ವಿಶೇಷ ವರದಿ
ಲೋಕೋಪಯೋಗಿ ಇಲಾಖೆಯ ವಿಳಂಬ ಧೋರಣೆ ಹಾಗೂ ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಕಿಕ್‌ಬ್ಯಾಕ್ ಆರೋಪ ಸಂಬಂಧ ನಡೆದ ಜಾರಿ ನಿರ್ದೇಶನಾಲಯ(ಇ.ಡಿ)ದ ದಾಳಿ ರಾಜ್ಯಕ್ಕೆ ವರದಾನವಾಗಬೇಕಿದ್ದ ಕೆ-ಶಿಪ್ 4ರ ಅಡಿ ಕೈಗೆತ್ತಿಕೊಂಡಿದ್ದ 10 ಪ್ರಮುಖ ರಾಜ್ಯ ಹೆದ್ದಾರಿಗಳ ಸುಮಾರು 780.56 ಕಿ.ಮೀ. ರಸ್ತೆ ನಿರ್ಮಾಣ ಯೋಜನೆಗೆ ವಿಘ್ನ ತಂದೊಡ್ಡಿದೆ.
ಲೋಕೋಪಯೋಗಿ ಇಲಾಖೆಯ ವಿಳಂಬ ಧೋರಣೆಯಿಂದಾಗಿ ಈ ಮಹತ್ವದ ಯೋಜನಾ ವೆಚ್ಚ 3,000 ಕೋಟಿ ರು.ಗಳಷ್ಟು ಹೆಚ್ಚಳ ಆಗಿದೆ. ಯೋಜನಾ ವೆಚ್ಚ ಹೆಚ್ಚಾದ ಕಾರಣ ಅದನ್ನು ನಿಭಾಯಿಸಲು ಹೆಚ್ಚುವರಿ ಹಣ ಬೇಕು ಎಂದು ಸರ್ಕಾರ ಸಾಲಕ್ಕಾಗಿ ಬೇಡಿಕೆಯಿಟ್ಟರೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಹೆಚ್ಚುವರಿ ಸಾಲ ನೀಡಲು ನಿರಾಕರಿಸಿದೆ.ಇದರ ಬೆನ್ನಲ್ಲೇ ಸಚಿವ ಸತೀಶ್ ಅವರ ಮೇಲೆಯೇ ಕಿಕ್‌ಬ್ಯಾಕ್ ಆರೋಪದಡಿ ನಡೆದಿರುವ ಇ.ಡಿ ದಾಳಿ ಯೋಜನೆಯು ಈ ಸರ್ಕಾರದ ಅವಧಿಯಲ್ಲೇ ಕಾರ್ಯರೂಪಕ್ಕೆ ಬರುವ ಬಗ್ಗೆಯೇ ಅನುಮಾನ ಹುಟ್ಟುವಂತೆ ಮಾಡಿದೆ.
ಹೀಗಾಗಿ ಯೋಜನೆ ಅನುಷ್ಠಾನ ವಿಳಂಬವಾದರೆ ಮುಂದಿನ 3-4 ವರ್ಷದಲ್ಲಿ ಯೋಜನಾ ವೆಚ್ಚ ದುಪ್ಪಟ್ಟಾಗುವ ಸಾಧ್ಯತೆಯಿದೆ. ಪರಿಣಾಮ ಭಾರಿ ಹೊರೆ ಸರ್ಕಾರ ಹಾಗೂ ಸಾರ್ವಜನಿಕರ ಮೇಲೆ ಬೀಳಲಿದೆ.
ರಾಜ್ಯದ ಹತ್ತು ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿನ 780 ಕಿ.ಮೀ. ರಸ್ತೆಯನ್ನು 5,736 ಕೋಟಿ ರು.ವೆಚ್ಚದಲ್ಲಿ ನಿರ್ಮಿಸುವ ಕುರಿತು 2023ರಲ್ಲಿ ಪ್ರಾಥಮಿಕ ಯೋಜನಾ ವರದಿ (ಪಿಪಿಆರ್) ಸಲ್ಲಿಕೆಯಾಗಿತ್ತು. ಆದರೆ, ಯೋಜನೆ ವಿಳಂಬದಿಂದಾಗಿ ಯೋಜನಾ ವೆಚ್ಚ 8,703 ಕೋಟಿ ರು.ಗೆ ಹೆಚ್ಚಳವಾಗಿದ್ದು, 2,967.02 ಕೋಟಿ ರು. ಹೆಚ್ಚುವರಿ ಹೊರೆ ಉಂಟಾಗಿದೆ. ಇನ್ನು ಪರಿಷ್ಕೃತ ಯೋಜನಾ ವೆಚ್ಚವಾದ 8,703 ಕೋಟಿ ರು. ಮೇಲಿನ ಆ್ಯನುಟಿ ಮೇಲಿನ ಬಡ್ಡಿ, ಆಪರೇಷನ್ ಮತ್ತು ನಿರ್ವಹಣೆ ಸೇರಿ 10,726.03 ಕೋಟಿ ರು.ವರೆಗೆ ವೆಚ್ಚ ಉಂಟಾಗಲಿದೆ. ಪಿಪಿಆರ್ ವರದಿಯಿಂದ ಡಿಪಿಆರ್ ವರದಿ ವೇಳೆಗೆ ಯೋಜನಾ ವೆಚ್ಚ ಹೆಚ್ಚುವರಿ ಶುಲ್ಕಗಳು ಸೇರಿ ಬಹುತೇಕ ದುಪ್ಪಟ್ಟಾದಂತಾಗಿದೆ.
