ಅಲೆಮಾರಿಗಳಿಗೆ ಶೈಕ್ಷಣಿಕ ಅವಕಾಶಕ್ಕೆ ಕೆ.ರವೀಂದ್ರಶೆಟ್ಟಿ ಒತ್ತಾಯ

KannadaprabhaNewsNetwork |  
Published : Jul 21, 2024, 01:16 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ರಾಜ್ಯದಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಜೀವನ ಸಾಗಿರುತ್ತಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರು ವಸತಿ, ನಿವೇಶನ, ಮಕ್ಕಳಿಗೆ ಶಿಕ್ಷಣ ಮುಂತಾದ ಎಲ್ಲಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಇರುವ ಶೈಕ್ಷಣಿಕ ವ್ಯವಸ್ಥೆಯನ್ನು ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೂ ಕಲ್ಪಿಸಬೇಕು. ಪ್ರತಿಭಾನ್ವಿತ ಅಲೆಮಾರಿ ವಿದ್ಯಾರ್ಥಿಗಳಿಗೆ ಸರ್ಕಾರವೇ ಶುಲ್ಕ ಭರಿಸಿ ಪ್ರವೇಶಾತಿಗೆ ಅನುವು ಮಾಡಿಕೊಡಬೇಕು ಎಂದು ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮತ್ತು ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಆಗ್ರಹಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಜೀವನ ಸಾಗಿರುತ್ತಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರು ವಸತಿ, ನಿವೇಶನ, ಮಕ್ಕಳಿಗೆ ಶಿಕ್ಷಣ ಮುಂತಾದ ಎಲ್ಲಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ತಾವು ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದಾಗ, ರಾಜ್ಯದ ಪ್ರತಿ ಜಿಲ್ಲೆ, ತಾಲೂಕು, ಕೆಲವು ಗ್ರಾಮಗಳಿಗೆ ಭೇಟಿ ನೀಡಿ, ಈ ಜನಾಂಗದ ಜೀವನ ಸ್ಥಿತಿ ಅತೀ ಸಮೀಪದಿಂದ ನೋಡಿದ್ದೇನೆ. ಈ ಜನಾಂಗದ ಮಕ್ಕಳು ಶೈಕ್ಷಣಿಕ ವ್ಯವಸ್ಥೆಯಲ್ಲಿ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

ಕೆಲವು ಕಡೆ ಸರ್ಕಾರಿ ಜಾಗದಲ್ಲಿ ಸಮುದಾಯದವರು ಕಳೆದ 10ವರ್ಷ ಗಳಿಗಿಂತ ಹೆಚ್ಚು ಕಾಲ ಡೇರೆ, ಗುಡಿಸಲು, ಟೆಂಟ್ ಹಾಕಿ ಜೀವನ ನಡೆಸುತ್ತಿದ್ದಾರೆ. ಆ ಜಾಗ ಅವರ ಹೆಸರಿನಲ್ಲಿಯೇ ಖಾತೆ ಮಾಡಿ ಪಹಣಿ ಪತ್ರ ನೀಡಬೇಕು. ಪ್ರತಿ ಜಿಲ್ಲೆ ತಾಲೂಕಿಗೆ ಸಂಬಂಧಿಸಿದಂತೆ ಅಲೆಮಾರಿ ಸಮುದಾಯ ಭವನ ನಿರ್ಮಿಸಬೇಕು. ಅಲೆಮಾರಿ ಜನರ ಅಂತಿಮ ಸಂಸ್ಕಾರಕ್ಕೆ ಅಲೆಮಾರಿ ರುದ್ರಭೂಮಿ ನಿರ್ಮಿಸಬೇಕು. ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವುದರ ಮೂಲಕ ನೇರಸಾಲ, ಗಂಗಾ ಕಲ್ಯಾಣ, ಭೂಖರೀದಿ ಯೋಜನೆ, ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ಉನ್ನತ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ ಯೋಜನೆ, ಸ್ವ ಉದ್ಯೋಗ, ಉದ್ಯಮಶೀಲತಾ ತರಬೇತಿ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜೋಗಿ, ರಾಜ್ಯದ ಕೆಲವು ತಾಲೂಕಿನ ತಹಸೀಲ್ದಾರರು ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ವಿದ್ಯಾರ್ಥಿಗಳ ಪ್ರವೇಶಾತಿ ಸಂದರ್ಭದಲ್ಲಿ ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯರು ಅಲೆಮಾರಿ ಜನಾಂಗ ಎಂದು ನಮೂದಿಸಿರುವ ಜಾತಿ ಪ್ರಮಾಣ ಪತ್ರವನ್ನೇ ತರಬೇಕೆಂದು ದಾಖಲಾತಿ ನಿರಾಕರಣೆ ಮಾಡುತ್ತಿದ್ದಾರೆ. ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಕೆಲವು ಕಡೆ ಜನಪ್ರತಿನಿಧಿಗಳು ಎಂದುಕೊಳ್ಳುವ ರಾಜಕಾರಣಿಗಳು ತಮಗೆ ಬೇಕಾದ ರೀತಿಯಲ್ಲಿ ಶೇ.75, ಇತರ ತಾಲೂಕಿಗೆ ಶೇ. 25 ಮೀಸಲಾತಿ ನೀಡಬೇಕೆಂದು ಸರ್ಕಾರದಿಂದ ಆದೇಶ ಹೊರಡಿಸಿದ್ದಾರೆ. ಕಡಿಮೆ ವಸತಿ ಶಾಲೆ ಹೊಂದಿರುವ ತಾಲೂಕಿನ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್.ಎಸ್, ಗೌರವಾಧ್ಯಕ್ಷ ರಾಮುಗೋಸಾಯಿ, ಮಹಿಳಾ ಜಿಲ್ಲಾಧ್ಯಕ್ಷ ಜ್ಯೋತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ರವಿಕುಮಾರ್ ಎಸ್, ಕಾರ್ಯದರ್ಶಿ ನಾಗರಾಜ್, ತಾಲೂಕು ಅಧ್ಯಕ್ಷ ಹೇಮಣ್ಣ ಇದ್ದರು.

PREV

Recommended Stories

ಶಾಸಕರ ಭರವಸೆಗೆ ಧರಣಿ ಹಿಂಪಡೆದ ಚಲವಾದಿ ಸಮಾಜ
ರಾಜ್ಯಾದ್ಯಂತ ಏಕರೂಪ ಬೆಲೆ ನಿಗದಿಗೊಳಿಸಲು ಒತ್ತಾಯ