ಕನ್ನಡಪ್ರಭ ವಾರ್ತೆ ಮಂಡ್ಯ
ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಐದನೇ ವರ್ಷದ ಮಲ್ಲಿಗೆ ಕವಿ ಕೆ.ಎಸ್. ನರಸಿಂಹಸ್ವಾಮಿ ಸಾಹಿತ್ಯ ಪ್ರಶಸ್ತಿ ಹಾಗೂ ಕಾವ್ಯ ಗಾಯನ ಪ್ರಶಸ್ತಿ ಪ್ರದಾನ ಸಮಾರಂಭ ಮಾ.೨೩ರಂದು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕಿಕ್ಕೇರಿ ಕೃಷ್ಣಮೂರ್ತಿ ವಹಿಸುವರು. ಶಾಸಕ ಪಿ.ರವಿಕುಮಾರ್ ಉಪಸ್ಥಿತರಿರುವರು. ಪ್ರೊ.ಜಯಪ್ರಕಾಶಗೌಡ, ಡಾ.ನಾ.ದಾಮೋದರ ಶೆಟ್ಟಿರವರಿಗೆ ಸಾಹಿತ್ಯ ಪ್ರಶಸ್ತಿ ಹಾಗೂ ಸಂಗೀತಾ ಕಟ್ಟಿ, ರಮೇಶ್ ಚಂದ್ರರವರಿಗೆ ಕಾವ್ಯಗಾಯನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಪಾಲ್ಗೊಳ್ಳುವರು ಎಂದರು.ಸಮಾರಂಭಕ್ಕೆ ಮುನ್ನ ಮತ್ತು ನಂತರ ಖ್ಯಾತ ಗಾಯಕರಿಂದ ಸುಗಮ ಸಂಗೀತ, ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಶಸ್ತಿಯು ತಲಾ ೨೫ ಸಾವಿರ ರು. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ನುಡಿದರು.
ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ನಿಂದ ನೀಡಲಾಗುತ್ತಿದ್ದ ಪ್ರಶಸ್ತಿಯನ್ನು ಕಾರಣಾಂತರಗಳಿಂದ ಕಳೆದ ನಾಲ್ಕು ವರ್ಷಗಳಿಂದ ನೀಡಲಾಗಿರಲಿಲ್ಲ. ಇದೀಗ ಕೆ.ಎಸ್.ನರಸಿಂಹಸ್ವಾಮಿ ಅವರ ಮನೆಯನ್ನು ಸ್ಮಾರಕವಾಗಿಸಲು ಹಾಗೂ ಕಿಕ್ಕೇರಿ ಕೆರೆಗೆ ಕೆ.ಎಸ್.ನ. ಸರೋವರ ಎಂದು ಹೆಸರಿಡಲು ತೀರ್ಮಾನಿಸಿದ್ದು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಲಾಗಿದೆ. ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಕೆ.ಎಸ್.ನರಸಿಂಹಸ್ವಾಮಿ ಹೆಸರಿನಲ್ಲಿ ನಿರಂತರ ಚಟುವಟಿಕೆ ನಡೆಸಿಕೊಂಡು ಹೋಗಲು ನಿರ್ಧರಿಸುವುದಾಗಿ ಹೇಳಿದರು.ಗೋಷ್ಠಿಯಲ್ಲಿ ಡಾ.ಅಪ್ಪಗೆರೆ ತಿಮ್ಮರಾಜಜು, ಎಂ.ಎನ್.ಸುಬ್ರಹ್ಮಣ್ಯ, ಎ.ಸಿ.ಹಲಗೇಗೌಡ, ಡಾ.ಬಿ.ವಿ.ನಂದೀಶ್ ಇದ್ದರು.