ಡಿಪಿಆರ್ ಬಳಿಕ ಮಳವಳ್ಳಿಯಿಂದ ಎಚ್.ಡಿ.ಕೋಟೆ ನಡುವಿನ 81.62 ಕಿ.ಮೀ. ರಾಜ್ಯ ಹೆದ್ದಾರಿ -33, ಹೊಮ್ಮರಗಲ್ಲಿಯಿಂದ ಸಂತೆಮರಹಳ್ಳಿ (ರಾ.ಹೆ.57) 69.42 ಕಿ.ಮೀ, ಮಡಿಕೇರಿಯಿಂದ ದೋಣಿಗಲ್‌ವರೆಗಿನ 93 ಕಿ.ಮೀ, ಶ್ರೀರಂಗಪಟ್ಟಣದಿಂದ ಚನ್ನರಾಯಪಟ್ಟಣದ ಬಿ.ಎಂ.ರಸ್ತೆ ಜಂಕ್ಷನ್‌ವರೆಗಿನ 66.18 ಕಿ.ಮೀ, ಮಾಗಡಿಯಿಂದ ಹುಣಸನಹಳ್ಳಿವರೆಗಿನ 96.20 ಕಿ.ಮೀ, ಚಡ್ಚನ್‌ನಿಂದ ಝಲ್ಕಿ, ಇಂಡಿ, ಅಫ್ಜಲ್‌ಪುರ ಮೂಲಕ ಗಾಣಗಪುರವರೆಗಿನ 119.50 ಕಿ.ಮೀ, ದೇವರ ಹಿಪ್ಪರಗಿಯಿಂದ ನಾರಾಯಣಪುರ ಜಲಾಶಯ ಗೇಟ್‌ವರೆಗಿನ 95 ಕಿ.ಮೀ, ಅರಬಾವಿಯಿಂದ ಲೋಕಾಪುರವರೆಗಿನ 62.59 ಕಿ.ಮೀ, ಗಿಣಿಗೇರದಿಂದ ಮುಂಡರಗಿವರೆಗಿನ 46.35 ಕಿ.ಮೀ. ಮ್ಯಾಡನೇರಿ ಕ್ರಾಸ್‌ನಿಂದ ಬೇವಿನಕಟ್ಟಿ ಕ್ರಾಸ್ ಮೂಲಕ ಕಾಟ್ರಲ ಕ್ರಾಸ್‌ವರೆಗಿನ 49.80 ಕಿ.ಮೀ. ಸೇರಿ 780 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು.
ಎಡಿಬಿಯಿಂದ 3,115 ಕೋಟಿ ರು.ಗಿಂತ ಹೆಚ್ಚು ಸಾಲವಿಲ್ಲ:
780.56 ಕಿ.ಮೀ. ಉದ್ದದ ರಸ್ತೆ ನಿರ್ಮಾಣದ ಸಿವಿಲ್ ಕಾಮಗಾರಿಗಳಿಗೆ 5,678.35 ಕೋಟಿ ರು, ಭೂಸ್ವಾಧೀನ ಪ್ರದೇಶ 1,717.93 ಎಕರೆ ಭೂಸ್ವಾಧೀನ, 999.16 ಕೋಟಿ ರು. ಭೂ ಸ್ವಾಧೀನ ವೆಚ್ಚ ಆಗಲಿದೆ. 6,678 ಕೋಟಿ ರು. ವೆಚ್ಚ ನಿರೀಕ್ಷಿಸಲಾಗಿತ್ತು.
ಇನ್ನು ಎಂಜಿನಿಯರಿಂಗ್, ಪ್ರೊಕ್ಯೂರ್‌ಮೆಂಟ್, ನಿರ್ಮಾಣ (ಇಪಿಸಿ) 2,510 ಕೋಟಿ ರು., ಆ್ಯನ್ಯುಟಿ ಮೊತ್ತ 1,891 ಕೋಟಿ ರು., ಹೀಗೆ ಒಟ್ಟು ವೆಚ್ಚ 10,726 ಕೋಟಿ ರು. ಆಗಿತ್ತು.ಸರ್ಕಾರದ ಮೇಲೆ 839 ಕೋಟಿ ರು. ಹೊರೆ:
5,736 ಕೋಟಿ ರು. ಯೋಜನಾ ವೆಚ್ಚ 8,703 ಕೋಟಿ ರು. ಆಗಿರುವುದರಿಂದ ರಾಜ್ಯ ಸರ್ಕಾರದ ಪಾಲು 2,323.81 ಕೋಟಿ ರು.ಗಳಿಂದ 3,163 ಕೋಟಿ ರು.ಗೆ ಹೆಚ್ಚಳ ಆಗಿದೆ. ಇದರಿಂದ 839 ಕೋಟಿ ರು.ಹೊರೆ ಆಗಿದ್ದು, ಪಿಪಿಪಿ ಅಡಿ ಬರುವ ಕಂಪೆನಿಗೆ 2,127 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ.