72 ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜಿಗೆ ಕೆ.ಆರ್‌. ನಗರ ಪುರಸಭೆಯಲ್ಲಿ ನಡೆದ ತುರ್ತು ಸಭೆಯಲ್ಲಿ ನಿರ್ಧಾರ

KannadaprabhaNewsNetwork | Updated : Feb 13 2024, 04:16 PM IST

ಸಾರಾಂಶ

ಕಳೆದ ಮೂರು ತಿಂಗಳ ಹಿಂದೆ ಅವಧಿ ಮುಗಿದಿದ್ದರೂ ಹರಾಜಾಗದೆ ನೆನಗುದಿಗೆ ಬಿದ್ದಿದ್ದ ಪಟ್ಟಣದ ಪುರಸಭೆಗೆ ಸೇರಿದ 72 ವಾಣಿಜ್ಯ ಮಳಿಗೆಗಳನ್ನು ಬಹಿರಂಗವಾಗಿ ಹರಾಜು ಮಾಡಲು ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಕಳೆದ ಮೂರು ತಿಂಗಳ ಹಿಂದೆ ಅವಧಿ ಮುಗಿದಿದ್ದರೂ ಹರಾಜಾಗದೆ ನೆನಗುದಿಗೆ ಬಿದ್ದಿದ್ದ ಪಟ್ಟಣದ ಪುರಸಭೆಗೆ ಸೇರಿದ 72 ವಾಣಿಜ್ಯ ಮಳಿಗೆಗಳನ್ನು ಬಹಿರಂಗವಾಗಿ ಹರಾಜು ಮಾಡಲು ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು. 

ವಾಣಿಜ್ಯ ಮಳಿಗೆಗಳ ಹರಾಜು ಸಂಬಂಧ ಸೋಮವಾರ ಬೆಳಗ್ಗೆ 10ಕ್ಕೆ ಪುರಸಭೆಯ ಆಡಳಿತಾಧಿಕಾರಿ ಆದ ಹುಣಸೂರು ಉಪ ವಿಭಾಗಾಧಿಕಾರಿ ಮಹಮದ್ ಹಾರಿಸ್ ಸುಮೈರ್ ಅವರ ಅಧ್ಯಕ್ಷತೆಯಲ್ಲಿ ಕರೆದ ಸಭೆಗೆ ಸಮಯಕ್ಕೆ ಸರಿಯಾಗಿ ಸದಸ್ಯರು ಬಾರದ್ದರಿಂದ ಚುನಾವಣಾ ತರಬೇತಿ ತುರ್ತು ಸಭೆಗೆ ಆಡಳಿತಾಧಿಕಾರಿಗಳು ಬೆಂಗಳೂರಿಗೆ ತೆರಳಿದರು.

ಆನಂತರ ಮಧ್ಯಾಹ್ನ 1ಕ್ಕೆ ನಡೆದ ಸದಸ್ಯರು ಮತ್ತು ಆಡಳಿತಾಧಿಕಾರಿಗಳ ವರ್ಚುವಲ್ ಸಭೆಯಲ್ಲಿ ಮಳಿಗೆ ಹರಾಜಿನ ಸಂಬಂಧ ಚರ್ಚೆ ನಡೆಸಿದ ಸದಸ್ಯರು ಮತ್ತು ಆಡಳಿತಾಧಿಕಾರಿಗಳು ಸರ್ಕಾರದ ನಿಯಮಾನುಸಾರ ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡಲು ಒಮ್ಮತದ ನಿರ್ಧಾರಕ್ಕೆ ಬಂದಾಗ ಈ ವಿಚಾರದಲ್ಲಿ ತ್ವರಿತ ಗಮನ ಹರಿಸಬೇಕೆಂದು ಮುಖ್ಯಾಧಿಕಾರಿ ಡಾ. ಜಯಣ್ಣ ಅವರಿಗೆ ಸೂಚನೆ ನೀಡಲಾಯಿತು. 

ಸದಸ್ಯರಾದ ನಟರಾಜು ಮತ್ತು ತೋಂಟದಾರ್ಯ ಮಾತನಾಡಿ, ಮಳಿಗೆ ಹರಾಜು ಮಾಡುವ ಮುನ್ನ ಅವುಗಳಿಗೆ ಬೀಗ ಹಾಕಿ ಆನಂತರ ಮುಂದಿನ ಕ್ರಮ ಕೈಗೊಳ್ಳಬೇಕೆಂದಾಗ ಈ ವಿಚಾರದಲ್ಲಿ ಸರ್ಕಾರದ ನಿಯಮದ ಪ್ರಕಾರವೇ ನಡೆದುಕೊಳ್ಳುವುದಾಗಿ ಮಹಮದ್ ಹಾರಿಸ್ ಸುಮೈರ್ ತಿಳಿಸಿದರು.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಾಧಿಕಾರಿ ಡಾ. ಜಯಣ್ಣ ನಾಳೆ ಎಲ್ಲ 72 ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಮಾಹಿತಿ ನೀಡಿದರಲ್ಲದೆ ಫೆ. 13 ರಿಂದ 27ರವರೆಗೆ ಮಳಿಗೆಗಳನ್ನು ಆನ್ ಲೈನ್ ಹರಾಜಿನ ಮೂಲಕ ಪಡೆಯಲು ಬಯಸುವವರು ಮುಕ್ತವಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಹೆಚ್ಚಿನ ಮಾಹಿತಿಗಾಗಿ ಪುರಸಭೆ ಕಂದಾಯ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಪ್ರಕಟಿಸಿದ ಅವರು, ಈ ಸಂಬಂಧ ಪತ್ರಿಕೆಗಳಲ್ಲಿಯೂ ಜಾಹೀರಾತು ನೀಡಿ ವ್ಯಾಪಕ ಪ್ರಚಾರ ಮಾಡಲಾಗುತ್ತದೆ ಎಂದು ನುಡಿದರು.

ಸದಸ್ಯರಾದ ಸಂತೋಷಗೌಡ, ಸೈಯದ್ ಸಿದ್ದಿಕ್, ಅಶ್ವಿನಿ ಪುಟ್ಟರಾಜು, ಶಂಕರಸ್ವಾಮಿ, ವೀಣಾ ವೃಷಬೇಂದ್ರ, ಕೆ.ಎಲ್. ಜಗದೀಶ್, ಶಂಕರ್, ವಹೀದಾಬಾನು, ಸರೋಜ ಮಹದೇವ್, ಶಿವಕುಮಾರ್, ಶಾರದ ನಾಗೇಶ್, ಕಂದಾಯಾಧಿಕಾರಿ ರಮೇಶ್ ಇದ್ದರು.

Share this article