ಎಂ.ಅಫ್ರೋಜ್ ಖಾನ್ ಕನ್ನಡಪ್ರಭ ವಾರ್ತೆ ರಾಮನಗರನಗರಸಭೆ ಅಧ್ಯಕ್ಷರಾಗಿ ಕೆ. ಶೇಷಾದ್ರಿ ಹಾಗೂ ಉಪಾಧ್ಯಕ್ಷರಾಗಿ ಆಯಿಷಾ ಬಾನು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.ಹಲವು ಕಾರಣಗಳಿಂದ ಮುಂದೂಡಿಕೆಯಾಗಿ ಕುತೂಹಲ ಮೂಡಿಸಿದ್ದ ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ನಾಳೆ (ಡಿ. 23) ಚುನಾವಣೆ ನಿಗದಿಯಾಗಿದ್ದು, ಬಹುಮತ ಹೊಂದಿರುವ ಕಾಂಗ್ರೆಸ್‌ನ ಸರ್ವಸದಸ್ಯರ ಒಮ್ಮತದ ನಿರ್ಧಾರದಂತೆ 5ನೇ ವಾರ್ಡಿನ ಸದಸ್ಯ ಕೆ.ಶೇಷಾದ್ರಿ ಅಧ್ಯಕ್ಷರಾಗಿ ಹಾಗೂ 20ನೇ ವಾರ್ಡಿನ ಸದಸ್ಯೆ ಆಯಿಷಾ ಬಾನು ಹೆಸರು ಅಂತಿಮಗೊಂಡಿದೆ.ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಮತ್ತು ಶಾಸಕ ಎಚ್.ಎ. ಇಕ್ಷಾಲ್ ಹುಸೇನ್ ರವರು ನಗರಸಭೆ ಸದಸ್ಯರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಸಭೆಯಲ್ಲಿ ಮಾಜಿ ಶಾಸಕರಾದ ಸಿ.ಎಂ. ಲಿಂಗಪ್ಪ, ಕೆ. ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್ ಸೇರಿದಂತೆ ಪಕ್ಷದ ಪ್ರಮುಖರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಿದರೆ ಸೂಕ್ತ ಎಂಬುದರ ಕುರಿತು ಚರ್ಚೆ ನಡೆಸಿ ಸದಸ್ಯರ ಒಮ್ಮತದ ಅಭಿಪ್ರಾಯಕ್ಕೆ ಬದ್ಧರಾಗಿರಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.ಆ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರ ಪೈಕಿ 20ಕ್ಕೂ ಹೆಚ್ಚು ಸದಸ್ಯರು ಕೆ.ಶೇಷಾದ್ರಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಅವರಿಗೆ ಪಕ್ಷವು ಸೂಕ್ತ ಸ್ಥಾನಮಾನ ಕೊಟ್ಟಿಲ್ಲ. ವಿಧಾನ ಪರಿಷತ್ ಸದಸ್ಯ ಸ್ಥಾನ ಅಥವಾ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ಕಲ್ಪಿಸಬೇಕು. ಆ ಸ್ಥಾನ ಸಿಗುವವರೆಗೂ ಶೇಷಾದ್ರಿ ಅವರನ್ನೇ ನಗರಸಭೆ ಅಧ್ಯಕ್ಷರನ್ನಾಗಿ ಮುಂದುವರೆಸಬೇಕು. ಹಾಗೊಂದು ವೇಳೆ ಶೇಷಾದ್ರಿರವರಿಗೆ ಬೇರೆ ಅವಕಾಶ ಸಿಕ್ಕರೆ ಉಳಿದ ಆಕಾಂಕ್ಷಿತರಿಗೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಪೂರ್ಣಾವಧಿವರೆಗೆ ಅವರೇ ಅಧ್ಯಕ್ಷರಾಗಿರಲಿ ಎಂದು ಸದಸ್ಯರು ಸಲಹೆ ನೀಡಿದರು.