊಟ್ಟಿಗೆ ಗೊಬ್ಬರ ಕೂಡ ನೀಡುತ್ತಿದ್ದಾರೆ.

ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಕಡಿಮೆಯಾಗಿರುವುದರಿಂದ; ಆನ್‌ ಆ್ಯಂಡ್‌ ಆಫ್‌ ಪದ್ಧತಿಯಲ್ಲಿ ನೀರು ಬಿಡಲಾಗುತ್ತಿದೆ. ಹಾಗಾಗಿ ರೈತರು ಈಗ ಸೆಣಬು ಬೆಳೆದು ಹಸಿರೆಲೆ ಗೊಬ್ಬರವನ್ನಾಗಿಸಿಕೊಂಡು ಮಣ್ಣಿನ ಫಲವತ್ತತೆ ಹೆಚ್ಚಿಸುತ್ತಿದ್ದಾರೆ.

ತುಂಗಭದ್ರಾ ಜಲಾಶಯದ ನೀರಿನಿಂದ ಈ ಭಾಗದಲ್ಲಿ ಕೃಷಿ ಮಾಡಲಾಗುತ್ತಿದೆ. ಈ ಭಾಗದ ರೈತರು ಸೆಣಬು ಬೆಳೆ ಬೆಳೆದು, ಹಸಿರೆಲೆ ಗೊಬ್ಬರವನ್ನಾಗಿಸುತ್ತಿದ್ದಾರೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಈ ಮಾರ್ಗ ಕಂಡುಕೊಂಡಿದ್ದಾರೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಲಿದೆ ಎನ್ನುತ್ತಾರೆ ಹೊಸಪೇಟೆ ಸಹಾಯಕ ಕೃಷಿ ನಿರ್ದೇಶಕ ವಾಮದೇವ ಕೊಳ್ಳಿ.

ಭತ್ತ ಹಾಗೂ ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತವೆ. ನಾವು ಮೇಲಿಂದ ಮೇಲೆ ಈ ಬೆಳೆಗಳನ್ನೇ ಬೆಳೆಯುವುದರಿಂದ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತದೆ. ಹಾಗಾಗಿ ನಾವು ಈಗ ಸೆಣಬು ಬೆಳೆದು ಗೊಬ್ಬರವನ್ನಾಗಿಸಿಕೊಳ್ಳುತ್ತಿದ್ದೇವೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಲಿದೆ. ನಮ್ಮಂತಹ ರೈತರಿಗೂ ಅನುಕೂಲವಾಗಲಿದೆ ಎನ್ನುತ್ತಾರೆ ಹೊಸಪೇಟೆ ರೈತ ಗಾಳೆಪ್ಪ.

Share this article