ಅಲ್ಲದೆ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿರುವ 19ನೇ ವಾರ್ಡ್ ನ ಎಕ್ಬಾಲ್ ಷರೀಫ್ ಹಾಗೂ 14ನೇ ವಾರ್ಡಿನ ನಿಜಾಮುದ್ದೀನ್ ಷರೀಫ್ ತಮಗೂ ಒಮ್ಮೆ ಅವಕಾಶ ನೀಡುವಂತೆ ಸಭೆಯಲ್ಲಿ ನಾಯಕರಿಗೆ ಮನವಿ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.ನಗರಸಭೆಯಲ್ಲಿ 31 ಮಂದಿ ಸದಸ್ಯರಿದ್ದು, ಇದರಲ್ಲಿ ಕಾಂಗ್ರೆಸ್ - 19, ಜೆಡಿಎಸ್ - 11, ಪಕ್ಷೇತರ -1 ಸದಸ್ಯರು ಇದ್ದಾರೆ. ಜೆಡಿಎಸ್‌ನ ಮೂವರು ಸದಸ್ಯರು ಕಾಂಗ್ರೆಸ್‌ನತ್ತ ಮುಖ ಮಾಡಿರುವುದು ಆ ಪಕ್ಷದ ಬಲವನ್ನು ಕುಗ್ಗಿಸಿದೆ. ಈ 31 ಸದಸ್ಯರ ಜೊತೆಗೆ ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಸಂಸದ ಡಾ.ಸಿ.ಎನ್ .ಮಂಜುನಾಥ್ ಅವರು ಕೂಡ ಮತದಾನದ ಹಕ್ಕು ಹೊಂದಿದ್ದಾರೆ.ನಗರಸಭೆಯಲ್ಲಿ ಜೆಡಿಎಸ್‌ನ 3, ಪಕ್ಷೇತರ -1 ಸದಸ್ಯ, ಶಾಸಕ ಸೇರಿ ಕಾಂಗ್ರೆಸ್ ಬಲ 24ಕ್ಕೆ ಹೆಚ್ಚಳ ಗೊಂಡಂತಾಗಿದೆ. ಇನ್ನು ಬಿಜೆಪಿ ಸಂಸದ ಸೇರಿ ಜೆಡಿಎಸ್ 9 ಸದಸ್ಯರನ್ನಷ್ಟೇ ಹೊಂದಿದೆ. ಹೀಗಾಗಿ ಜೆಡಿಎಸ್ ಗದ್ದುಗೆ ಹಿಡಿಯುವ ಆಸೆಯನ್ನೇ ಬಿಟ್ಟು ಬಿಟ್ಟಿದೆ. ಅಧ್ಯಕ್ಷ - ಉಪಾಧ್ಯಕ್ಷ ಎರಡೂ ಸ್ಥಾನಗಳು ನಿರಾಂತಕವಾಗಿ ಕಾಂಗ್ರೆಸ್ ಪಾಲಾಗಲಿವೆ....ಬಾಕ್ಸ್ ...ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಆಗಸ್ಟ್ ತಿಂಗಳಲ್ಲಿಯೇ ಮೀಸಲಾತಿ ನಿಗದಿಯಾಗಿದೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮತ್ತು ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದೆ. ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ನಗರಸಭೆಯು ಮೂವರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಕಂಡಿದೆ. ಬಿ.ಸಿ. ಪಾರ್ವತಮ್ಮ, ಪವಿತ್ರ ಹಾಗೂ ವಿಜಯಕುಮಾರಿ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದರು. ಕೊನೆಯಲ್ಲಿ ಅಧ್ಯಕ್ಷೆಯಾಗಿದ್ದ ವಿಜಯಕುಮಾರಿ ಅವರ ಅವಧಿ ಮೇ ತಿಂಗಳಲ್ಲಿ ಅಂತ್ಯಗೊಂಡಿತ್ತು....ಕೋಟ್ ...
ರಾಮನಗರ ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯರ ಅಭಿಮತದಂತೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಪಕ್ಷದಲ್ಲಾಗಲಿ ಅಥವಾ ಸದಸ್ಯರಲ್ಲಾಗಲಿ ಯಾವುದೇ ಗೊಂದಲ ಇಲ್ಲ.- ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.23ಕೆಆರ್ ಎಂಎನ್ 1,2,3.ಜೆಪಿಜಿ
1.ರಾಮನಗರ ನಗರಸಭೆ2.ಕೆ.ಶೇಷಾದ್ರಿ
3.ಆಯಿಷಾ ಬಾನು